ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿವಿಯಲ್ಲಿದ್ದ ಅಂಕಪಟ್ಟಿ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಅಂಕಪಟ್ಟಿಗಾಗಿ ವಿದ್ಯಾರ್ಥಿಗಳು ಇನ್ನು ಪರದಾಡಬೇಕಿಲ್ಲ. ಸಮಸ್ಯೆಯನ್ನು ಬಹುತೇಕವಾಗಿ ಬಗೆಹರಿಸಲಾಗಿದೆ. 15 ದಿನಗಳಲ್ಲಿ ಕಾಲೇಜುಗಳಲ್ಲಿ ಅಂಕಪಟ್ಟಿ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ #Prof. Sharath Ananthamurthy ಭರವಸೆ ನೀಡಿದರು.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಹಿಂದಿನ ಆಡಳಿತದ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಅದನ್ನು ನನ್ನ ಅವಧಿಯಲ್ಲಿ ಸರಿಪಡಿಸುವ ವಿಶ್ವಾಸವಿದೆ. ಅದು ಸಾಧ್ಯವಾಗದಿದ್ದರೆ ನಾನು ಕುಲಪತಿಯಾಗಿರಲು ಅರ್ಹನಲ್ಲ ಎಂದೇ ಭಾವಿಸಬೇಕಾಗುತ್ತದೆ ಎಂದು ಹೇಳಿದರು. ಕುವೆಂಪು ವಿವಿ #Kuvempu University ಮೇಲಿರುವ ಆರೋಪಗಳನ್ನು ನಾನು ನಿರಾಕರಿಸುವುದಿಲ್ಲ. ಜತೆಗೆ ದೂರು ಅಥವಾ ಆರೋಪಗಳನ್ನು ಋಣಾತ್ಮಕವಾಗಿ ತೆಗೆದುಕೊಳ್ಳುವುದಿಲ್ಲ. ಸಮಸ್ಯೆಗಳನ್ನು ಖಂಡಿತವಾಗಿಯೂ ಬಗೆಹರಿಸುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಪ್ರಸ್ತುತ ನ್ಯಾಷನಲ್ ರೀಸರ್ಚ್ ಫೌಂಡೇಶನ್‍ನ ಬ್ಯಾಂಕಿಂಗ್‍ನಲ್ಲಿ ಕುವೆಂಪು ವಿವಿ 150ನೇ ಸ್ಥಾನದಲ್ಲಿದೆ. ಎಂ.ಇಡಿಗೆ ಪ್ರವೇಶಾತಿ ಇಲ್ಲ. ಇದು ಒಂದು ವಿಭಾಗದ ಸಮಸ್ಯೆಯಲ್ಲ. ಪದವಿಯ ಎಲ್ಲ ಕೋರ್ಸ್ ಗಳ ಪ್ರವೇಶಾತಿಯೂ ಕಡಿಮೆಯಾಗಿದೆ. ಹಾಗಾಗಿ ಪದವಿ ಕೋರ್ಸ್‍ಗಳ ಬಗ್ಗೆ ಗಾಢವಾಗಿ ಯೋಚಿಸುವ ಪರಿಸ್ಥಿತಿ ಇದೆ. ಈ ಹಿಂದೆ ಭೌತಶಾಸ್ತ್ರಕ್ಕೆ ಹೆಚ್ಚಿನ ಬೇಡಿಕೆ ಇತ್ತು. ಆದರೆ ಈಗ ಭೌತಶಾಸ್ತ್ರಕ್ಕೂ ಪ್ರವೇಶಾತಿ ಕಡಿಮೆಯಾಗಿದೆ. ಎನ್‍ಇಪಿ ಸಮಸ್ಯೆಯಿಂದ ಪ್ರವೇಶಾತಿಗಳು ವಿವಿಗಳಲ್ಲಿ ಕಡಿಮೆಯಾಗಿವೆ ಎಂದ ಅವರು ವಿವಿಯಲ್ಲಿ ಆರ್ಥಿಕ ಶಕ್ತಿ ವೃದ್ಧಿಗೆ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಗ್ರೀನ್ ಎನರ್ಜಿ ಹಾಗೂ ಸೋಲಾರ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದು ಸಾಧ್ಯವಾದರೆ ಇಡೀ ದೇಶದಲ್ಲಿ ಕುವೆಂಪು ವಿವಿ ಮಾದರಿಯಾಗಲಿದೆ ಎಂದರು.
Also read: ಮಹಾಕುಂಭ 2025: ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಹೊಸ ಹೆಜ್ಜೆ !
ಪ್ರಸ್ತುತ ವಿವಿಯ ಆರ್ಥಿಕ ಶಕ್ತಿ ಕುಗ್ಗಿದೆ. ಹಾಗಾಗಿ ಸಿಎಸ್‍ಆರ್ ಅನುದಾನ ಪಡೆಯಲು ನಿರ್ಧರಿಸಲಾಗಿದೆ ಎಂದರು.
ಕುಲಸಚಿವ (ಮೌಲ್ಯಮಾಪನ) ಎಸ್.ಎಂ. ಪ್ರೊ. ಗೋಪಿನಾಥ್ ಮಾತನಾಡಿ, ಇತರೆ ವಿವಿಗಳಿಗೆ ಹೋಲಿಸಿದರೆ ಕುವೆಂಪು ವಿವಿಯಲ್ಲಿ ಎರಡೂವರೆ ತಿಂಗಳು(ಒಂದು ಸೆಮಿಸ್ಟರ್) ಹಿಂದಿತ್ತು. ಅದನ್ನು ಈಗ ಒಂದು ತಿಂಗಳಿಗೆ ಇಳಿಸಿದ್ದೇವೆ. ಹಿಂದೆಲ್ಲ 44 ದಿನ ಪರೀಕ್ಷೆ ನಡೆಯುತ್ತಿತ್ತು. ಈಗ 27 ದಿನಕ್ಕೆ ಪರೀಕ್ಷೆಗಳನ್ನು ಮುಗಿಸಲಾಗುತ್ತಿದೆ. ಉನ್ನತ ಶಿಕ್ಷಣಕ್ಕೆ ಹೋಗಲು ವಿದ್ಯಾರ್ಥಿಗಳಿಗೆ ಇದು ಅನುಕೂಲವಾಗಲಿದೆ. ತಾತ್ಕಾಲಿಕವಾಗಿ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಆದರೆ ಅವರ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆಗಳನ್ನು ಬೇಗ ನಡೆಸುವುದು ಅನಿವಾರ್ಯವಾಗಿದೆ ಎಂದರು.ನಕಲಿ ಜಾತಿ ಪ್ರಮಾಣ ಪತ್ರದ ಪಡೆದಿದ್ದ ಆರೋಪದಡಿ ಕುವೆಂಪು ವಿವಿ ಪ್ರಾಧ್ಯಾಪಕ ಎ.ಷಣ್ಮುಖ ಅವರಿಗೆ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ನೀಡಿದ್ದ ರದ್ದತಿ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಸಮಿತಿ ನೀಡಿದ್ದ ಆದೇಶ ಪ್ರಶ್ನಿಸಿ ಷಣ್ಮುಖ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅದನ್ನು ಪರಿಶೀಲಿಸಿದ ಕೋರ್ಟ್ ರದ್ದತಿ ಆದೇಶಕ್ಕೆ ತಡೆ ನೀಡಿದೆ. ಹಾಗಾಗಿ ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕುಲಸಚಿವ (ಆಡಳಿತ) ಎ.ಎಲ್.ಮಂಜುನಾಥ್ ಮಾತನಾಡಿ ಸರ್ಕಾರದಿಂದ ವಿವಿಗೆ ಯಾವುದೇ ಅನುದಾನಗಳು ಬರುತ್ತಿಲ್ಲ. ಹಾಗಾಗಿ ನವದೆಹಲಿಯ ನೀತಿ ಆಯೋಗಕ್ಕೆ 51 ಕೋಟಿ ರೂ. ಅನುದಾನ ಕೋರಿ ಪ್ರಸ್ತಾವನೆ ಸಿದ್ಧಪಡಿಸಿದ್ದು ಘಟಿಕೋತ್ಸವದ ಬಳಿಕ ನವದೆಹಲಿಗೆ ತೆರಳಿ ಸಲ್ಲಿಸಲಾಗುವುದು ಎಂದರು.
ಸಂಸದರ ನಿಧಿಯಿಂದ ಅನುದಾನ ಪಡೆಯಲು ಅವಕಾಶವಿದ್ದು, 8 ಕೋಟಿ ರೂ.ಗೆ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ನಮಗೆ ದೂರಶಿಕ್ಷಣದಿಂದ ಅನುದಾನ ದೊಡ್ಡಮಟ್ಟದಲ್ಲಿ ಬರುತ್ತಿತ್ತು. ಆದರೆ ದೂರ ಶಿಕ್ಷಣ ಸ್ಥಗಿತಗೊಂಡಿರುವ ಕಾರಣ ಅನುದಾನಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಅದನ್ನು ಮರು ಆರಂಭಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post