ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಧುನಿಕತೆಯ ಆರ್ಭಟದ ಭರಾಟೆಗೆ ಸಿಕ್ಕು ಪತ್ರಿಕೋದ್ಯಮ ಬದಲಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಹೇಳಿದರು.
ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ, ಕುವೆಂಪು ವಿವಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಿಂದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಲೇಖನಿ ಹರಿತ ಎಂಬುದು ಎಲ್ಲಾ ಕಾಲಕ್ಕೂ ಸತ್ಯವಾಗುತ್ತದೆ. ಪ್ರಜಾಪ್ರಭುತ್ವದ ಕಾವಲು ನಾಯಿ ಎಂದೇ ಪತ್ರಿಕೋದ್ಯಮವನ್ನು ಪ್ರತಿಬಿಂಬಿಸಲಾಗುತ್ತದೆ. ಪತ್ರಿಕೆಗಳು ಆಡಳಿತ ಪಕ್ಷದ ಪರವಾಗಿ ಇರುವುದರ ಜೊತೆಗೆ ವಿರೋಧ ಪಕ್ಷವಾಗಿಯೂ ಇರಬೇಕಾಗುತ್ತದೆ. ಸರಿ ತಪ್ಪುಗಳನ್ನು ವಿಮರ್ಶೆ ಮಾಡಬೇಕಾಗುತ್ತದೆ. ಎಲ್ಲಾ ಹೊಸ ಬಗೆಯ ಪತ್ರಿಕೋದ್ಯಮಗಳ ನಡುವೆಯೂ ಪ್ರಿಂಟ್ ಮೀಡಿಯಾ ಎಂಬುದು ಸದಾ ಉಸಿರಾಡುತ್ತಲೇ ಇರುತ್ತದೆ ಎಂದರು.
ಪತ್ರಿಕೋದ್ಯಮಕ್ಕೆ ತನ್ನದೇ ಆದ ಇತಿಹಾಸವಿದೆ. ಅನೇಕ ಪತ್ರಕರ್ತರು ಸಮಾಜದ ಬದಲಾವಣೆ ಮಾಡಿದ್ದಾರೆ. ಅಂಕುಡೊಂಕುಗಳನ್ನು ತಿದ್ದಿದ್ದಾರೆ. ಪತ್ರಿಕೋದ್ಯಮದ ಬೇರುಗಳು ಆಳವಾಗಿ ಚಾಚಿಕೊಂಡಿವೆ. ಡಿಟಿಪಿ, ಮುದ್ರಣ, ಹಂಚಿಕೆ, ವರದಿ ಇವೆಲ್ಲವೂ ಪತ್ರಿಕೋದ್ಯಮದ ಮತ್ತೊಂದು ಭಾಗವೇ ಆಗಿವೆ. ಪತ್ರಕರ್ತ ಯಾವ ಆಮಿಷಗಳಿಗೂ ಬಲಿಯಾಗದೆ ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ DSArun ಮಾತನಾಡಿ, ಪತ್ರಿಕೋದ್ಯಮ ಎನ್ನುವುದು ಅಹಂಕಾರ ಅಲ್ಲ. ಅದೊಂದು ಸಮಾಜಮುಖಿ ಅಲಂಕಾರವಾಗಬೇಕು. ಮುಖ್ಯವಾಗಿ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು. ಆದರೆ ಮೌಲ್ಯಗಳು ಈಗ ಮರೆಯಾಗುತ್ತಿವೆ. ಟಿಆರ್‌ಪಿಯೇ ಮುಖ್ಯವಾಗಿಬಿಟ್ಟಿದೆ. ರಾಜಕೀಯ ಟ್ರೆಂಡ್ ಸೇರಿಕೊಂಡು ಒಬ್ಬ ನಾಯಕನನ್ನು ಸೃಷ್ಟಿ ಮಾಡುವ ಅಥವಾ ಅವನನ್ನು ಪಾತಾಳಕ್ಕೆ ನೂಕುವ ಕೆಲಸವನ್ನು ಪತ್ರಿಕೋದ್ಯಮ ಮಾಡಬಲ್ಲದು. ಹಾಗಾಗಿ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಡಿಟಿಪಿ ಆಪರೇಟರ್ ಶೋಭಾ, ಪ್ರಿಂಟರ್ ಹರೀಶ್, ಪತ್ರಿಕಾ ವಿತರಕ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ವಿ. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಮೇಯರ್ ಶಿವಕುಮಾರ್, ರಾಜ್ಯ ಸಮಿತಿ ನಿರ್ದೇಶಕ ರವಿಕುಮಾರ್ ಟೆಲೆಕ್ಸ್, ಉಪಾಧ್ಯಕ್ಷ ಆರ್.ಎಸ್.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ನಗರ ಕಾರ್ಯದರ್ಶಿಗಳಾದ ಕೆ.ಆರ್. ಸೋಮನಾಥ್, ದೀಪಕ್ ಸಾಗರ್, ಗಾ.ರಾ. ಶ್ರೀನಿವಾಸ್ ಸೇರಿದಂತೆ ಹಲವರಿದ್ದರು. ಸಂಘದ ಉಪಾಧ್ಯಕ್ಷ ವೈದ್ಯ ಪ್ರಾಸ್ತಾವಿಕ ಮಾತನಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post