ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿ ವತಿಯಿಂದ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವವನ್ನು ಫೆ. 25ರಿಂದ 29ರವರೆಗೆ ಅದ್ದೂರಿಯಾಗಿ ನಡೆಸಲು ದೇವಸ್ಥಾನ ಸಮಿತಿ ತೀರ್ಮಾನಿಸಿದೆ. ಈಗಾಗಲೆ ಸಕಲ ಸಿದ್ದತೆ ನಡೆಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮಹಾಪೌರ ಹಾಗೂ ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಕೆ. ಮರಿಯಪ್ಪ ಮಾತನಾಡಿ, ಫೆ. 25ರಂದು ಬೆಳಿಗ್ಗೆ 7 ಗಂಟೆಗೆ ಗಾಂಧಿ ಬಜಾರ್ ನಲ್ಲಿ ಶ್ರೀ ಅಮ್ಮನವರಿಗೆ ಪೂಜೆ ಆರಂಭಗೊಳ್ಳಲಿದೆ. ಅಂದು ರಾತ್ರಿ 9ಕ್ಕೆ ಗಾಂಧಿಬಜಾರ್ ನಿಂದ ಉತ್ಸವದೊಂದಿಗೆ ಗದ್ದಿಗೆ ಪ್ರವೇಶವಾಗಲಿದೆ ಎಂದು ಹೇಳಿದರು.
ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಫೆ. 26 ರಿಂದ 29ರ ವರೆಗೆ ಪ್ರತಿದಿನ ಬೆಳಗ್ಗೆ 7ರಿಂದ ಹರಕೆ, ಪೂಜೆ, ಪ್ರಸಾದ ವಿನಿಯೋಗ ಇರುತ್ತದೆ. ಫೆ 28 ರಂದು ರಾತ್ರಿ 8 ಕ್ಕೆ ಮಹಾಮಂಗಳಾರತಿ ನಡೆಯಲಿದೆ ಎಂದರು.
ಫೆ. 29ರ ರಾತ್ರಿ 8ಕ್ಕೆ ಶ್ರೀ ಅಮ್ಮನವರ ರಾಜಬೀದಿ ಉತ್ಸವದೊಂದಿಗೆ ವನ ಪ್ರವೇಶ ನಡೆಯಲಿದೆ. ಜಾತ್ರಾ ಮಹೋತ್ಸವದ ಪ್ರತಿದಿನ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಕುಸ್ತಿ ಪಂದ್ಯಾವಳಿ
ಫೆ. 28ರಿಂದ ಮಾರ್ಚ್ 1ರ ವರೆಗೆ ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ನಗರದ ನೆಹರು ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.
ಮೂರು ದಿನ ರಾಜ್ಯಮಟ್ಟದ ಬಯಲು ಕುಸ್ತಿ ನಡೆಯಲಿದೆ. ರಾಜ್ಯ ಮತ್ತು ಹೊರ ರಾಜ್ಯದ ಪ್ರಸಿದ್ಧ ಪೈಲ್ವಾನರು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕುಸ್ತಿ ಪಂದ್ಯ ಗೆದ್ದ ಪೈಲ್ವಾನರಿಗೆ ಬೆಳ್ಳಿ ಗದೆ ಮತ್ತು 25 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದರು.
ಸಕಲ ಸಿದ್ದತೆ
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಈಗಾಗಲೇ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದೇವಸ್ಥಾನ ರಸ್ತೆಯಲ್ಲಿ ಯಾವುದೇ ಮಾರಾಟಕ್ಕೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ ಎಂದರು.
ಈ ಬಾರಿ ಎರಡು ಹೆಲಿಕ್ಯಾಪ್ಟರ್ ಕರೆಸಲು ಮಾತುಕತೆ ನಡೆದಿದೆ. ಹೆಲಿಕ್ಯಾಪ್ಟರ್ ಮೂಲಕ ನಗರದಲ್ಲಿನ ದೇವಸ್ಥಾನ ಗಳಿಗೆ ಭಕ್ತರಿಗೆ ಪುಷ್ಪಾರ್ಚನೆ ಮಾಡುವುದಕ್ಕೆ ಅವಕಾಶ ಕಲ್ಪಿಸುವ ಉದ್ದೇಶವಿದೆ ಇದು ಹೇಳಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಮಾತನಾಡಿ, ಜಾತ್ರೆ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆ ಆಗಬಾರದು. ಹೀಗಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ, ಮಹಾನಗರಪಾಲಿಕೆ, ವಿವಿದ ಸಂಘ-ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬರು ಸಹಕಾರ ಕೋರಲಾಗಿದೆ ಎಂದರು.
ಜಾತ್ರೆ ಅಚ್ಚುಕಟ್ಟಾಗಿ ನೆರವೇರಲು 19 ಉಪ ಸಮಿತಿಗಳನ್ನು ರಚನೆ ಮಾಡಲಾಗಿದೆ. ಮಹಾನಗರ ಪಾಲಿಕೆಯೊಂದಿಗೆ ಸಭೆ ನಡೆಸಲಾಗಿದೆ. ಸಂಪೂರ್ಣ ಸಹಕಾರ ನೀಡುವುದಾಗಿ ಪಾಲಿಕೆಯ ಎಲ್ಲಾ ಸದಸ್ಯರು ಭರವಸೆ ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್. ಈಶ್ವರಪ್ಪನವರು ಸರ್ಕಾರದಿಂದ ಅನುದಾನ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ. ಬಂದೋಬಸ್ತ್ ಕಲ್ಪಿಸುವಂತೆ ಪೊಲೀಸ್ ಇಲಾಖೆಗೂ ಮನವಿ ಮಾಡಲಾಗಿದೆ ಎಂದರು.
ಸಿದ್ಧಗೊಳ್ಳುತ್ತಿರುವ ವಿಗ್ರಹ
ಜನವರಿ 21ರಂದು ಸಂಪ್ರದಾಯದಂತೆ ಮರ ತರಲಾಗಿದೆ. ಈಗಾಗಲೇ ಖ್ಯಾತ ಶಿಲ್ಪಿ ಶಿವಮೊಗ್ಗ ಕಾಶಿ ಅವರು ದೇವಿಯ ವಿಗ್ರಹ ಸಿದ್ಧಪಡಿಸುತ್ತಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಉಮಾಪತಿ, ಕಾರ್ಯದರ್ಶಿ ಎಸ್.ಸಿ. ಲೋಕೇಶ್, ಸಹಕಾರ್ಯದರ್ಶಿ ಟಿ.ಎಸ್. ಚಂದ್ರಶೇಖರ್, ನಿರ್ದೇಶಕರಾದ ಶ್ರೀಧರಮೂರ್ತಿ, ವಿ. ರಾಜು, ಎಸ್.ಟಿ. ವಾಸುದೇವ್, ಸುಧೀರ್, ಎಂ. ಬಾಬು ಮತ್ತಿತರರು ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post