ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಪತ್ನಿ ಕಮಲಮ್ಮ ಅವರನ್ನು ಕೊಲೆ ಮಾಡಿ ನಗದು ದೋಚಿದ್ದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿ ಅವರಿಂದ 33,74,800 ರೂ. ನಗದು ಸೇರಿದಂತೆ 2 ಬೈಕ್, ಒಂದು ಕಾರು ಹಾಗೂ 7 ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಲ್ಲಿಕಾರ್ಜುನ್ ಅವರ ಕಾರು ಚಾಲಕನಾಗಿದ್ದ ಹುಣಸೋಡು ತಾಂಡಾದ ಹನುಮಂತನಾಯ್ಕ(22), ಗುಂಡಪ್ಪ ಶೆಡ್ನ ಪ್ರದೀಪ್ ವಿ. ಯಾನೆ ಮೊದಲಿಯಾರ್(21), ಅನುಪಿನಕಟ್ಟೆ ತಾಂಡಾದ ಅಪ್ಪುನಾಯ್ಕ ಸಿ. ಯಾನೆ ಅಪ್ಪು(21), ಗುಂಡಪ್ಪ ಶೆಡ್ನ ಸತೀಶ್ ವಿ.(26), ಅನುಪಿನಕಟ್ಟೆ ತಾಂಡಾದ ರಾಜು ವೈ. ಯಾನೆ ತೀತಾ(24) ಬಂಧಿತ ಆರೋಪಿಗಳಾಗಿದ್ದಾರೆ ಎಂದ ಅವರು, ಈ ಕೃತ್ಯಕ್ಕೆ ಕಾರು ನೀಡಿದ್ದ ಕೌಶಿಕ್ ಎಂಬ 7ನೇ ಆರೋಪಿಯನ್ನು ಕೂಡ ನಿನ್ನೆ ಬಂಧಿಸಲಾಗಿದೆ ಎಂದರು.
ಇಂಜಿನಿಯರ್ ಕೆ.ವಿ. ಮಲ್ಲಿಜಕಾರ್ಜುನ ಅವರು ತಮ್ಮ ಮಗನ ವೈದ್ಯಕೀಯ ಶಿಕ್ಷಣಕ್ಕೆ ಶುಲ್ಕ ಕಟ್ಟುವ ಸಲುವಾಗಿ 37 ಲಕ್ಷ ರೂ. ಕೈ ಸಾಲ ಪಡೆದು ಮನೆಯಲ್ಲಿ ತಂದಿಟ್ಟಿದ್ದರು. ಈ ಎಲ್ಲಾ ಹಣವನ್ನು ಚಾಲಕ ಹನುಮಂತನಾಯ್ಕ ಮೂಲಕವೇ ಸ್ನೇಹಿತರ ಬಳಿಯಿಂದ ತರಿಸಿ ಮನೆಯಲ್ಲಿಟ್ಟಿದ್ದರು. ಹೀಗಾಗಿ ಈ ಹಣ ಲಪಟಾಯಿಸುವ ಉದ್ದೇಶದಿಂದ ಹನುಮಂತನಾಯ್ಕ ಸ್ನೇಹಿತರೊಂದಿಗೆ ಸೇರಿ ತಂತ್ರ ರೂಪಿಸಿದ್ದ ಎಂದರು.
ಮಲ್ಲಿಕಾರ್ಜುನ ಅವರು ಗೋವಾಕ್ಕೆ ತೆರಳಿದ ಸಂದರ್ಭ ನೋಡಿಕೊಂಡ ಆರೋಪಿ ಹನುಮಂತನಾಯ್ಕ ತನ್ನ ಸೋದರನಿಗೆ ಅಪಘಾತವಾಗಿದ್ದು, ಆತನ ಚಿಕಿತ್ಸೆಗೆ 2 ಸಾವಿರ ಹಣ ಬೇಕೆಂದು ಜೂ.16 ರ ರಾತ್ರಿ ಮಲ್ಲಿಕಾರ್ಜುನ ಅವರ ಮನೆಗೆ ಹೋಗಿ ಕಮಲಮ್ಮನವರ ಬಳಿ ಕೇಳಿದ್ದ. ಆ ಸಂದರ್ಭದಲ್ಲಿ ಹಣ ನೀಡದೆ ಮಾರನೇ ದಿನ ಬರುವಂತೆ ಹೇಳಿದ್ದರು ಎಂದರು.
ಇದನ್ನು ತನ್ನ ಸ್ನೇಹಿತರಿಗೆ ತಿಳಿಸಿದ ಆರೋಪಿ ಹನುಮಂತನಾಯ್ಕ ಜೂ.17 ರಂದು ರೆಮ್ಯಾಟೋ ಕಂಪನಿಯ ಟೀ ಶರ್ಟ್ ಖರೀದಿಸಿ ಮೂವರೂ ಧರಿಸಿಕೊಂಡು ಮನೆಯ ಬಳಿ ಹೋಗಿ ಚಿಕಿತ್ಸೆಗೆ ಹಣ ಕೇಳಿದ್ದಾರೆ. ಕೊಡಲು ಅವರು ನಿರಾಕರಿಸಿದ್ದಾರೆ. ನೀರು ಕೊಡಲು ಕಮಲಮ್ಮ ಒಳಗೆ ಹೋಗಲು ತಿರುಗುತ್ತಿದ್ದಂತೆ ಅಪ್ಪುನಾಯ್ಕ ಹಿಂದೆಯೇ ಒಳಗೆ ಹೋಗಿ ಬಾಯಿ ಒತ್ತಿ ಹಿಡಿಯಲು ಮುಂದಾದಾಗ ಕಮಲಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಆಗ ಕಬ್ಬಿಣದ ಚೂಪಾದ ರಾಡಿನಿಂದ ಕುತ್ತಿಗೆಗೆ ಹೊಡೆದು ಸಾಯಿಸಿದ್ದಾನೆ. ಬಳಿಕ ಹಣ ತೆಗೆದುಕೊಂಡು ಎಲ್ಲರೂ ಪರಾರಿಯಾಗಿದ್ದಾಗಿ ಒಪ್ಪಿಕೊಂಡಿರುವುದಾಗಿ ಹೇಳಿದರು.
ಬಳಿಕ ಎಲ್ಲರೂ ಬೇರೆ ಬೇರೆ ಕಡೆ ತೆರಳಿದ್ದರು. ಹೋಟೆಲ್ನಲ್ಲಿ ಉಳಿದು, ಹೊಸ ಮೊಬೈಲ್ಗಳನ್ನು ಖರೀದಿ ಮಾಡಿದ್ದರು. ಇನ್ನೋರ್ವ ಕೌಶಿಕ್ ಎಂಬಾತ ಇವರಿಗೆ ಕಾರು ನೀಡಿ ಸಹಾಯ ಮಾಡಿದ್ದು, ಆತನ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ ಎಂದರು.
35ಲಕ್ಷ ರೂ.ನಲ್ಲಿ 33,74,800 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೆ ಜೊತೆಗೆ ಕೃತ್ಯಕ್ಕೆ ಬಳಸಿದ್ದ ಇಂಡಿಕಾ ಕಾರು, 7ಮೊಬೈಲ್, 3ಬೈಕ್, ಕೊಲೆ ಮಾಡಿದ ಆಯುಧ ಸೇರಿದಂತೆ ಸುಮಾರು 41,14,800 ಮೌಲ್ಯದ ಹಣ ಮತ್ತು ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.
Also read: ಭೂಗತ ಕೇಬಲ್ ಫೀಡರ್ ಪಿಲ್ಲರ್ ಬಾಕ್ಸ್ ನಲ್ಲಿ ಬೆಂಕಿ: ಆತಂಕಗೊಂಡ ಸ್ಥಳೀಯರು
ಆರೋಪಿಗಳೆಲ್ಲರೂ ಕೂಲಿ ಹಾಗೂ ಗಾರೆ ಕೆಲಸ ಮಾಡುವವರಾಗಿದ್ದಾರೆ. ಇವರೆಲ್ಲರೂ ಟೀ, ಮದ್ಯದಂಗಡಿಗಳನ್ನು ಅಡ್ಡೆಯಾಗಿ ಮಾಡಿಕೊಂಡಿದ್ದರು. ಇವರ ಪರಿಚಯ ಮಾಡಿಕೊಂಡ ಡ್ರೈವರ್ ಹನುಮಂತನಾಯ್ಕ್ ಮನೆಯಲ್ಲಿ ಹಣ ಇರುವುದು ಖಚಿತ ಇದನ್ನು ದೋಚಬೇಕು ಎಂದು ಪ್ಲಾನ್ ಮಾಡಿದ್ದರು. ಹನುಂತನಾಯ್ಕ್ ಒಂದು ವರ್ಷದಿಂದ ಇಂಜಿನಿಯರ್ ಮಲ್ಲಿಕಾರ್ಜುನಪ್ಪ ಅವರ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪ್ರತಿದಿನ ಅವರು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ. ಹಾಗಾಗಿ ಇವರ ಕುಟುಂಬಕ್ಕೆ ಹತ್ತಿರವಾಗಿದ್ದು, ಅವರ ವಿವರಗಳನ್ನು ತಿಳಿದುಕೊಂಡಿದ್ದ ಮತ್ತು ಹಣವನ್ನು ದೋಚಲು ಮುಂಚೆಯೇ ಉಪಾಯ ಮಾಡಿದ್ದ ಎಂದರು.
ದೋಚಿದ ಹಣದಲ್ಲಿ ಎಲ್ಲಾರು ಒಂದೊಂದು ಹೊಸ ಮೊಬೈಲ್ ತೆಗೆದುಕೊಂಡಿದ್ದರು. ಬೇರೆ ಬೇರೆ ಕಡೆ ಪರಾರಿಯಾಗಿ ಲಾಡ್ಜ್‌ಗಳಲ್ಲಿ ವಾಸವಾಗಿದ್ದರು. ತುಂಗಾನಗರ ಪೊಲೀಸರು ಮತ್ತು ಅಧಿಕಾರಿಗಳ ತನಿಖಾ ತಂಡ ಉತ್ತಮವಾಗಿ ಕೆಲಸ ನಿರ್ವಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಅಭಿನಂದಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜು, ತುಂಗಾನಗರ ಪೊಲೀಸ್ ಠಾಣೆಯ ಮಂಜುನಾಥ್, ಪಿಎಸ್ಐ ಕುಮಾರ್, ರಘುವೀರ್, ಸಿಬ್ಬಂದಿಗಳಾದ ಕಿರಣ್, ರಾಜು, ಅರುಣ್ಕುಮಾರ್, ಅಶೋಕ್, ಮೋಹನ್, ಕೇಶವ್ ಕುಮಾರ್, ಕಾಂತರಾಜ್, ನಾಗಪ್ಪ, ಹರೀಶ್ನಾಯ್ಕ ಮತ್ತಿತರರು ಇದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















