ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಏಳು ಕೋಟಿ ಕನ್ನಡಿಗರ ಹೆಮ್ಮೆಯ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚೆಗೆ ಇದರ ಗೌರವಾನ್ವಿತ ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸುವ ಬೈಲಾ ಅಂಗೀಕರಿಸಿದ್ದು, ಅದನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಇಂದು ಕನ್ನಡ ನಾಡು ನುಡಿ ಜಾಗೃತಿ ಸಮಿತಿಯ ಪ್ರಮುಖರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕನ್ನಡ-ಕನ್ನಡಿಗ, ಕರ್ನಾಟಕದ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ನಿರಂತರವಾಗಿ ಕಳೆದ 110 ವರ್ಷಗಳಿಂದ ಕೆಲಸ ಮಾಡುತ್ತಿದೆ. ಆದರೆ ಈಚಿನ ದಿನಗಳಲ್ಲಿ ಪರಿಷತ್ತು ತನ್ನ ಘನ ಉದ್ದೇಶವನ್ನು ಮರೆತಂತೆ ಕಾಣುತ್ತಿದೆ. ಅದರಲ್ಲೂ ಈಗಿನ ಅಧ್ಯಕ್ಷರು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪರಿಷತ್ತಿನ ಘನತೆಗೆ ಧಕ್ಕೆ ಬರುವಂತೆ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಆಶಯ ಹಾಗೂ ತಾತ್ವಿಕತೆಗೆ ಧಕ್ಕೆ ತರುವ ರೀತಿಯಲ್ಲಿ ಕಳೆದ 10 ವರ್ಷದಿಂದ ಬೈಲಾ ತಿದ್ದುಪಡಿ ಆಗಿವೆ. ಪರಿಷತ್ತಿನ ಅವಧಿ ವಿಸ್ತರಣೆ, ಜನತಂತ್ರ ಮಾದರಿಯಲ್ಲಿ ಆಯ್ಕೆಯಾದ 35 ಘಟಕಗಳ ಚುನಾಯಿತ ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸುವ ದುರುದ್ದೇಶದಿಂದ 21 ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಿರುವುದು ಸೇರಿದಂತೆ ಹಲವು ತಿದ್ದುಪಡಿ ಆಗಿವೆ. ಇಂತಹ ಅಸಂವಿಧಾನಿಕ, ಸರ್ವಾಧಿಕಾರತ್ವದ ದುರುದ್ದೇಶಪೂರಿತ ಬೈಲಾ ತಿದ್ದುಪಡಿಗೆ ಯಾವುದೇ ಅವಕಾಶವನ್ನು ನೀಡಬಾರದು. ಇಂತಹ ತಿದ್ದುಪಡಿಗಳನ್ನು ಕೂಡಲೇ ಹಿಂಪಡೆಯಬೇಕು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಳೆದ ಮೂರುವರೆ ವರ್ಷದಲ್ಲಿ ಅವ್ಯವಹಾರ, ಆರ್ಥಿಕ ಅಶಿಸ್ತು ಎದ್ದುಕಾಣುತ್ತಿದೆ. ಹಾಲಿ ಅಧ್ಯಕ್ಷರು ಸಿದ್ಧಪಡಿಸಿರುವ ಹಿಂದಿನ ವರ್ಷದ ಜಮಾ ಖರ್ಚಿನ ವಿವರದಂತೆ ಅಧ್ಯಕ್ಷರು ವೇತನ 4.2 ಲಕ್ಷ ರೂ., ದಿನಭತ್ಯೆ ಬಾಬು 7.6 ಲಕ್ಷ ರೂ., ಪ್ರಯಾಣ ವೆಚ್ಚ 6.7 ಲಕ್ಷ ರೂ., ವಾಹನ ನಿರ್ವಹಣೆ ವೆಚ್ಚ93 ಸಾವಿರ ರೂ., ದಿನಪತ್ರಿಕೆ ವೆಚ್ಚ 33 ಸಾವಿರ ರೂ., ದೂರವಾಣಿ, ಜಂಗಮವಾಣಿ ವೆಚ್ಚ 43 ಸಾವಿರ ರೂ., ಇಂಧನ ವೆಚ್ಚ 18 ಸಾವಿರ ರೂ. ಸೇರಿ ವರ್ಷಕ್ಕೆ ಸುಮಾರು 22.6 ಲಕ್ಷ ರೂ. ಪಡೆದಿರುತ್ತಾರೆ. ಹಿಂದಿನ ಯಾವ ಅಧ್ಯಕ್ಷರೂ ಪಡೆಯದ ಈ ಸವಲತ್ತನ್ನು ಈ ಅಧ್ಯಕ್ಷರು ಸಾಹಿತ್ಯ ಪರಿಷತ್ತಿನ ನಿಧಿಯಿಂದ ಬಳಸಿರುತ್ತಾರೆ ಎಂದು ಆರೋಪಿಸಲಾಗಿದೆ.
ಅಲ್ಲದೇ ಪದಾಧಿಕಾರಿಗಳು ಹಾಗೂ ಅನಗತ್ಯ ಘಟಕಗಳ ಮುಖ್ಯಸ್ಥರಿಗಾಗಿ ಪ್ರತಿವರ್ಷ 19 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಜೊತೆಗೆ 2023-24ನೇ ಸಾಲಿನ ವಾರ್ಷಿಕ ವರದಿ, ಲೆಕ್ಕ ಪರಿಶೋಧಕರ ತನಿಖಾ ವರದಿಯಲ್ಲಿ ಸದಸ್ಯತ್ವ ನೋಂದಣಿ ಬಗ್ಗೆ, ಕಾಮಗಾರಿ ವೆಚ್ಚದ ಬಗ್ಗೆ, ನವೀಕರಣದ ಬಗ್ಗೆ ಲೋಪಗಳನ್ನು ಎತ್ತಿಹಿಡಿದಿದ್ದು, ಈ ಎಲ್ಲದರ ಕುರಿತು ಉನ್ನತ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
ಹಾಲಿ ಅಧ್ಯಕ್ಷರ ದೋರಣೆಯನ್ನು ಪ್ರಶ್ನಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಜಿಲ್ಲಾ ಘಟಕದ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು, ಅಜೀವ ಸದಸ್ಯರಿಗೆ ನೊಟೀಸ್ ನೀಡುವುದು, ಅವರನ್ನು ಅಮಾನತು ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ಈಗಾಗಲೇ ನೀಡಿರುವ ನೊಟೀಸ್‍ಗಳನ್ನು ಪ್ರಾಥಮಿಕ ಸದಸ್ಯತ್ವ ಅಮಾನತು ಆದೇಶಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಲಾಗಿದೆ.
ಮಂಡ್ಯ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚ ಮಾಹಿತಿ ನೀಡದ ರಾಜ್ಯಾಧ್ಯಕ್ಷರು ಮುಂಬರುವ ಬಳ್ಳಾರಿ ಸಮ್ಮೇಳನಕ್ಕೆ 40 ಕೋಟಿ ರೂ. ಅನುದಾನ ಕೇಳುತ್ತಿದ್ದಾರೆ. ಇದು ದೊಡ್ಡ ಭ್ರಷ್ಟಾಚಾರದ ಹುನ್ನಾರವಾಗಿದೆ. ಸಮ್ಮೇಳನಕ್ಕೆ ಇಷ್ಟೊಂದು ಅನುದಾನದ ಅಗತ್ಯ ಇರುವುದಿಲ್ಲ. ಸಮ್ಮೇಳನದ ವಿವಿಧ ಕಾರ್ಯ ನಿರ್ವಹಿಸಲು ಖಾಸಗಿ ವ್ಯಕ್ತಿಗಳು, ಸಂಸ್ಥೆಗಳಿಂದ ಟೆಂಡರ್ ಕರೆದು ನಿರ್ಧಾರ ಕೈಗೊಳ್ಳುವುದಕ್ಕೆ ಒತ್ತು ನೀಡಬೇಕು ಇದರಿಂದ ಆರ್ಥಿಕ ನಷ್ಟ ಹಾಗೂ ಹಣ ದುರುಪಯೋಗ ಕಡೆಯಲು ಸಾಧ್ಯ. ಇವೆಲ್ಲವೂ ಒಳಗೊಂಡಂತೆ ಸಮ್ಮೇಳನಗಳನ್ನು ನಡೆಸುವ ಸಂಬಂಧ ಶಾಶ್ವತ ಮಾರ್ಗಸೂಚಿ ರಚನೆ ಆಗುವ ವರೆಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕವನ್ನು ಘೋಷಿಸಬಾರದು ಎಂಬಿತ್ಯಾದಿ ನಿರ್ಣಯಗಳನ್ನು ಅಂಗೀಕರಿಸಲಾಗಿದೆ ಎಂದಿದ್ದಾರೆ.
ಈ ಹಿನ್ನಲೆಯಲ್ಲಿ ಕನ್ನಡ ನಾಡು ನುಡಿ ಜಾಗೃತಿ ಸಮಿತಿಯು ಶಿವಮೊಗ್ಗದಲ್ಲಿ ಕನ್ನಡಿಗರ ಜಾಗೃತಿ ಸಮಾವೇಶವನ್ನು ಆಯೋಜಿಸಿತ್ತು. ನಾಡಿನ ಹಲವು ಗಣ್ಯರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಗಿದ್ದು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಕೀಲರಾದ ಶ್ರೀಪಾಲ್, ಪತ್ರಕರ್ತ ಚಂದ್ರಶೇಖರ್, ಎಸ್.ಬಿ. ಅಶೋಕ್ ಕುಮಾರ್ ಗಾಂಧಿ ಬಸಪ್ಪ, ದೇವಾನಂದ, ಪುಟ್ಟಯ್ಯ, ಅಕ್ಷತಾ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post