ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಹಿತಕರ ಘಟನೆಗಳು ನಿಷ್ಪಕ್ಷಪಾತವಾಗಿ ತನಿಖೆಯಾಗಲಿ ಕೋಮು ಸಂಘರ್ಷಕ್ಕೆ ಆಸ್ಪದ ಬೇಡ – ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್
ಸಾಗರದಲ್ಲಿ ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಅದರ ಮತೀಯ ಸಂಘಟನೆಗಳು ಕೋಮುಗಲಭೆಯ ಪ್ರಚೋದಿಸುವ ಪ್ರಯತ್ನವನ್ನು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಕಾನೂನು ಸುವ್ಯವಸ್ಥೆ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಜಿಲ್ಲಾವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಸುನೀಲ್ ಮೇಲಿನ ಹಲ್ಲೆ ಖಂಡನೀಯವಾದದ್ದು, ಆದರೆ ಆತನ ಮೇಲಿನ ಹಲ್ಲೆಗೆ ಹೆಣ್ಣು ಮಗಳೊಬ್ಬಳನ್ನು ಚುಡಾಯಿಸಿದ ಎಂಬ ವೈಯುಕ್ತಿಕ ಕಾರಣ ತನಿಖೆಯಿಂದ ಬಯಲಾಗಿದೆ. ಆದರೆ ಸಾರ್ವಜನಿಕರಿಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹೇಳಿಕೆಯನ್ನು ಸಂಶಯವಾಗಿದೆ ಎಂದು ಹೇಳುವ ಮೂಲಕ ಸಾಗರದ ಬಿಜೆಪಿ ಶಾಸಕರು, ಹಿಂದೂ ಸಂಘಟನೆಗಳು ಪೊಲೀಸ್ ಇಲಾಖೆಯ ನೈತಿಕ ಶಕ್ತಿಯನ್ನು ಕುಂದಿಸುವ ಪ್ರಯತ್ನ ನಡೆಸಿದ್ದಾರೆ. ಇದು ಅತ್ಯಂತ ಖಂಡನೀಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸುನೀಲ್ ಮೇಲಿನ ಹಲ್ಲೆ ಪ್ರಕರಣವನ್ನು ರಾಜಕೀಯ ಲಾಭಕ್ಕೆ ಪ್ರಯತ್ನಿಸುತ್ತಿರುವವರಿಗೆ ಪೊಲೀಸ್ ಇಲಾಖೆಯ ನಿಷ್ಪಕ್ಷಪಾತ ತನಿಖೆಯಿಂದ ಹೊರಬಿದ್ದ ಸತ್ಯ ಅಪಥ್ಯವಾಗಿದೆ. ಜಿಲ್ಲಾ ಪೋಲೀಸ್ ಇಲಾಖೆಯು ಯಾವ ರಾಜಕೀಯ ಒತ್ತಡಗಳಿಗೂ ಧೃತಿಗೆಡಬೇಕಾಗಿಲ್ಲ. ಈಗಾಗಲೇ ಕಳೆದ 3 ವರ್ಷದಿಂದ ಕೋವಿಡ್ ಹಾಗೂ ಶಿವಮೊಗ್ಗ ನಗರದಲ್ಲಿ ನಡೆದ ಕೆಲವು ಘಟನೆಗಳು ನಗರದ ಶ್ರೀ ಸಾಮಾನ್ಯ ಮದ್ಯಮವರ್ಗದ ಜನರು, ದಿನಗೂಲಿ ಕಾರ್ಮಿಕರು, ವ್ಯಾಪಾರಸ್ಥರು ಸಂಕಷ್ಟಪಡುತ್ತಿದ್ದು. ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೋಮುಸಂಘರ್ಷ ಹುಟ್ಟು ಹಾಕಿ ಶಾಂತಿ-ಸೌಹಾರ್ಧತೆಯನ್ನು ಕದಡುವ ರಾಜಕೀಯ ಪ್ರೇರಿತ ಸಂಚುಗಳು ಇನ್ನಷ್ಟು ನಡೆಯುವ ಸಾಧ್ಯತೆಗಳಿವೆ ಎಂದು ತಿಳಿಸಲಾಗಿದೆ.
ಎರಡು ಕೋಮಿನ ವ್ಯಕ್ತಿಗಳ ವೈಯುಕ್ತಿಕ ಕಾರಣ ಗಲಾಟೆಗಳಿಗೂ ಕೋಮು ದ್ವೇಷದ ಬಣ್ಣಬಳಿದು ಸಂಘರ್ಷಕ್ಕೆ ಪ್ರಚೋದನೆ ನೀಡಲು ಮತೀಯ ಸಂಘಟನೆಗಳು ಪ್ರಯತ್ನಿಸುತ್ತಿದೆ. ಯಾವುದೇ ಘಟನೆಯನ್ನು ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಜನರಿಗೆ ಸತ್ಯವನ್ನು ಮನವರಿಕೆ ಮಾಡಿಕೊಡುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯನ್ನು, ಸೌಹಾರ್ದತೆಯನ್ನು ಕಾಪಾಡಬೇಕು ಇದಕ್ಕೆ ಜಿಲ್ಲಾ ಯುವ ಕಾಂಗ್ರೇಸ್ ಸಂಪೂರ್ಣ ಬೆಂಬಲವಾಗಿ ನಿಲ್ಲಲಿದೆ ಎಂದು ತಿಳಿಸಲಾಗಿದೆ.
ಮನವಿ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ನ ಉಪಾಧ್ಯಕ್ಷ ಎನ್. ರಮೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್. ಪಿ. ಗಿರೀಶ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಎಸ್. ಕುಮಾರೇಶ್, ಪ್ರಮುಖರಾದ ಆರ್ ಕಿರಣ್, ದೇವಿ ಕುಮಾರ್, ಎಂ. ರಾಕೇಶ್, ಇರ್ಫಾನ್, ನದೀಮ್ ಮದರಿಪಾಳ್ಯ, ಮೋಹನ್ ಸೋಮಿನಕೊಪ್ಪ , ಆದಿಲ್ ಭಾಷಾ, ಮೊಹಮ್ಮದ್ ಹಯಾದ್, ಅಬ್ದುಲ್ ಅಹದ್, ಮೊಹಮ್ಮದ್ ಇನ್ಶಾಲ್, ಅಜಿತ್, ಹಾಗೂ ಯುವ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post