ಕಲ್ಪ ಮೀಡಿಯಾ ಹೌಸ್
ಸೊರಬ: ಶುಂಠಿ ಕಣಗಳಿಂದ ಗಂಧಕ ಮಿಶ್ರಿತ ನೀರು ಅಕಾಲಿಕ ಮಳೆಯಿಂದ ಕೆರೆಗೆ ಸೇರಿದ ಪರಿಣಾಮ ಸಾವಿರಾರು ಮೀನುಗಳು ಧಾರುಣವಾಗಿ ಸಾವಿಗೀಡಾವೆ ಎಂದು ಪ್ರಗತಿಪರ ಕೃಷಿಕ ಪರಶುರಾಮ ಸಣ್ಣಬೈಲು ಆರೋಪಿಸಿದರು.
ಪಟ್ಟಣದ ಹೊರವಲಯದ ಹಿರೇಶಕುನ ಗ್ರಾಮದ ಸರ್ವೆ ನಂ. 54ರಲ್ಲಿನ ಕ್ಯಾಂಪಿನ ಕೆರೆಯಲ್ಲಿ ಭಾನುವಾರ ಬೆಳಗ್ಗೆ ಸಾಕಷ್ಟು ಮೀನುಗಳು ಸಾವನ್ನಪ್ಪಿವೆ. ಕೆರೆಯ ಸುತ್ತ ಸುಮಾರು ಐದಾರು ಶುಂಠಿ ಕಣಗಳಿದ್ದು, ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಶುಂಠಿ ಒಣಗಿಸಲು ಬಳಸಿದ ರಾಸಾಯನಿಕ ವಸ್ತುವಾದ ಗಂಧಕವು ಮಳೆನೀರಿನೊಂದಿಗೆ ಬೆರೆತು ಕೆರೆ ಸೇರಿದ್ದರಿಂದ ಮೀನುಗಳು ಸಾವೀಗೀಡಾವಿವೆ ಎಂದರು.
ಶುಂಠಿ ಕಣದಲ್ಲಿ ಬಳಸುವ ಗಂಧಕವು ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ವಸ್ತುವಾಗಿದೆ. ಇನ್ನೂ ಗಂಧಕದ ಹೊಗೆ ಸೇವಿಸಿದರೆ ಅಸ್ತಮಾದಂತಹ ಕಾಯಿಲೆ ಬರುವ ಸಾಧ್ಯತೆ ಸಾಕಷ್ಟಿದೆ ಎಂದು ವೈಜ್ಞಾನಿಕವಾಗಿ ಎಲ್ಲರಿಗೂ ತಿಳಿದಿರುವ ಸಂಗತಿ. ಕೊರೋನಾದಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಕೇವಲ ಹಣಗಳಿಕೆಗಾಗಿ ಮತ್ತೊಬ್ಬರ ಜೀವದೊಂದಿಗೆ ಚಲ್ಲಾಟವಾಡುತ್ತಿರುವ ಶುಂಠಿ ಕಣದವರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಕೆರೆಯಲ್ಲಿ ಮೀನುಸಾಕಾಣಿಕೆಗೆಂದು ಕಳೆದ ಜುಲೈ ಸಂದರ್ಭದಲ್ಲಿ ಸುಮಾರು 5 ಸಾವಿರ ಮೀನಿನ ಮರಿಗಳನ್ನು ಬಿಡಲಾಗಿತ್ತು. ಉತ್ತಮವಾಗಿ ಬೆಳೆದಿದ್ದ ಮೀನುಗಳು ಇದೀಗ ಸಾವಿರಾರು ಸಂಖ್ಯೆಯಲ್ಲಿ ದಿಢೀರನೇ ಸಾವಿಗೀಡಾಗಿರುವುದು ಆತಂಕಕ್ಕೆ ಕಾರಣವಾಗಿದೆ. ನಿತ್ಯದ ಅಡುಗೆ ಮತ್ತು ಇತರೆ ಸಂದರ್ಭಗಳಲ್ಲಿ ಹಾಗೂ ಆಯುಷ್ ಇಲಾಖೆ ಹೇಳಿದಂತೆ ಕಷಾಯದಲ್ಲಿ ಶುಂಠಿಯನ್ನು ಬಳಸುತ್ತಿದ್ದೇವೆ. ಇಂತಹ ರಾಸಾಯನಿಕ ಮಿಶ್ರಿತ ಶುಂಠಿಯನ್ನು ಬಳಸುವುದರಿಂದ ಆರೋಗ್ಯದ ಮೇಲೆ ಭೀರಬಹುದಾದ ಗಂಭೀರ ಪರಿಣಾಮವನ್ನು ಪ್ರತಿಯೊಬ್ಬರು ಚಿಂತಿಸಬೇಕಿದೆ. ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post