ಕಲ್ಪ ಮೀಡಿಯಾ ಹೌಸ್
ಶಂಕರಘಟ್ಟ: ಆರ್ಥಿಕ ಸವಾಲುಗಳಿಂದಾಗಿ ಪತ್ರಿಕೆಗಳಲ್ಲಿ ಇಂದು ಪುಟಗಳು ಕಡಿಮೆಯಾಗುತ್ತಿರುವುದರಿಂದ ಸಾಂಸ್ಕೃತಿಕ ವರದಿ, ಲೇಖನಗಳಿಗೆ ಜಾಗವಿಲ್ಲದಾಗಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಲೇಖಕ ಡಾ.ಗಣೇಶ್ ಅಮೀನಗಡ ವಿಷಾದಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಮಾಧ್ಯಮ ಉಪನ್ಯಾಸ ಸರಣಿಯಲ್ಲಿ ಇಂದು ಏರ್ಪಡಿಸಿದ ಆನ್‌ಲೈನ್ ವಿಶೇಷ ಉಪನ್ಯಾಸದಲ್ಲಿ ಅವರು ಸಾಂಸ್ಕೃತಿಕ ಪತ್ರಿಕೋದ್ಯಮ ಎಂಬ ವಿಷಯ ಕುರಿತು ಮಾತನಾಡಿದರು.
ಸಾಂಸ್ಕೃತಿಕ ಪತ್ರಕರ್ತರಿಗೆ ನೋಡುವ ಕಣ್ಣು, ಕೇಳುವ ಕಿವಿ ಇದ್ದರೆ ನಡೆಯಬೇಕಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯದಿದ್ದರೂ ಅದಕ್ಕೆ ಪೂರಕ ವಿಷಯ ಹುಡುಕಿ ವರದಿ ಅಥವಾ ಲೇಖನ ಬರೆಯಬಹುದು ಎಂಬುದನ್ನು ಅವರು ಉದಾಹರಣೆಗಳ ಮೂಲಕ ವಿವರಿಸಿದರು.
ಸಾಂಸ್ಕೃತಿಕ ಪತ್ರಕರ್ತರಿಗೆ ಸಾಂಸ್ಕೃತಿಕ ಪದಗಳ ಅರಿವು ಇರಬೇಕು. ಬಳಸುವ ಪದಗಳ ಬಗ್ಗೆ ಎಚ್ಚರಿಕೆ ಇರಬೇಕು. ಸಾಹಿತ್ಯ ಸಂಸ್ಕೃತಿಯ ಪರಿಚಯವಿರಬೇಕು. ಒತ್ತಡವನ್ನು ಸಹಿಸಿಕೊಳ್ಳುವ ಗುಣವಿರಬೇಕು. ಮುಖ್ಯವಾಗಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಇರಬೇಕೆಂದು ಸಲಹೆ ನೀಡಿದ ಅವರು ಅಂತಹ ಪತ್ರಕರ್ತರ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದರು.
ಪತ್ರಕರ್ತರಾದವರು ಮತ್ತು ಆಗುವವರು ಇಂದಿನ ಮಾಧ್ಯಮ ಜಗತ್ತಿನ ಸ್ಥಿತ್ಯಂತರಗಳನ್ನು ಒಪ್ಪಿಕೊಳ್ಳಬೇಕು. ಹೆಚ್ಚೆಚ್ಚು ಪತ್ರಿಕೆಗಳು ಮತ್ತು ಪುಸ್ತಗಳನ್ನು ಓದಬೇಕು. ವಿದ್ಯಾರ್ಥಿಗಳಾಗಿದ್ದಾಗಲೇ ಆದಷ್ಟು ಜ್ಞಾನ ಮತ್ತು ಬರವಣಿಗೆಯ ಅನುಭವಗಳನ್ನು ಬೆಳೆಸಿಕೊಳ್ಳಬೇಕು. ಮಾಧ್ಯಮದ ಯಾವುದೇ ಕ್ಷೇತ್ರದಲ್ಲಿ ಪಡೆದ ಜ್ಞಾನ ಮತ್ತು ಶಿಸ್ತು ಮುಂದೆ ಯಾವುದೇ ಮಾಧ್ಯಮ ವೃತ್ತಿಗೆ ಹೋದರೂ ಆ ವೃತ್ತಿಯಲ್ಲಿ ಗಟ್ಟಿಯಾಗಿ ನಿಲ್ಲಲು ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ವಿಭಾಗದ ಮುಖ್ಯಸ್ಥರಾದ ಡಾ.ಸತೀಶ್ ಕುಮಾರ್ ಅಂಡಿಂಜೆ ಹಾಗೂ ಪ್ರಾಧ್ಯಾಪಕರಾದ ಪ್ರೊ.ಡಿ.ಎಸ್. ಪೂರ್ಣಾನಂದ ಅವರು ಈ ಸಂದರ್ಭದಲ್ಲಿ ಮಾತನಾಡಿದರು. ಪ್ರಾಧ್ಯಾಪಕರಾದ ಪ್ರೊ. ವರ್ಗೀಸ್ ಪಿ.ಎ. ಮತ್ತು ಸಹ ಪ್ರಾಧ್ಯಾಪಕರಾದ ಡಾ. ಸತ್ಯಪ್ರಕಾಶ್ ಎಂ.ಆರ್. ಉಪಸ್ಥಿತರಿದ್ದರು. ಸಂಶೋಧನಾ ವಿದ್ಯಾರ್ಥಿನಿ ಕು.ವರ್ಣಶ್ರೀ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post