ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೇ20ರಂದು ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್ನಿನ ರಾಜ್ಯ ಉಪಾಧ್ಯಕ್ಷ ಹಾಗೂ ಎಐಟಿಯುಸಿಯ ಪ್ರಧಾನ ಕಾರ್ಯದರ್ಶಿ ಎಂ.ಮಹಾದೇವ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತಿಲ್ಲ. ಸ್ಪಂದನೆಯೂ ಇಲ್ಲ. ಈ ಹಿನ್ನಲೆಯಲ್ಲಿ ಕೆ.ಎಸ್.ಆರ್.ಟಿ.ಸಿ.ಯ KSRTC ನಾಲ್ಕು ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿವತಿಯಿಂದ ಈ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದರು.
ಸರ್ಕಾರದ ಯಾವುದೇ ಎಸ್ಮಾ ಜಾರಿಗೂ ನಾವು ಹೆದರುವುದಿಲ್ಲ. ಮೇ 20ರ ಬೆಳಿಗ್ಗೆ 6 ಗಂಟೆಯಿಂದ ಶಿವಮೊಗ್ಗ ವಿಭಾಗವೂ ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ನಿಗಮಗಳಲ್ಲೂ ನೌಕರರು ತಮ್ಮ ಕೆಲಸಗಳಿಗೆ ಹಾಜರಾಗದೆ ಬೇಡಿಕೆಗಳು ಈಡೇರುವವರೆಗೂ ಶಾಂತಿಯುತವಾಗಿಯೇ ಮುಷ್ಕರ ನಡೆಸುತ್ತೇವೆ. ಈ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವುದಕ್ಕೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ಆದರೆ ಸರ್ಕಾರ ಇನ್ನೂ ಎರಡು ದಿನ ಸಮಯವಿದೆ. ಅಷ್ಟರೊಳಗೆ ನಮ್ಮನ್ನು ಕರೆದು ಮಾತುಕತೆಯ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.
Also read: ವಿಶ್ವ ಪರಿಸರ ದಿನ | ಬೆಂಗಳೂರು ರೈಲು ನಿಲ್ದಾಣದಲ್ಲಿ ಪ್ಲಾಗಿಂಗ್ ಅಭಿಯಾನ ಯಶಸ್ವಿ
ಪ್ರಮುಖವಾಗಿ, 2020ರ ಜನವರಿ 1ರಿಂದ 2023ರ ಫೆ.28ರ ವರೆಗೆ ಶೇ.15ರಷ್ಟು ವೇತನ ಹೆಚ್ಚಿಳದ ಸಂಪೂರ್ಣ ಬಾಕಿ ಬಿಡುಗಡೆ ಮಾಡಬೇಕು. ಈಗ ಕೇವಲ 12.5ರಷ್ಟು ಬಿಡುಗಡೆ ಮಾಡುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಶೇ.25ರಷ್ಟು ಹಣವನ್ನು ಬಿಡುಗಡೆ ಮಾಡಲೇಬೇಕು. ಅಲ್ಲದೆ 2026 ಫೆಬ್ರವರಿ 18ರಂದು ಏಕಪಕ್ಷೀಯವಾಗಿ ಹೊರಡಿಸಿರುವ ಆದೇಶವನ್ನು ಸೂಕ್ತವಾಗಿ ತಿದ್ದುಪಡಿ ಮಾಡಬೇಕು. 26 ತಿಂಗಳ ಬಾಕಿ ಹಣವನ್ನು ಒಂದೇ ಕಂತಿನಲ್ಲಿ ನೀಡಬೇಕು. ಶೇ.20ರಷ್ಟು ವೇತನ ಹೆಚ್ಚಳವನ್ನು 2023 ಡಿಸೆಂಬರ್ 31ರಂದು ಚಾಲ್ತಿಯಿದ್ದ ಮೂಲವೇತನಕ್ಕೆ ಸೇರಿಸಿ, 4 ವರ್ಷಗಳ ಅವಧಿಗೆ ಜಾರಿಗೊಳಿಸಬೇಕು. ಚಾಲ್ತಿಯಲ್ಲಿರುವ ಕೈಗಾರಿಕಾ ಒಪ್ಪಂದಗಳ ಪ್ರಕಾರವೇ ಶೇ.31ರಷ್ಟು ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಿ ವೇತನಶ್ರೇಣಿ ರಚಿಸಿ ಸದರಿ ಅವಧಿಯ ಬಾಕಿ ಹಣವನ್ನು ಪಾವತಿಸಬೇಕು. ಎಂಬುದೂ ಸೇರಿದಂತೆ ನಮ್ಮ ಹಲವು ಬೇಡಿಕೆಗಳನ್ನು ಸರ್ಕಾರ ಮುಷ್ಕರಕ್ಕೇ ಮೊದಲೇ ಈಡೇರಿಸಬೇಕು ಎಂದು ಮನವಿ ಮಾಡಿದರು.
ಸಾರಿಗೆ ನೌಕರರು ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಸರ್ಕಾರದ ಸ್ತ್ರೀಶಕ್ತಿ ಯೋಜನೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಸುಮಾರು 600 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ನಮ್ಮದು ನ್ಯಾಯಯುತವಾದ ಬೇಡಿಕೆಗಳಾಗಿವೆ. ಮುಖ್ಯಮಂತ್ರಿ ಹಾಗೂ ಸಾರಿಗೆ ಮಂತ್ರಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದ್ದರೂ ಕೂಡ ವಿಳಂಬ ಧೋರಣೆ ಅನುಸರಿಸಿ ನೌಕರರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ. ಆದ್ದರಿಂದ ನಾವು ಇನ್ನೂ ಹೆಚ್ಚು ಸಮಯ ಕಾಯಲು ಸಾಧ್ಯವೇ ಇಲ್ಲ. ಮೇ20ರ ಬೆಳಿಗ್ಗೆಯಿಂದ ಅನಿರ್ಧಿಷ್ಟಾವಧಿ ಮುಷ್ಕರ ಪ್ರಾರಂಭಿಸುತ್ತೇವೆ ಎಂದು ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿಯ ಪರವಾಗಿ ಸಿಐಟಿಯುನ ವಿಭಾಗದ ಅಧ್ಯಕ್ಷ ರಾಜು ಚಿನ್ನಸ್ವಾಮಿ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಗಳ ಪ್ರಮುಖರಾದ ಪರಶುರಾಮ, ಮಂಜಪ್ಪ ಡಿ.ಎಂ., ಯೋಗೀಶ್, ಸುಬ್ರಹ್ಮಣಿ, ಧರ್ಮರಾಜ್, ಶ್ರೀನಿವಾಸ್, ಬಸವರಾಜ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















