ಶಿವಮೊಗ್ಗ: ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಗಣೇಶ್ ಕಾರ್ಣಿಕ್, ಪದವೀಧರರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಗೆಲುವು ಸಾಧಿಸುವುದು ನಿಶ್ಚಿತ ಎಂದು ಬಿಜೆಪಿ ಮುಖಂಡ ಎಸ್. ದತ್ತಾತ್ರಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಅನುಭವ ಇಲ್ಲದ ಹಾಗೂ ಹಲವು ಆರೋಪಗಳನ್ನು ಎದುರಿಸುತ್ತಿರುವ ವಿಧಾನಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಬೋಜೇಗೌಡರಿಗೆ ಮತ ನೀಡುವುದಕ್ಕೂ ಮೊದಲು ಪ್ರಬುದ್ದ ಮತದಾರರು ಯೋಚನೆ ಮಾಡಬೇಕು ಹೇಳಿದರು.
ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಎಸ್.ಎಲ್. ಬೋಜೇಗೌಡ ಈ ಹಿಂದೆ ನ್ಯಾಷನಲ್ ಬಾರ್ ಕೌನ್ಸಿಲ್ ಸದಸ್ಯರಾಗಿದ್ದರು, ಕಾನೂನು ಶಿಕ್ಷಣ ಸಮಿತಿ ಸದಸ್ಯರಾಗಿದ್ದರು, ಈ ಸಂದರ್ಭದಲ್ಲಿ ಕಾನೂನು ಕಾಲೇಜು ನೂತನವಾಗಿ ಪ್ರಾರಂಭಿಸಲು ಮುಂದಾಗಿದ್ದ ಸಂಸ್ಥೆಯೊಂದರಿಂದ ಲಂಚ ಕೇಳಿದ್ದ ಆರೋಪ ಇವರ ಮೇಲಿತ್ತು. ಹೀಗಾಗಿ ಬಾರ್ ಕಾನ್ಸಿಲ್ ಸದಸ್ಯತ್ವದಿಂದ ಪದಚ್ಯುತಿ ಗೊಳಿಸಲಾಗಿತ್ತು. ನಂತರ ಇವರು ನ್ಯಾಯಾಲಯದ ಮೆಟ್ಟಿಲೇರಿ ಅದಕ್ಕೆ ತಡೆಯಾಜ್ಞೆ ತಂದಿದ್ದರು ಎಂದು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲಾ ಬಾರ್ ಕೌನ್ಸಿಲ್‌ಗೆ ನಡೆದ ಈ ಹಿಂದಿನ ಚುನಾವಣೆಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಮರು ಚುನಾವಣೆ ನಡೆಸಲಾಗಿತ್ತು ಇಲ್ಲೂ ಕೂಡ ಎಸ್.ಎಲ್. ಬೋಜೇಗೌಡ ಹೆಸರು ಕೇಳಿಬಂದಿತ್ತು. ಈ ರೀತಿ ಆರೋಪಗಳನ್ನು ಹೊತ್ತಿರುವವರು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದರೆ ಶಿಕ್ಷಕರ ಗತಿಯೇನು..? ನ್ಯಾಯಾಂಗ ವ್ಯವಸ್ಥೆಗೆ ಇವರು ಅಪಮಾನ ಹಾಗೂ ಕಳಂಕ ತಂದಿದ್ದಾರೆ ಇಂತಹವರು ಚುನಾವಣೆಗೆ ಸ್ಪರ್ಧಿಸುವುದೇ ಆಶ್ಚರ್ಯ ತರಿಸುತ್ತಿದೆ ಎಂದು ಹೇಳಿದರು.
ವಿಧಾನಪರಿಷತ್‌ನ ಶಿಕ್ಷಕರ ಕ್ಷೇತ್ರ ಅತ್ಯಂತ ಪಾವಿತ್ರ್ಯತೆ ಹೊಂದಿರುವ ಕ್ಷೇತ್ರವಾಗಿದೆ. ಬುದ್ದಿಜೀವಿಗಳು ಚುನಾವಣೆಯಲ್ಲಿ ಮತ ನೀಡುವ ಸಂದರ್ಭದಲ್ಲಿ ಅಭ್ಯರ್ಥಿಯ ಹಿನ್ನೆಲೆ ಗಮನಿಸಬೇಕು. ಸೂಕ್ತ ಅಭ್ಯರ್ಥಿಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಗೋಷ್ಟಿಯಲ್ಲಿ ಪ್ರಮುಖರಾದ ಬಿಳಕಿ ಕೃಷ್ಣಮೂರ್ತಿ, ಹೆಚ್.ಸಿ.ಬಸವರಾಜಪ್ಪ, ಮಧುಸೂದನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Discussion about this post