ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಭಾಗವಾಗಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ನೇತೃತ್ವದಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುರಲೆ ಸಿದ್ದೇಶ್ವರ ಸಮುದಾಯ ಭವನದಲ್ಲಿ ಅ.23ರಂದು ಸಂಜೆ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಿಮ್ಮ ಗ್ರಾಮಗಳಲ್ಲಿ ಹಾಗೂ ನಿಮ್ಮ ಸುತ್ತಮುತ್ತ ಯಾವುದೇ ಕಾನೂನು ಬಾಹಿರ ಕೃತ್ಯಗಳು ನಡೆಯುತ್ತಿದ್ದಲ್ಲಿ, ಅಂತಹ ವಿಚಾರಗಳನ್ನು ಪೊಲೀಸ್ ಇಲಾಖೆಯ ಗಮನಕ್ಕೆ ತರುವುದು ನಿಮ್ಮ ಪ್ರಾಥಮಿಕ ಜವಾಬ್ದಾರಿಯಾಗಿರುತ್ತದೆ. ಈ ಕುರಿತು ನೀವು ಹತ್ತಿರದ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ 112ಗೆ ಕರೆಮಾಡಿ ಮಾಹಿತಿ ನೀಡಬಹುದಾಗಿರುತ್ತದೆ. ಮಾಹಿತಿ ನೀಡಿದವರ ವಿವರವನ್ನು ಪೊಲೀಸ್ ಇಲಾಖೆಯು ಗೌಪ್ಯವಾಗಿ ಇರಿಸುತ್ತದೆ.

ಈ ವ್ಯಾಪ್ತಿಗೆ ಒಳಪಡುವ ಹಲವು ಗ್ರಾಮಗಳಲ್ಲಿ ಹೆದ್ದಾರಿಯೂ ಹಾದು ಹೋಗಿದ್ದು, ವಾಹನಗಳ ದಟ್ಟಣೆಯು ಹೆಚ್ಚಿರುತ್ತದೆ ಹಾಗೂ ಕೆಲವು ಬಾರಿ ಪಾದಚಾರಿಗಳ ನಿರ್ಲಕ್ಷತನದಿಂದಲೂ ಸಹ ಹಾಗೂ ರಸ್ತೆ ದಾಟುವಾಗ ರಸ್ತೆಯ ಎರಡು ಬದಿ ನೋಡದೆ ರಸ್ತೆದಾಟಲು ಮುಂದಾದಾಗಲೂ ಕೂಡ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸೂಚನಾ ಫಲಕ ಹಾಗೂ ರಸ್ತೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತದೆ ಎಂದರು.
ಸಂಚಾರ ಸುರಕ್ಷತೆಯ ಸಂಬಂಧ ಕೈಗೊಳ್ಳಲಾಗುವ ಎಲ್ಲಾ ಮುನ್ನೆಚ್ಚರಿಕಾ ಕಾರ್ಯಕ್ರಮಗಳು ಹಾಗೂ ಅಳವಡಿಸಲಾಗುವ ಉಪಕರಣಗಳಿಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ನ ಅಧಿಕಾರಿಗಳು ಸ್ಥಳ ಭೇಟಿ ನೀಡಿ ಪರಿಶೀಲನೆ ನಡೆಸಿ, ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದೆಂದು ಚರ್ಚಿಸಿ ಸಾರ್ವಜನಿಕರ ಹಿತದೃಷ್ಟಿಯಲ್ಲಿ ಅವಶ್ಯಕ ಮತ್ತು ಅಗತ್ಯವೆನಿಸುವಂತಹ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಹೆದ್ದಾರಿ ಪ್ರಾದಿಕಾರ, ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಸೇರಿ ಗ್ರಾಮಗಳಲ್ಲಿ ಹಾದು ಹೋಗಿರುವಂತಹ ರಸ್ತೆಯನ್ನು ಪುನಃ ಪರಿಶೀಲಿಸಿ ಅವಶ್ಯಕತೆಗಳಲ್ಲಿ ಕ್ಯಾಟ್ ಐಸ್, ರಿಫ್ಲೆಕ್ಟರ್ಸ್, ಬ್ಲಿಂಕರ್ಸ್, ಸೂಚನಾ ಫಲಕಗಳನ್ನು ಅಳವಡಿಸಲು ಸೂಕ್ತಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ರಸ್ತೆಗಳು ಬಂದು ಸೇರುವ ಕಡೆ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಮುಂಜಾಗ್ರತಾ ಹಾಗೂ ಸೂಚನಾ ಫಲಕಗಳನ್ನು ಅಳವಡಿಸುವುದರಿಂದ ರಸ್ತೆ ಅಪಘಾತಗಳನ್ನು ಬಹುತೇಕ ಕಡಿಮೆ ಮಾಡಲು ಸಾಧ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಕ್ರಮ ಕೈಗೊಳ್ಳಲಿದೆ. ಯಾವುದೇ ಅಪರಾಧಗಳು ಜರುಗದಂತೆ ತಡೆಯಲು ಹಾಗೂ ಒಂದು ವೇಳೆ ಯಾವುದೇ ರೀತಿಯ ಅಪರಾಧ ಕೃತ್ಯಗಳು ಜರುಗಿದಲ್ಲಿ ಕೂಡಲೇ ಪತ್ತೆ ಹಚ್ಚುವ ಸಂಬಂಧ ಸಾರ್ವಜನಿಕರು ತಮ್ಮ ಅಂಗಡಿ ಮುಂಗಟ್ಟು ಹಾಗೂ ಮನೆಗಳಲ್ಲಿ ರಸ್ತೆ ಕಾಣುವ ರೀತಿಯಲ್ಲಿ, ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್ ಗಳಿಗೆ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ ವಿರುತ್ತದೆ. ಹಾಗೂ ನೀವುಗಳು ನಿಮ್ಮ ಗ್ರಾಮದ ಸೂಕ್ಷ್ಮ ಮತ್ತು ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಗಳನ್ನು ನಿಮ್ಮ ಹಂತದಲ್ಲಿ ಅಳವಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಈ ಕಾರ್ಯದಲ್ಲಿ ಪೊಲೀಸ್ ಇಲಾಖೆಯು ನಿಮ್ಮೊಂದಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ.

ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆಯು ನಿರಂತರವಾಗಿ ಕೈಗೊಳ್ಳುತ್ತಿದ್ದು, ಮುಗ್ಧ ಜನರಿಗೆ ಹಾಗೂ ಸಹಾಯ ಅವಶ್ಯಕ ಇರುವಂತಹ ಜನರಿಗೆ ಮಾಹಿತಿಯನ್ನು ತಿಳಿಸಿಕೊಡುವ ಜವಾಬ್ದಾರಿಯು ಪೋಲಿಸ್ ಇಲಾಖೆಯ ಜೊತೆ ಜೊತೆಗೆ ತಿಳಿದಂತಹ ನಿಮ್ಮ ಹಾಗೂ ಪೋಷಕರ ಮೇಲೂ ಸಹ ಇರುತ್ತದೆ.
ನಿಮ್ಮ ಸುತ್ತಮುತ್ತಲು ಯಾವುದೇ ಮುಗ್ಧ ಜನರಿಗೆ ಅಥವಾ ಅಸಹಾಯಕ ಜನರಿಗೆ ಅಥವಾ ಹೆಣ್ಣು ಮಕ್ಕಳಿಗೆ ಯಾರೇ ಆಗಲಿ ತೊಂದರೆ ಕಿರುಕುಳ ಉಪಟಳ ನೀಡುತ್ತಿರುವಂತಹ ಪ್ರಸಂಗಗಳು ಕಂಡು ಬಂದಲ್ಲಿ, ಈ ವಿಚಾರವು ನಮಗೆ ಸಂಬಂಧಪಟ್ಟದ್ದಲ್ಲ ಎಂದು ಸುಮ್ಮನಿರಬೇಡಿ, ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ, ಮುಗ್ಧ ಜನರ ರಕ್ಷಣೆಯು ನಮ್ಮೆಲ್ಲರ ಹೊಣೆಗಾರಿಕೆ ಆಗಿರುತ್ತದೆ. ನಾವೆಲ್ಲರೂ ಜಾಗರೂಕರಾದಾಗ ಮಾತ್ರವೇ ಒಂದು ಸದೃಢ ಹಾಗೂ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿರುತ್ತದೆ.
ಸಮಾಜ ಮತ್ತು ಪೊಲೀಸ್ ಇಲಾಖೆಯ ನಡುವೆ ಇರುವಂತಹ ಭಿನ್ನಾಭಿಪ್ರಾಯಗಳನ್ನು ದೂರ ಮಾಡಲು ಪೊಲೀಸ್ ಇಲಾಖೆಯ ಎಲ್ಲಾ ಹಂತದ ಅಧಿಕಾರಿ ಹಾಗೂ ಸಿಬ್ಬಂದಿಗಳು ನಿರಂತರವಾಗಿ ಶ್ರಮವಹಿಸುತ್ತಾ ದುಡಿಯುತ್ತಿದ್ದಾರೆ. ನಾವೆಲ್ಲರೂ ಒಂದಾಗಿ ಮುನ್ನಡೆದಾಗ ಮಾತ್ರ ಅಪರಾಧ ಮುಕ್ತ ಸಮಾಜ ನಿರ್ಮಿಸಲು ಸಾಧ್ಯವಿರುತ್ತದೆ.
ನ್ಯಾಯ ಪಡೆಯುವಂತಹದ್ದು ಎಲ್ಲಾ ಸಾರ್ವಜನಿಕರ ಹಕ್ಕಾಗಿರುತ್ತದೆ. ನೀವುಗಳು ಯಾವುದೇ ಹಿಂಜರಿಕೆ ಇಲ್ಲದೆ ಮುಂದೆ ಬಂದಾಗ ಮಾತ್ರ ನಿಮಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುತ್ತದೆ. ಆದ್ದರಿಂದ ಯಾವುದೇ ಹಿಂಜರಿಕೆ ಇಲ್ಲದೆ, ಪೋಲಿಸ್ ಇಲಾಖೆಯೊಂದಿಗೆ ಕೈಜೋಡಿಸುವಂತೆ ಅವರು ವಿನಂತಿಸಿದರು.
ಮನೆ ಮನೆಗೆ ಪೊಲೀಸ್ ಎಂಬುದು ಘನ ಕರ್ನಾಟಕ ರಾಜ್ಯ ಸರ್ಕಾರದ ಒಂದು ಮುಖ್ಯವಾದ ಯೋಜನೆಯಾಗಿರುತ್ತದೆ. ಈ ಹಿಂದೆ ಗ್ರಾಮಗಳನ್ನು ಬೀಟ್ ಗಳೆಂದು ವಿಂಗಡಿಸಿಕೊಂಡು, ಬೀಟ್ ವ್ಯವಸ್ಥೆಯ ಮುಖಾಂತರವಾಗಿ ಸಾರ್ವಜನಿಕರ ಸಮಸ್ಯೆಯನ್ನು ಬಗೆಹರಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗುತ್ತಿತ್ತು. ಆದರೆ ಈಗ ಮುಂದುವರೆದು ಪ್ರತಿ ಸಾರ್ವಜನಿಕರ ಮನೆ ಮನೆಗೆ ಪೊಲೀಸ್ ಇಲಾಖೆಯು ತಲುಪಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳುತ್ತದೆ.
ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಭಾಗವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ನಿಮ್ಮ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಮನೆಗಳಿಗೆ ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆ ಕಾಣಾಧಿಕಾರಿಗಳು ಬೀಟ್ ಸಿಬ್ಬಂದಿಗಳು ಅವರ ಹೆಸರುಗಳು ಮತ್ತು ಫೋನ್ ನಂಬರ್, ಸೈಬರ್ ಸಹಾಯವಾಣಿ ಮಕ್ಕಳ ಸಹಾಯವಾಣಿ ತುರ್ತು ಸಹಾಯವಾಣಿ ಹಾಗೂ ಪೋಲಿಸ್ ಉಪ ವಿಭಾಗಾಧಿಕಾರಿಗಳ ಫೋನ್ ನಂಬರ್ ಗಳನ್ನು ಒಳಗೊಂಡ ವಿವರವನ್ನು ಮುದ್ರಿಸಿರುವ ಸ್ಟಿಕ್ಕರ್‌ಗಳನ್ನು ಅಂಟಿಸುತ್ತಾರೆ.
ಮಾಹಿತಿಯನ್ನು ಮುದ್ರಿಸಿರುವ ಸ್ಟಿಕರ್‌ಗಳನ್ನು ಸೂಕ್ತವೆನಿಸಿದ ಜಾಗದಲ್ಲಿ ನೀವೇ ಅಂಟಿಸಿ ಹಾಗೂ ಸದರಿ ಸ್ಟಿಕರ್ ಗಳನ್ನು ಯಾವುದೇ ಕಾರಣಕ್ಕೂ ಕಿತ್ತು ಹಾಕಬೇಡಿ, ಯಾವುದೋ ತುರ್ತು ಸಂದರ್ಭದಲ್ಲಿ ಇವು ನಿಮ್ಮ ಸಹಾಯಕ್ಕೆ ಬರುತ್ತವೆ. ಪೊಲೀಸ್ ಇಲಾಖೆಯು ಸದಾ ನಿಮ್ಮ ಸೇವೆಗೆ ಸಿದ್ದರಿದ್ದು ನಿಮಗೆ ಅವಶ್ಯಕತೆ ಇರುವಂತಹ ಎಲ್ಲಾ ರೀತಿಯ ಸಹಕಾರವನ್ನು ಕಾನೂನಿನ ಚೌಕಟ್ಟಿಗೆ ಒಳಪಟ್ಟು ನೀಡಲಿದೆ ಎಂದರು.
ನಂತರ ಪೊಲೀಸ್ ಅಧಿಕ್ಷಕರು ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಸಾರ್ವಜನಿಕರ ಮನೆಗಳಿಗೆ ಭೇಟಿ ನೀಡಿ ಅವರುಗಳ ಸಮಸ್ಯೆಗಳನ್ನು ಆಲಿಸಿ, ಮನೆ ಮನೆಗೆ ಪೋಲಿಸ್ ಸ್ಟಿಕರ್ ಗಳನ್ನು ಅಳವಡಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎ.ಜಿ. ಕಾರ್ಯಪ್ಪ, ಡಿವೈಎಸ್‌ಪಿ ಸಂಜೀವ್ ಕುಮಾರ್, ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕ ಸತ್ಯನಾರಾಯಣ, ಹಾಗೂ ಪುರಲೆ, ಚಿಕ್ಕಲ್, ಗುರುಪುರ, ಸಿದ್ದೇಶ್ವರ ನಗರ, ವೆಂಕಟೇಶ ನಗರ, ಹೊಳೆಬೆನವಳ್ಳಿ ಗ್ರಾಮಗಳ ಮುಖಂಡರುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post