ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೆಪಿಎಲ್ ಈಗ ಹೊಸ ಅವತರಣಿಕೆಯಲ್ಲಿ ಮಹಾರಾಜ ಟ್ರೋಫಿಯಾಗಿ Maharaja Trophy ಆ.7ರಿಂದ ಮೈಸೂರಿನಲ್ಲಿ ಪ್ರಾರಂಭವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಜಂಟಿ ಕಾರ್ಯದರ್ಶಿ ಶವೀರ್ ತಾರಾಪೂರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿ20 ಚುಟುಕು ಕ್ರಿಕೆಟ್’ನ ಹಬ್ಬ ಮೈಸೂರು ಹಾಗೂ ಬೆಂಗಳೂರಿನ ಕ್ರಿಕೆಟ್ ಗ್ರೌಂಡ್‌ಗಳಲ್ಲಿ ಪಂದ್ಯಾವಳಿ ನಡೆಯಲಿದೆ ಎಂದು ತಿಳಿಸಿದರು.
ಟೂರ್ನಿಯಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು ಮತ್ತು ಮಂಗಳೂರು ತಂಡಗಳು ಇರಲಿವೆ. ಪ್ರತಿ ತಂಡವೂ ಆಯಾ ಪ್ರದೇಶದ ಇಬ್ಬರು ಆಟಗಾರರನ್ನು ಒಳಗೊಂಡಿರ ಬೇಕಾಗಿರುವುದರಿಂದ ಶಿವಮೊಗ್ಗ ಆಟಗಾರರಿಗೆ ಮಹಾರಾಜ ಟ್ರೋಫಿಯಲ್ಲಿ ಆಡಲು ಅವಕಾಶ ಸಿಗಲಿದೆ ಎಂದರು.
Also read: ಶೃಂಗೇರಿ ಜಗದ್ಗುರುಗಳಿಗೆ ಅವಮಾನ: ಆರೋಪಿ ಮುನ್ನಾಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
ಮಹಾರಾಜ ಟ್ರೋಫಿಯಲ್ಲಿ ಟಿ20 ಟೂರ್ನಿಯು ಆ.7ರಂದು ಮೈಸೂರಿನಲ್ಲಿ ಆರಂಭವಾಗಿ ಮೊದಲ ಹಂತದ 18 ಪಂದ್ಯಗಳು ಮೈಸೂರಿನ ಶ್ರೀಕಂಠದತ್ತ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಫೈನಲ್ ಸೇರಿದಂತೆ 16 ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವುದು ಎಂದು ತಿಳಿಸಿದರು.
ಪ್ರತಿ ಪಂದ್ಯವು ಸ್ಟಾರ್ ಸ್ಟೋರ್ಟ್ಸ್ 2 ಹಾಗೂ ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ನೇರ ಪ್ರಸಾರವಾಗುವುದು. 35 ವರ್ಷದೊಳಗಿನ ಆಟಗಾರರಿಗೆ ಮಾತ್ರ ಪಂದ್ಯಾವಳಿಯಲ್ಲಿ ಆಡುವ ಅವಕಾಶವಿದೆ. ಆಟಗಾರರನ್ನು ಅಂತರ ರಾಷ್ಟ್ರೀಯ, ಐಪಿಎಲ್, ರಾಜ್ಯ ತಂಡ, ಹೊಸ ಆಟಗಾರ ಹೀಗೆ ವಿವಿಧ 4 ವಿಭಾಗದಲ್ಲಿ ಆಯ್ಕೆ ಮಾಡಿಕೊಂಡು ಅದಕ್ಕೆ ತಕ್ಕಂತೆ ತಲಾ 5 ಲಕ್ಷದಿಂದ 50 ಸಾವಿರರೂವರೆಗೆ ಆಟಗಾರರಿಗೆ ಬೆಲೆ ನಿಗದಿ ಮಾಡಲಾಗುವುದು ಎಂದರು.
ಈ ಟೂರ್ನಿಯಲ್ಲಿ ಹೆಸರಾಂತ ಕ್ರಿಕೆಟಿಗರಾದ ದೇವದತ್ತ ಪಡಿಕ್ಕಲ್, ಶ್ರೇಯಸ್ ಗೋಪಾಲ್, ಕೆ. ಗೌತಮ್, ಮನೀಶ್ ಪಾಂಡೆ, ಜೆ ಸುಚಿತ್, ಕರುಣ್ ನಾಯರ್, ಮಯಾಂಕ್ ಅಗರವಾಲ್, ಅಭಿನವ್ ಮನೋ ಹರ್, ಕೆ.ಸಿ. ಕಾರಿಯಪ್ಪ, ಪ್ರವೀಣ್ ದುಬೆ, ಅಭಿಮನ್ಯು ಮಿಥುನ್ ಆಡುವ ನಿರೀಕ್ಷೆ ಇದೆ ಎಂದರು.
ಮಹಾರಾಜ ಟ್ರೋಫಿಯನ್ನು ಹಾಗೂ ಲಾಂಛನವನ್ನು ಅನಾವರಣಗೊಳಿಸಲಾಯಿತು. ಕೆಎಸ್‌ಸಿಎ ಶಿವಮೊಗ್ಗ ಸಂಚಾಲಕ ಡಿ.ಎಸ್. ಅರುಣ್ ಮಾತನಾಡಿ, ಶಿವಮೊಗ್ಗದಲ್ಲಿ ಮಳೆ ಇದೆ. ಅಲ್ಲದೇ, ಹೊನಲು ಬೆಳಕಿನ ಸೌಲಭ್ಯ ಇಲ್ಲದಿರುವುದರಿಂದ ಇಲ್ಲಿ ಯಾವುದೇ ಪಂದ್ಯ ನಡೆಯುತ್ತಿಲ್ಲ. ಮುಂದೆ ಇಲ್ಲಿಯೂ ಹೊನಲು ಬೆಳಕಿನ ಸೌಲಭ್ಯ ಕಲ್ಪಿಸಲಾಗುವುದು. ಆಗ ಇಂತಹ ಟೂರ್ನಿಗಳ ಪಂದ್ಯಗಳು ಹಾಗೂ ಅಂತರಾಷ್ಟ್ರೀಯ ಪಂದ್ಯಗಳೂ ಸಹ ನಡೆಯಲಿವೆ ಎಂದು ತಿಳಿಸಿದರು.
ಕೆಎಸ್‌ಸಿಎಯ ಮಂಜುನಾಥ ರಾಜು, ಕೆ. ಶಶಿಧರ್, ಕುಮಾರ್ ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















