ಶಿವಮೊಗ್ಗ: ರಾಷ್ಟ್ರದಲ್ಲಿ ಸುಮಾರು 10 ವರ್ಷಗಳಿಂದ ಲೋಕಪಾಲ್ ವಿಧೇಯಕವನ್ನು ಜಾರಿಗೆ ತರುವಂತೆ ಹೋರಾಟ ನಡೆಸುತ್ತಿರುವ ಲೋಕಪಾಲ್ ವಿಧೇಯಕ ಜಾರಿಯಾಗಿರುವುದು ಗಾಂಧಿವಾದಿ ಅಣ್ಣಾಹಜಾರೆಯವರಿಗೂ ಹಾಗೂ ರಾಷ್ಟ್ರದ ಮಹಾಜನತೆಗೆ ಸಂದ ಜಯವಾಗಿದೆ ಎಂದ ಅಣ್ಣಾ ಹಜಾರೆ ಹೋರಾಟ ವೇದಿಕೆಯ ಕಾರ್ಯದರ್ಶಿ ರವಿಕಿಶನ್ ತಿಳಿಸಿದ್ದಾರೆ.
ರಾಷ್ಟ್ರದಲ್ಲಿ ಮಿತಿಮೀರಿದ ಭ್ರಷ್ಟಾಚಾರವನ್ನು ತಡೆಯಲು ಎಲ್ಲ ವರ್ಗದ ಜನರಿಂದ ಹೋರಾಟ ಆರಂಭವಾಗಿದ್ದು, ಇದಕ್ಕೆ ಅಧಿಕಾರದಲ್ಲಿರುವ ಯಾವುದೇ ಸರ್ಕಾರಗಳು ಸ್ಪಂದಿಸದೇ ನಿರ್ಲಕ್ಷ್ಯ ಧೋರಣೆ ತಾಳಿದವು. ಆದರೆ ಅಣ್ಣಾ ಹಜಾರೆಯವರು ಮತ್ತೊಮ್ಮೆ ತಮ್ಮ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿ ಲೋಕಪಾಲ ಜಾರಿಯಾಗುವಂತೆ ಒತ್ತಾಯಿಸಿ ಸತ್ಯಾಗ್ರಹ ನಡೆಸಿದ್ದರು ಎಂದರು.
ಅದರಂತೆ ರಾಷ್ಟ್ರದಲ್ಲಿ ಲೋಕಪಾಲ ವಿಧೇಯಕ ಸಂಸತ್‌ನಲ್ಲಿ ಅಂಗೀಕರವಾಗಿ ರಾಷ್ಟ್ರಪತಿಗಳು ಸಹಿ ಹಾಕುವುದರೊಂದಿಗೆ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳನ್ನು ಇದಕ್ಕಾಗಿಯೇ ನೇಮಿಸಿರುವುದು ಸ್ವಾಗತಾರ್ಹವಾಗಿದೆ ಎಂದರು.
ಇನ್ನು ಮುಂದಾದರೂ ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿ ತಮ್ಮ ವೈಯುಕ್ತಿಕ ಸಂಪತ್ತನ್ನು ಹೆಚ್ಚಿಸಿಕೊಂಡರೆ ಅದರ ಬಗ್ಗೆ ದೂರು ನೀಡಿ ನ್ಯಾಯಯುತವಾಗಿ ಸೂಕ್ತ ತನಿಖೆ ನಡೆಸಿ ಶಿಕ್ಷೆಯಾಗುವಂತೆ ಮಾಡುವುದರಲ್ಲಿ ಸಂದೇಹವಿಲ್ಲವಾಗಿದೆ. ಇದು ಇಡೀ ದೇಶದ ಜನತೆಗೆ ಸಂದ ಜಯವಾಗಿದೆ ಎಂದು ರವಿಕಿಶನ್ ತಿಳಿಸಿದ್ದಾರೆ.
(ವರದಿ: ಡಾ.ಸುಧೀಂದ್ರ)
Discussion about this post