ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರ್ಜಿ ಫೌಂಡೇಶನ್ ಹಾಗೂ ರೌಂಡ್ ಟೇಬಲ್ ವತಿಯಿಂದ ನಗರದ ಸ್ಕೌಟ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕಿಡ್ಸ್ ಕಾರ್ನಿವೆಲ್ ಕಾರ್ಯಕ್ರಮದಲ್ಲಿ ಬುದ್ಧಿಮಾಂದ್ಯರು ಹಾಗೂ ವಿಶೇಷಚೇತನರಿಂದ ವೈವಿಧ್ಯಮಯ ಕಾರ್ಯಕ್ರಮ ಜನಮನ ಸೂರೆಗೊಂಡಿತು.
ಹೌದು, ತರಂಗ ಕಿವುಡ ಮತ್ತು ಮೂಗರ ಶಾಲೆಯ ಮಕ್ಕಳು ವಿಭಿನ್ನವಾಗಿ ಭಾವಾಭಿನಯದ ಮೂಲಕ ನಡೆಸಿಕೊಟ್ಟ ರಾಷ್ಟ್ರಗೀತೆಯ ನೃತ್ಯ, ಹ್ಯಾಪಿಹೋಂ ಮಕ್ಕಳಿಂದ ಅರಳುವ ಹೂವುಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ..ಹಾಗೂ ನಿರ್ಮಲಾ ಶಾಲೆಯ ಮಕ್ಕಳಿಂದ ಗೊಂಬೆ ಹೇಳುತೈತೆ ಹಾಡಿಗೆ ಮಕ್ಕಳು ಲಯಬದ್ಧವಾಗಿ ಹೆಜ್ಜೆ ಹಾಕುತ್ತಿದ್ದರೆ, ನೆರೆದಿದ್ದ ನೂರಾರು ಮಂದಿ ಕರತಾಡನದೊಂದಿಗೆ ಮಕ್ಕಳನ್ನು ಹುರಿಸಿದುಂಬಿಸಿದರು. ನಾವು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಅಮೋಘವಾಗಿ ನೃತ್ಯ ಮಾಡುವ ಮೂಲಕ ಪ್ರೇಕ್ಷಕರ ಮನ ಗೆದ್ದರು. ಆ ಮೂಲಕ ವಿಶೇಷಚೇತನರು, ಬುದ್ಧಿಮಾಂದ್ಯ ಮಕ್ಕಳು ಹಾಡು, ನೃತ್ಯ,ವಿವಿಧ ಆಟೋಟಗಳೊಂದಿಗೆ ಭರಪೂರ ಮನರಂಜನೆ ಒದಗಿಸಿದರು.
ಹಾಡು, ಡ್ಯಾನ್ಸ್ ಟ್ಯಾಟ್ಯೂ, ಪೇಸ್ ಪೇಯಿಂಟಿಂಗ್,ಜಂಪಿಂಗ್ ಬೆಡ್, ಕಾಟನ್ ಕ್ಯಾಂಡಿ, ಚಾಕೋಲೇಟ್ ಫೌಂಟೆನ್ ಹೀಗೆ ವಿವಿಧ ಆಟೋಟಗಳಲ್ಲಿ ಪಾಲ್ಗೊಂಡು ಮನರಂಜನೆ ನೀಡಿದರಲ್ಲದೇ ವಿವಿಧ ತಿನಿಸುಗಳನ್ನು ಸವಿದು ಸಂತಸಪಟ್ಟರು.
ಸರ್ಜಿ ಇನ್‌ಸ್ಟಿಟ್ಯೂಟ್‌ನ ಬುದ್ಧಿಮಾಂದ್ಯ ಮಕ್ಕಳು, ತರಂಗ ಶಾಲೆಯ ಕಿವುಟ ಮತ್ತು ಮೂಗ ಮಕ್ಕಳು, ಹ್ಯಾಪಿ ಹೋಂನ ವಿಕಲಚೇತನರು, ಮಾದವನೆಲೆಯ ಅನಾಥ ಮಕ್ಕಳು ಹಾಗೂ ತಾಯಿ ಮನೆಯ ನೂರಾರು ಮಕ್ಕಳು ಭಾಗವಹಿಸಿದ್ದರು.
ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ, ಸ್ಕೌಟ್ ಭವನದ ಅಧ್ಯಕ್ಷ ರಮೇಶ್ ಶಾಸಿ್ತ್ರ, ಮೈಸೂರು ವಲಯ 13 ರ ಚೇರ್ಮನ್ ಎಚ್.ಎಚ್.ರಾಮ್, ನ್ಯಾಷನಲ್ ಕನ್ವಿನರ್ ಎಚ್.ಆರ್. ಅನಿಲ್ ರಾಜ್ , ನ್ಯಾಷನಲ್ ಟ್ವಿಂಕಲರ್ ಕನ್ವಿನರ್ ಸಿದ್ಧಾರ್ಥ ಶಾಸಿ್ತ್ರ ಭಾಗವಹಿಸುವರು.
ಜಿಲ್ಲಾಧಿಕಾರಿ ಶ್ಲಾಘನೆ
ಇದೇ ಸಂದರ್ಭ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರು ಮಾತನಾಡಿ, ಸರ್ಜಿ ಫೌಂಡೇಶನ್ ಹಾಗೂ ರೌಂಡ್ ಟೇಬಲ್ ಸಮಾಜಮುಖಿ ಕಾರ್ಯ ಶ್ಲಾಘನೀಯ. ಇವತ್ತು ಸಮುದಾಯದಲ್ಲಿ ಶೇಕಡ 4 ರಿಂದ 5 ಮಕ್ಕಳು ವಿಶೇಷಚೇತನ ಹಾಗೂ ವಿಕಲಚೇತನರಿದ್ದು, ಅವರನ್ನು ಸಮಾಜ ಹೇಗೆ ನೋಡಿಕೊಳ್ಳುತ್ತದೆ ಎಂಬುದು ಮುಖ್ಯ. ಅವರನ್ನು ಕಡೆಗಣಿಸುವುದು ಸಲ್ಲದು. ಅವರ ಬಗ್ಗೆ ವಿಶೇಷ ಕಾಳಜಿ ವಹಿಸಿ, ಈ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಮಾದರಿಯಾಗಿದೆ ಎಂದರು.
ಸಹಕಾರ ನೀಡಲು ಬದ್ಧ
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾತನಾಡಿ, ವಿಕಲಚೇತನರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡುವುದು ಕಡಿಮೆ. ಈ ನಿಟ್ಟಿನಲ್ಲಿ ಸಂಘಟಿತರಾಗಿ ಹಬ್ಬದ ವಾತಾವರಣ ಸೃಷ್ಟಿಸುವ ಮೂಲಕ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವುದು ಸಂತಸ ಸಂಗತಿ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಎಲ್ಲ ರೀತಿಯ ಸಹಕಾರ ನೀಡಲು ಬದ್ಧ ಎಂದರು.
ಮಕ್ಕಳಲ್ಲಿ ಹೊಸ ಭಾವನೆ
ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಮಾತನಾಡಿ, ಬುದ್ಧಿಮಾಂದ್ಯತೆ ಹಾಗೂ ವಿಶೇಷಚೇತನ ಮಕ್ಕಳಿಗಾಗಿ ಇಂತಹ ಸ್ಪರ್ಧೆಗಳಲ್ಲಿ ಏರ್ಪಡಿಸುವುದರಿಂದ ಮಕ್ಕಳಲ್ಲಿ ಹೊಸ ಭಾವನೆಗಳು ಒಡಮೂಡುತ್ತವೆ, ಆಕಾಂಕ್ಷೆಗಳು ಗರಿಗೆದರುತ್ತವೆ, ವಿಭಿನ್ನ ಆಲೋಚನೆಗಳು ಬರುತ್ತವೆ ಎಂಬುದು ಕಾರ್ಯಕ್ರಮದ ಉದ್ದೇಶ. ವಿಶೇಷಚೇತನರಿಗೆ ಅನುಕಂಪ ಬೇಡ, ಅವರನ್ನು ಕಡೆಗಣಿಸಬಾರದು. ಸಮಾಜದಲ್ಲಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಪ್ರತಿ ಕಿಡ್ಸ್ ಫಿಯೆಸ್ಟಾ ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post