ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ ಜ. 23ರಿಂದ 28ರವರೆಗೆ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಶ್ರೀ ಯಜುಃ ಸಂಹಿತಾಯಾಗ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಬಿ.ಕೆ. ವೆಂಕಟೇಶ್ ಮೂರ್ತಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವೇದಗಳ ಸಂರಕ್ಷಣೆ, ಮುಂದಿನ ತಲೆಮಾರಿನವರಿಗೆ ಅದನ್ನು ತಲುಪಿಸುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಸಂಘಟನೆ ಈ ಧಾರ್ಮಿಕ ಮತತು ಆಧ್ಯಾತ್ಮಿಕ ಪ್ರಜ್ಞೆ ಜಾಗೃತಿಗೊಳಿಸುವ ಉದ್ದೇಶದಿಂದ ಕಳೆದ 8 ವರ್ಷಗಳಿಂದ 4 ವೇದಗಳ ಸಂಹಿತಾ ಯಾಗವನ್ನು 2 ಆವೃತ್ತಿಗಳಲ್ಲಿ ಪೂರೈಸಿದ್ದು, ಪ್ರಸ್ತುತ ಮೂರನೇ ಆವೃತ್ತಿಯ ಎರಡನೇ ವರ್ಷದ ಶ್ರೀ ಯಜುಃ ಸಂಹಿತಾಯಾಗ ನಡೆಸಲಾಗುತ್ತಿದೆ ಎಂದರು.
ಇದಕ್ಕೆ ಪೂರ್ವಭಾವಿಯಾಗಿ ಮನೆ ಮನೆಗಳಲ್ಲಿ ವೇದಪುರಾಣ ಎಂಬ ಪರಿಕಲ್ಪನೆಯೊಂದಿಗೆ ಮನೆಗಳಲ್ಲಿ ಯಜುರ್ವೇದ ಪಾರಾಯಣ ಮಾಡಿಸಲಾಗಿದೆ ಎಂದರು.
ಜ. 23ರ ಬೆಳಗ್ಗೆ 7 ಗಂಟೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಲಿದ್ದು, ಜ. 26 ರಂದು ಮಧ್ಯಾಹ್ನ 12 ಗಂಟೆಗೆ ಪಾರಾಯಣ ಕರ್ತೃಗಳಿಗೆ ಹಾಗೂ ಪಾರಾಯಣ ಮಾಡಿಸಿದ ಸೇವಾಕರ್ತೃಗಳಿಗೆ ಮತ್ತೂರಿನ ಶ್ರೀ ಅಕ್ಷರಾನಂದೇಂದ್ರ ಸರಸ್ವತಿ ಸ್ವಾಮೀಜಿಗಳ ಸಮ್ಮುಖದಲ್ಲಿ ಗೌರವ ಸಮರ್ಪಣೆ ನಡೆಯಲಿದೆ ಎಂದರು.
Also read: ಬೆಂಗಳೂರು | ನಾಟ್ಯೇಶ್ವರ ನೃತ್ಯ ಶಾಲೆಯ 17ನೇ ವಾರ್ಷಿಕೋತ್ಸವ ಸಂಪನ್ನ
ಜ. 28ರ ಬೆಳಗ್ಗೆ 11.30ಕ್ಕೆ ಸಂಹಿತಾಯಾಗದ ಮಹಾಪೂರ್ಣಾಹುತಿ ಜರುಗಲಿದ್ದು, ಹೊಸಪೇಟೆಯ ಚಿಂತಾಮಣಿ ಮಠದ ಶ್ರೀ ಶಿವಾನಂದ ಭಾರತಿ ಚಿಂತಾಮಣಿ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, 12.30ಕ್ಕೆ ಸಾಧಕರಿಗೆ ಸನ್ಮಾನಿಸಲಾಗುವುದು. ಪ್ರತಿದಿನ ಮಧ್ಯಾಹ್ನ 12 ಗಂಟೆಗೆ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗವಿದ್ದು, ಪ್ರತಿದಿನ ಸಂಜೆ 5.30ಕ್ಕೆ ಯಾಗ ಮಂಟಪದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಸಂಜೆ 6.30ರಿಂದ 7.30ರವರೆಗೆ ಉಪನ್ಯಾಸ, ನಂತರ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗವಿರುತ್ತೆ ಎಂದರು.
ಜ. 23ರಂದು ಸಂಜೆ 6.30ಕ್ಕೆ ಸಂಪೆಕಟ್ಟೆ ರಾಘವೇಂದ್ರ ಘನಪಾಠಿಗಳಿಂದ ವೇದಗಳು ಮತ್ತು ಸಂಹಿತಾಯಾದ ಮಹತ್ವ, ಜ. 24ರಂದು ಗಣೇಶಶಾಸ್ತ್ರಿ ಜಯಪುರ ಅವರಿಂದ ವಸಿಷ್ಠ ಋಷಿಗಳು ಕುರಿತು, ಜ. 25ರಂದು ರಾಜಾರಾಮ್ ಮುಂಡಿಗೇಸರ ಅವರಿಂದ ವಿಶ್ವಾಮಿತ್ರ ಮಹರ್ಷಿಗಳು ಕುರಿತು, ಜ. 26ರಂದು ಅಚ್ಯುತ ಅವಧಾನಿ ಅವರಿಂದ ಭಾರಧ್ವಾಜ ಮಹರ್ಷಿಗಳು, ಜ. 27ರಂದು ಸಂಜೆ ಹಂದಲಸು ರಾಘವೇಂದ್ರ ಭಟ್ ಅವರಿಂದ ಕಶ್ಯಪ ಮಹರ್ಷಿಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಸಿ. ನಟರಾಜ್ ಭಾಗವತ್, ಪದಾಧಿಕಾರಿಗಳಾದ ಶ್ರೀನಿವಾಸ್ ಪುರಾಣಿಕ್, ಕುಮಾರಶಾಸ್ತ್ರಿ, ಶಂಕರನಾರಾಯಣ, ಸಹನಾ ಹೆಗ್ಡೆ, ಗಿರೀಶ್, ಡಾ. ನಾಗಮಣಿ, ಎಂ.ಎಸ್. ಸೂರ್ಯನಾರಾಯಣ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post