ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೀತಾಜಯಂತಿಯಂದು ನಗರದ ಬಿ.ಹೆಚ್. ರಸ್ತೆಯಲ್ಲಿರುವ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಗುರುಭಕ್ತರಿಗಾಗಿಯೇ ಮಾಡಿಸಿರುವ 108 ಪಾದುಕೆಗಳನ್ನು ಡಿ.3ರ ಶನಿವಾರ ಅತ್ಯಂತ ಶ್ರದ್ಧೆಯಿಂದ ಆಸಕ್ತ 108 ಮನೆಗಳಿಗೆ ಕೊಡುವ ಕಾರ್ಯಕ್ರಮ ಆಯೋಜಿಸಲಾಗಿದೆ.
ಶಿವಮೊಗ್ಗದ ಶ್ರೀ ಭಗವದ್ಗೀತಾ ಅಭಿಯಾನ, ಕರ್ನಾಟಕ, ಶ್ರೀ ಶ್ರೀಧರ ಸೇವಾ ಸಮಿತಿ, ಅರ್ಚಕ ವೃಂದ, ಭಜನಾ ಪರಿಷತ್, ಶ್ರೀ ಸಮರ್ಪಣಮ್ ಟ್ರಸ್ಟ್ ಹಾಗೂ ಸಂಸ್ಕಾರ ಪ್ರತಿಷ್ಠಾನದ ವತಿಯಿಂದ ನಡೆಯಲಿರುವ ಈ ಕಾರ್ಯಕ್ರಮವು ಅಂದು ಬೆಳಿಗ್ಗೆ 7.30ರಿಂದ ಶ್ರೀ ದತ್ತಾತ್ರೇಯ ಮೂಲಮಂತ್ರ ಹವನದಿಂದ ಆರಂಭವಾಗಲಿದ್ದು, ನಂತರ ಬೆಳಿಗ್ಗೆ 9.30ರಿಂದ ಸಂಪೂರ್ಣ ಭಗವದ್ಗೀತಾ ಪಾರಾಯಣ ಮತ್ತು ಹವನ ಹಾಗೂ ಬೆಳಿಗ್ಗೆ 10 ಗಂಟೆಗೆ 108 ಗುರುಭಕ್ತರಿಂದ ಸ್ವಹಸ್ತದಿಂದ 108 ಪಾದುಕೆಗಳಿಗೆ ಸಾಮೂಹಿಕ ಪಾದುಕಾ ಪೂಜೆ ನಡೆಯಲಿದೆ. ಬೆಳಿಗ್ಗೆ 11.30ರಿಂದ ವಿದ್ವಾನ್ ಶ್ರೀ ಎಂ.ಎಸ್. ವಿನಾಯಕರವರಿಂದ “ಪಾದುಕಾ ಮಹತ್ವ”ದ ಕುರಿತು ವಿಶೇಷ ಉಪನ್ಯಾಸವಿರಲಿದೆ. ಭಗವದ್ಗೀತಾ ಹೋಮದ ಪೂರ್ಣಾಹುತಿ, 108 ಕುಟುಂಬಗಳಿಗೆ ಪಾದುಕೆಗಳ ಸಮರ್ಪಣೆ ನಡೆದು, ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ವಿನಿಯೋಗದೊಂದಿಗೆ ಕಾರ್ಯಕ್ರಮವು ಸಂಪನ್ನಗೊಳ್ಳಲಿದೆ.
ಗುರುಪಾದುಕೆ ಸ್ಥಿರವಾಗಿರುವ ಮನೆಗಳಲ್ಲಿ ಗುರುಸಾನ್ನಿಧ್ಯ ನಿರಂತರವಾಗಿದ್ದು, ಸಕಲ ಕಷ್ಟಕಾರ್ಪಣ್ಯಗಳು, ಮನಃಕ್ಲೇಶಗಳೂ ನಿವಾರಣೆಯಾಗಿ ಸಂಕಲ್ಪ ಮಾಡುವ ಒಳ್ಳೆಯ ಕಾರ್ಯಗಳು ಸಿದ್ಧಿಸುವುದರಲ್ಲಿ ಸಂಶಯವಿಲ್ಲ ಎಂಬ ಗುರುವಾಕ್ಯದಂತೆ, ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಆಸಕ್ತ ಗುರುಬಂಧುಗಳಿಗೆ, ಗುರುಭಕ್ತರಿಗಾಗಿಯೇ ಸದ್ಗುರುಗಳ ಆಶೀರ್ವಾದದಿಂದ “108 ಔದುಂಬರ ಪಾದುಕೆ”ಗಳನ್ನು ವಿಶೇಷವಾಗಿ ತಯಾರಿಸಲಾಗಿದೆ.
Also read: ವಿಷ್ಣುವರ್ಧನ್ ಘನತೆಗೆ ತಕ್ಕ ಹಾಗೆ ವೈಭವದಿಂದ ಸ್ಮಾರಕ ಉದ್ಘಾಟನೆ: ಸಿಎಂ ಬೊಮ್ಮಾಯಿ
ಗುರುಪಾದುಕೆಗಳನ್ನು ತಮ್ಮ ಮನೆಗಳಲ್ಲಿ ಶಾಶ್ವತವಾಗಿ ಇಟ್ಟುಕೊಳ್ಳಬಯಸುವವರು ಕೆಳಗೆ ಕೊಟ್ಟಿರುವ ಸಂಖ್ಯೆಯನ್ನು ಸಂಪರ್ಕಿಸಬಹುದು. ಹೋಮಕ್ಕೆ, ಅನ್ನದಾನಕ್ಕೆ ಬೇಕಾದ ತುಪ್ಪ, ಅಕ್ಕಿ, ಬೇಳೆ, ಬೆಲ್ಲ, ತೆಂಗಿನಕಾಯಿ – ಇತರೆ ಧವಸ-ಧಾನ್ಯಗಳನ್ನು ಶ್ರೀ ಪ್ರಸನ್ನ ಗಣಪತಿ (ಬಲಮುರಿ) ದೇವಸ್ಥಾನ, ರವೀಂದ್ರನಗರ, ಶಿವಮೊಗ್ಗ ಅಥವಾ ಜಿ. ಅರುಣ್ ಕುಮಾರ್, #105, ಭೂಪಾಳಂ ಶಾಲೆಯ ಎದುರು, ಎಸ್.ಪಿ.ಎಂ. ರಸ್ತೆ, ಶಿವಮೊಗ್ಗ – ಈ ವಿಳಾಸಕ್ಕೆ ತಲುಪಿಸಬೇಕಾಗಿ ಕೋರಲಾಗಿದೆ.
ಹೆಸರು ನೋಂದಾಯಿಸಲು ಜಿ. ಅರುಣ್ ಕುಮಾರ್ – 9844444820, ಶ್ರೀಪತಿ ಭಟ್ – 9449699424 ಸಂಪರ್ಕಿಸಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post