ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರೀ ಕುತೂಹಲ ಕೆರಳಿಸಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #K S Eshwarappa ನಾಮಪತ್ರ ಸಲ್ಲಿಸಿದ್ದಾರೆ.
ಇಂದು ಮುಂಜಾನೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಸಾಗಿದ ಈಶ್ವರಪ್ಪ ಜಿಲ್ಲಾಧಿಕಾರಿ ಕಚೇರಿ ತಲುಪಿದರು.
ತಮ್ಮ ಆಪ್ತ ಐವರು ಪ್ರಮುಖರೊಂದಿಗೆ ಜಿಲ್ಲಾ ಚುನಾವಣಾಧಿಕಾರಿಯೂ ಸಹ ಆದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಈಶ್ವರಪ್ಪ ತಮ್ಮ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 25-30 ಸಾವಿರ ಬೆಂಬಲಿಗರೊಂದಿಗೆ ಆಗಮಿಸಿ ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ ಎಂದರು.
ಇಂದು ಆಗಮಿಸಿದ ಬೆಂಬಲಿಗರು ನನಗೆ ಬಲ ನೀಡಿದ್ದು, ಗೆದ್ದು ಬನ್ನಿ ಎಂದು ಹಾರೈಸಿದ್ದಾರೆ. ನನಗೆ ಆಗಿರುವ ಅನ್ಯಾಯದ ಕುರಿತಾಗಿ ನಮ್ಮ ಕಾರ್ಯಕರ್ತರು ಪ್ರತಿ ಮನೆಮನೆಗೂ ತೆರಳಿ ಮನವರಿಕೆ ಮಾಡಿಕೊಡಲಿದ್ದಾರೆ ಎಂದರು.
ಈಶ್ವರಪ್ಪ ಯಾಕೆ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಿದ್ದಾರೆ? ಏನು ಅನ್ಯಾಯವಾಗಿದೆ? ಯಾಕೆ ಪಕ್ಷ ಒಂದೇ ಕುಟುಂಬದ ಕೈಯಲ್ಲಿದೆ ಎಂಬ ವಿಚಾರಗಳನ್ನು ಮನೆ ಮನೆಗೆ ತೆರಳಿ ನಮ್ಮ ಕಾರ್ಯಕರ್ತರು ತಿಳಿಸಲಿದ್ದಾರೆ. ನನಗೆ ಶೇ.100ರಷ್ಟು ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ.
ನನ್ನ ಸ್ಪರ್ಧೆ ಬಗ್ಗೆ ಅನುಮಾನ ವ್ಯಕ್ತಪಡಿಸಿದವರಿಗೆ ಇಂದಿನ ನಮ್ಮ ಮೆರವಣಿಗೆಯೇ ಸಾಕ್ಷಿ ಎಂದು ಸೂಕ್ಷ್ಮವಾಗಿ ಚಾಟಿ ಬೀಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post