ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಶಿವಮೊಗ್ಗ ರನ್ನರ್‍ಸ್ ಸ್ಪೋರ್ಟ್ಸ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ವಿಶ್ವ ಕ್ಯಾನ್ಸರ್ ಜಾಗೃತಿ ಮಾಹೆಯಾನದ ಅಂಗವಾಗಿ ಸಾರ್ವಜನಿಕರಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮಾ.5ರಂದು ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ರಾಜಾಸಿಂಗ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆಹಚ್ಚಿ ಎಲ್ಲಾ ರೀತಿಯ ಕ್ಯಾನ್ಸರ್‌ಗಳನ್ನು ಗುಣಪಡಿಸಬಹುದು. ಹಾಗೂ ವಿವಿಧ ಹಂತಗಳಲ್ಲಿನ ಕ್ಯಾನ್ಸರ್‌ಗಳಿಗೆ ಉತ್ತಮ, ಸೂಕ್ತ ಚಿಕಿತ್ಸೆ ನೀಡಿ ರೋಗಿಯ ಜೀವಿತಾವಧಿ ಹೆಚ್ಚಿಸಬಹುದಾಗಿದೆ. ಹೀಗಾಗಿ ಈ ಬಗ್ಗೆ ಜಾಗೃತಿ ಮೂಡಿಸಲು ಈ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ ಎಂದರು.
ಅಂದು ಬೆಳಿಗ್ಗೆ 6:45ಕ್ಕೆ ನೆಹರೂ ಕ್ರೀಡಾಂಗಣದಿಂದ ಆರಂಭವಾಗುವ ಮ್ಯಾರಥಾನ್ ಉಷಾ ನರ್ಸಿಂಗ್ ಹೋಂ ವೃತ್ತ, ವಿನೋಬನಗರ ಪೊಲೀಸ್‌ಚೌಕಿ, ಶುಭಮಂಗಳ ಕಲ್ಯಾಣ ಮಂದಿರ ರಸ್ತೆ, ನಂದಿ ಪೆಟ್ರೋಲ್ ಬಂಕ್, ಜೈಲ್ ವೃತ್ತದ ಮಾರ್ಗವಾಗಿ ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್‌ಗೆ ಕೊನೆಗೊಳ್ಳಲಿದೆ ಎಂದ ಅವರು, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಭಾಗವಹಿಸಲಿದ್ದಾರೆ ಎಂದರು.
Also read: ಪ್ರಗತಿಯತ್ತ ಸಾಗುತ್ತಿರುವ ಕೆಸ್‌ಐಸಿ ಗಳಿಸಿರುವ ಲಾಭವೆಷ್ಟು ಗೊತ್ತಾ?
5 ಕಿ.ಮೀ. ಮ್ಯಾರಥಾನ್ ನಡೆಯಲಿದ್ದು, ಈಗಾಗಲೆ 200 ಜನರು ಹೆಸರು ನೋಂದಾಯಿಸಿದ್ದು, 500 ಜನರು ಭಾಗವಹಿಸುವ ನಿರೀಕ್ಷೆಯಿದೆ. ಭಾಗವಹಿಸಿದ ಎಲ್ಲರಿಗೂ ಟೀ ಶರ್ಟ್ ನೀಡಲಾಗುವುದು. ಮ್ಯಾರಥಾನ್ ಅನ್ನು ಮೊದಲು ಪೂರ್ಣಗೊಳಿಸಿದ 300 ಜನರಿಗೆ ಪದಕ ನೀಡಲಾಗುವುದು. ಪುರುಷ, ಮಹಿಳೆ, ಹಿರಿಯ ನಾಗರಿಕರಿಗಾಗಿ 3 ವಿಭಾಗಗಳಿದೆ. 100 ರೂ. ಶುಲ್ಕ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9480542695 ಅಥವಾ 7338372695ರಲ್ಲಿ ಸಂಪರ್ಕಿಸಬಹುದು ಎಂದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ವರ್ಗೀಸ್ ಪಿ. ಜಾನ್ ಮಾತನಾಡಿ, ಈಗಿನ ಯುವಜನತೆಯು ತಮ್ಮ ಜೀವನ ಹಾಗೂ ಆಹಾರ ಪದ್ಧತಿಗಳನ್ನು ಸರಿಯಾಗಿ ರೂಢಿಸಿಕೊಳ್ಳದಿರುವುದು ಮತ್ತು ಇಳಿವಯಸ್ಸಿನಲ್ಲಿ ದುಶ್ಚಟಗಳಿಗೆ ದಾಸರಾಗಿರುವುದರಿಂದ ಇತ್ತೀಚೆಗೆ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಉತ್ತಮ ಚಿಕಿತ್ಸೆ ನೀಡಿ ಕ್ಯಾನ್ಸರ್ ರೋಗಿಯ ಜೀವಿತಾವಧಿಯನ್ನು ಹೆಚ್ಚಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಶಿವಮೊಗ್ಗ ರನ್ನರ್‍ಸ್ ಸ್ಪೋರ್ಟ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ರಾಜೇಂದ್ರ ಚೌಳಿ, ಕಾರ್ಯದರ್ಶಿ ಅಶೋಕ್ ಕುಮಾರ್ ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















