ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದಲ್ಲಿ ಚಾರ್ಟರ್ಡ್ ಅಕೌಂಟ್ಸ್ #Chartered Accounts ಕೋರ್ಸ್ ವಿದ್ಯಾರ್ಥಿಗಳಿಗಾಗಿ ಮಹತ್ವದ ಸೌಲಭ್ಯ ಒದಗಿಸುವ ಉದ್ದೇಶದಿಂದ ಗಾಂಧಿನಗರದ ಎ.ಎನ್.ಕೆ. ರಸ್ತೆಯ 3ನೇ ತಿರುವಿನಲ್ಲಿರುವ ಕಟ್ಟಡದಲ್ಲಿ ಐಸಿಎಐ ರೀಡಿಂಗ್ ರೂಂನ್ನು ನಾಳೆ ಮಾ.26ರ ಅನುಕೂಲಕ್ಕಾಗಿ ಸಮರ್ಪಿಸಲಾಗುತ್ತಿದೆ ಎಂದು ಶಿವಮೊಗ್ಗ ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಷನ್‍ನ ಸಿಎ ಸೃಜನ್ ಜೆ. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚಾರ್ಟರ್ಡ್ ಅಕೌಂಟೆಂಟ್ಸ್ ಕೋರ್ಸ್ ಜಾಗತಿಕವಾಗಿ ಗುರುತಿಸಲ್ಪಟ್ಟು ಅತೀ ಹೆಚ್ಚು ಬೇಡಿಕೆ ಇರುವ ವೃತ್ತಿಪರ ಕೋರ್ಸ್ ಆಗಿದೆ. ಇದರಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಉತ್ತಮ ಸ್ಥಾನಮಾನ ವೃತ್ತಿ ಮತ್ತು ಉದ್ಯೋಗದ ಅವಕಾಶವಿರುತ್ತದೆ. ಶಿವಮೊಗ್ಗದಲ್ಲಿ 2016 ರಿಂದ ಸಿಎ ಪರೀಕ್ಷಾ ಕೇಂದ್ರವಿದೆ. ಈ ಪರೀಕ್ಷೆಯಲ್ಲಿ ತೇರ್ಗಡೆ ಪಡೆಯಲು ನಿರಂತರ, ನಿಯೋಜಿತ ಮತ್ತು ಗಂಭೀರ ಅಧ್ಯಯನದ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನವದೆಹಲಿಯ ಭಾರತೀಯ ಸನ್ನದು ಲೆಕ್ಕಪರಿಶೋಧಕರ ಸಂಸ್ಥೆ ವತಿಯಿಂದ ಶಿವಮೊಗ್ಗದಲ್ಲಿ ಸಿಎ ವಿದ್ಯಾರ್ಥಿಗಳಿಗೆ ಓದುವ ಅನುಕೂಲಕ್ಕಾಗಿ ಸುಸಜ್ಜಿತ ವಾಚನಾಲಯದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಈ ವಾಚನಾಲಯದಲ್ಲಿ ವಿದ್ಯಾರ್ಥಿಗಳು ಪ್ರತಿದಿನ ಬೆಳಿಗ್ಗೆ 8 ರಿಂದ ರಾತ್ರಿ 8ರವರೆಗೆ ವಾರದ 7 ದಿನಗಳೂ ಬಳಸಿಕೊಳ್ಳಬಹುದಾಗಿದೆ. ಈ ವಾಚನಾಲಯದಲ್ಲಿ ಸುಸಜ್ಜಿತ ಟೇಬಲ್ ಮತ್ತು ಕುರ್ಚಿ, ಹವಾನಿಯಂತ್ರಿತ ವ್ಯವಸ್ಥೆ, 24ಘಿ7 ಯುಪಿಎಸ್ ವ್ಯವಸ್ಥೆ, ಸಿಸಿ ಕ್ಯಾಮರಾ ನಿಗಾ, ವೈಫೈ ಸೌಲಭ್ಯ, ಗುಂಪು ಚರ್ಚೆಗೆ ಬೋರ್ಡ್ ರೂಂ, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ನಿರ್ವಹಣೆಗೆ ಸಮರ್ಪಿತ ಸಿಬ್ಬಂದಿಗಳೊಂದಿಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿದ್ಧವಾಗಿದೆ ಎಂದರು.
ಈ ಯೋಜನೆಯ ಒಟ್ಟು ವೆಚ್ಚ 22.50 ಲಕ್ಷ ಗಳಾಗಿದ್ದು, ಇದರಲ್ಲಿ ಐಸಿಎಐ ವತಿಯಿಂದ 12.50 ಲಕ್ಷ ರೂ.ಮಂಜೂರಾಗಿದೆ. ಉಳಿದ 10 ಲಕ್ಷ ರೂ.ಗಳನ್ನು ಶಿವಮೊಗ್ಗ ಜಿಲ್ಲಾ ಸನ್ನದು ಲೆಕ್ಕಪರಿಶೋಧಕರ ಸಂಘದ ಸದಸ್ಯರು ನೀಡಿದ್ದು, ಈ ಯೋಜನೆಯ ನೇತೃತ್ವವನ್ನು ಸಿಬಿಎ ಚಾಪ್ಟರ್ ಆಫ್ ಎಸ್‍ಐಆರ್‍ಸಿ ಮತ್ತು ಐಸಿಎಐ ಶಿವಮೊಗ್ಗ ಇವರು ಉಡುಪಿ ಐಸಿಎಐ ಶಾಖೆಯ ಸಹಕಾರದೊಂದಿಗೆ ಪೂರ್ಣಗೊಳಿಸಿದ್ದಾರೆ. ಈ ಸೌಲಭ್ಯವು ಐಸಿಎಐ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದೆ. ನೋಂದಣಿ ಸಂಖ್ಯೆ ಹೊಂದಿರುವ ಅಭ್ಯರ್ಥಿಗಳು ಇದರ ಸೌಲಭ್ಯ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳು ಈ ಸೌಲಭ್ಯಕ್ಕಾಗಿ ಪ್ರತೀ ತಿಂಗಳು 200 ರೂ. ಶುಲ್ಕ ನಿಗಧಿಪಡಿಸಲಾಗಿದೆ ಎಂದರು.
ಆಸಕ್ತ ವಿದ್ಯಾರ್ಥಿಗಳು ಸೃಜನ್ ಜೆ.-7815069037, ಮಹೇಂದ್ರ 9482021074 ಹಾಗೂ ಸುಮಂತ್-7259897970 ಇವರನ್ನು ಸಂಪರ್ಕಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ಸ್‍ಗಳಾದ ಕೆ.ವಿ.ವಸಂತ್‍ಕುಮಾರ್, ಎನ್.ಎನ್.ಪ್ರಸಾದ್, ನಿಖಿತ, ಶರತ್, ಸುಮಂತ್, ಮಹೇಶ್, ನಾಗರಾಜ್ ಸಿಂಗ್, ನಂಜುಂಡಸ್ವಾಮಿ, ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















