ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನವರಾತ್ರಿಯಲ್ಲಿ ನವಶಕ್ತಿ ಸ್ವರೂಪಿಣಿ ದೇವಿಯರನ್ನು ಪೂಜಿಸಿ ಆರಾಧಿಸುವ ಮೂಲಕ ಪರಸ್ಪರರಲ್ಲಿ ಸಂತೋಷ, ಸಂಮೃದ್ಧಿ, ಸಹನೆ, ಸಂಯಮ, ಸ್ವಾವಲಂಬನೆ, ಸದೃಢತೆ, ಸಹಿಷ್ಣುತೆ, ಸ್ನೇಹ, ಸೇವೆಯ ನವ ಮನೋಭಾವ ಬಲಿಷ್ಠಗೊಳ್ಳಬೇಕು ಆ ಮೂಲಕ ನಾವು, ನಮ್ಮ ಕುಟುಂಬ, ನಮ್ಮ ಸಮಾಜ ಸದಾ ಸಂತಸದಿಂದ ಇರಬೇಕೆಂದು ಇನ್ನರ್ ವ್ಹೀಲ್ ಕ್ಲಬ್ ಶಿವಮೊಗ್ಗದ ಮಾಜಿ ಅಧ್ಯಕ್ಷರು, ಲೇಖಕಿ ಶ್ರೀರಂಜಿನಿ ದತ್ತಾತ್ರಿ ಅಭಿಪ್ರಾಯಪಟ್ಟರು.
ಇನ್ನರ್ ವ್ಹೀಲ್ ಕ್ಲಬ್ ಶಿವಮೊಗ್ಗ ಹಾಗೂ ಇನ್ನರ್ ವ್ಹೀಲ್ ಕ್ಲಬ್ ರಿವರ್ ಸೈಡ್ ಇವರು ಜಂಟಿಯಾಗಿ ರೋಟರಿ ಯುವ ಕೇಂದ್ರದಲ್ಲಿ ಆಯೋಜಿಸಿದ್ದ ನವ ರಾತ್ರಿಯ ದಸರೆಯ ದೀಪ ಹಾಗೂ ದೀಪ ಪೂಜೆ ಮಹತ್ವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಭಾರತೀಯರಿಗೆ ಅತೀ ಸಂಭ್ರಮ ತರುವ ಹಬ್ಬ ನವರಾತ್ರಿ. ರಾತ್ರಿ ಎಂದರೆ ಬದಲಾವಣೆ. ಕಾಲರಾತ್ರಿ ಎಂದರೆ ಕಾಲದ ಪುರುಷನಲ್ಲಿ ಆಗುವ ಬದಲಾವಣೆ. ಪೃಥ್ವಿಯಲ್ಲಿ ಹಗಲು, ರಾತ್ರಿ ಸೇರಿದಂತೆ ಬಹಳಷ್ಟು ಬದಲಾವಣೆ ಆಗುತ್ತಿರುತ್ತದೆ. ಆ ಬದಲಾವಣೆಗಳನ್ನು ಸಹಿಸಿಕೊಳ್ಳುವ ಶಕ್ತಿ ನಮ್ಮ ಮನಸ್ಸಿಗೂ, ಶರೀರಕ್ಕೂ ಬರಬೇಕು ಎಂದರು.
ದೀಪವೆಂದರೆ ಪ್ರಕಾಶ, ಅರಿವು ಎಂದರ್ಥ. ಶಾಂತಿ, ಸಮೃದ್ಧಿ, ಆರೋಗ್ಯ, ಸಕಾರಾತ್ಮಕ ಭಾವನೆ ಸೇರಿದಂತೆ ಹಲವು ಅರ್ಥವನ್ನು ದೀಪ ನೀಡುತ್ತದೆ. ಕತ್ತಲು ಋಣಾತ್ಮಕ ರೂಪವಾದರೆ, ಬೆಳಕು ಧನಾತ್ಮಕ ರೂಪ. ಕತ್ತಲು ಲಯ ಭಾವವಾದರೆ, ಬೆಳಕು ಸ್ಥಿತಿ ಅಂದರೆ ಬದುಕಿನ ಗತಿಯನ್ನು ಸೂಚಿಸುತ್ತದೆ ಎಂದು ವಿವರಿಸಿದರು.
ದೀಪದ ತಳಭಾಗ ಬ್ರಹ್ಮ ದೇವರನ್ನು, ದೀಪ ಸ್ತಂಭ ವಿಷ್ಣುವನ್ನು, ದೀಪದ ಮೇಲ್ಭಾಗ ಅಂದರೆ ತುಪ್ಪ ಅಥವಾ ಎಣ್ಣೆ ಸುರಿವ ಭಾಗ ಶಿವನನ್ನು ಸೂಚಿಸಿದ್ದು, ಪ್ರಕಾಶಮಾನವಾಗಿ ಬೆಳಗುವ ಪಂಚ ಅಥವಾ ಸಪ್ತ ಬೆಳಕಿನ ಮುಖಗಳು ಪಂಚದೇವಿಯರು ಅಥವಾ ಸಪ್ತ ದೇವಿಯರ ಇರುವಿಕೆಯನ್ನು ಸೂಚಿಸುತ್ತದೆ. ಒಟ್ಟಾಗಿ ಬೆಳಗುವ ದೀಪವು ದಿವ್ಯತೆಯನ್ನು ಹೆಚ್ಚಿಸಿ, ಮನಸ್ಸನ್ನು ಅರಳಿಸಿ, ಹೊಸ ಬೆಸುಗೆಯ ಭವ್ಯತೆಗೆ ಸೆಳೆದೊಯ್ಯುತ್ತದೆ. ಈ ದಿವ್ಯತೆ ಪ್ರತಿಯೊಬ್ಬರಲ್ಲೂ ದೇದೀಪ್ಯಮಾನವಾಗಿ ಪ್ರಜ್ವಲಿಸಲಿ. ದೈನಂದಿನ ಜಂಜಡದಿಂದ ಹೊಸ ಬಾಂಧವ್ಯದೆಡೆಗೆ ನಮ್ಮೆಲ್ಲರನ್ನು ಸೆಳೆದೊಯ್ಯಲಿ. ಸ್ನೇಹ ಸೇವೆಯೆಂಬ ನಿರಂತರ ಬೆಳಕು ಸಮಾಜವನ್ನು ಮತ್ತಷ್ಟು ಬಲಪಡಿಸಲಿ ಎಂದು ಶ್ರೀರಂಜಿನಿ ದತ್ತಾತ್ರಿ ನುಡಿದರು.
ಸದಸ್ಯನಿಯರಾದ ಪ್ರಮೋದಾ ಶಾಸ್ತ್ರೀ- ನವರಾತ್ರಿಯ ಮಹತ್ವದ ಬಗ್ಗೆ, ಪ್ರಭಾ ಅಶ್ವಥ್ – ಸ್ನೇಹ ದೀಪ ಬೆಳಗುವ ಮಹತ್ವದ ಬಗ್ಗೆ, ಮೇರಿ ಡಿಸೋಜಾ – ಧರ್ಮಾತೀತವಾಗಿ ಬೆಳಗುವ ದೀಪದ ಮಹತ್ವದ ಬಗ್ಗೆ, ಉಷಾ ಕುಲಕರ್ಣಿ – ದಸರೆಯ ಬಾಂಧವ್ಯದ ಬಗ್ಗೆ, ಉಮಾದೇವಿ – ಬಾಂಧವ್ಯ ದೀಪದ ಬಗ್ಗೆ, ಸುಪ್ರಿಯಾ- ಸ್ನೇಹ ಸೇವೆ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಐಡಬ್ಲ್ಯೂಸಿ ಶಿವಮೊಗ್ಗ ಅಧ್ಯಕ್ಷರಾದ ಛಾಯಾ ವೀರಣ್ಣ ಮಾತನಾಡಿ, ಸ್ವಾರ್ಥವಿಲ್ಲದ ಪ್ರೀತಿಯ ದೀಪ ಹಿಡಿದು ಸಾಗೋಣ, ದೀಪದಿಂದ ದೀಪ ಹಚ್ಚಿ ಸಂಬಂಧಗಳ ಬೆಸುಗೆ ಹೆಚ್ಚಿಸೋಣ ಎಂದರು.
ಐಡಬ್ಲ್ಯೂಸಿ ರಿವರ್ ಸೈಡ್ ಅಧ್ಯಕ್ಷರಾದ ವಸಂತ ಬಸವರಾಜ್ ಮಾತನಾಡಿ, ಒಟ್ಟಾಗಿ ಕಲೆತು, ದೀಪ ಬೆಳಗುವುದರಲ್ಲಿ ಕಾಣುವ ತನ್ಮಯತೆ, ಸಾರ್ಥಕತೆ ವರ್ಣಿಸಲು ಅಸದಳ ಎಂದು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಾರ್ಯಕ್ರಮದ ಅಂಗವಾಗಿ ವಿಶೇಷ ದೀಪದೇವೀ ಪೂಜೆ ಕಾರ್ಯಕ್ರಮ ನಡೆಯಿತು. ಪ್ರತಿಮಾ ಡಾಕಪ್ಪ ಗೌಡ ನಿರೂಪಿಸಿ, ರಮಾಶಾಸ್ತ್ರೀ, ಉಷಾ ಕುಲಕರ್ಣಿ ಪ್ರಾರ್ಥಿಸಿದರು.ಕಾರ್ಯದರ್ಶಿ ದೀಪಾ ಚಂದ್ರನ್ ಎಲ್ಲರನ್ನೂ ಸ್ವಾಗತಿಸಿ, ಪ್ರಭಾ ಅಶ್ವಥ್ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ದಾಂಡಿಯಾ ಹಾಗೂ ಗರ್ಭಾ ನೃತ್ಯದ ವೇಷ ಭೂಷಣ ಸ್ಪರ್ಧೆ ಮತ್ತು ನೃತ್ಯ ಸ್ಪರ್ಧೆ ಏರ್ಪಡಿಸಿದ್ದು, ವಿಜೇತರಿಗೆ ಹಾಗೂ ಭಾಗವಹಿಸಿದ್ದ ಎಲ್ಲರಿಗೂ ಬಹುಮಾನ ನೀಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post