ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯಲ್ಲಿ ಶೇ.88ರಷ್ಟು ಮಂದಿ ಮೊದಲ ಬಾರಿಯ ಹಾಗೂ ಶೇ.41ರಷ್ಟು ಮಂದಿ ಎರಡನೆ ಬಾರಿಯ ಲಸಿಕೆಯನ್ನು ಪಡೆದಿದ್ದಾರೆ. ಈವರೆಗೆ ಲಸಿಕೆಯನ್ನೆ ಪಡೆಯದಿರುವ 2 ಲಕ್ಷ ಜನ ಲಸಿಕೆ ಪಡೆದು ತಮ್ಮ ಕುಟುಂಬದ ಹಾಗೂ ಸಾರ್ವಜನಿಕರ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಲಸಿಕೆ ಹಾಕಿಸಿಕೊಳ್ಳುವಂತೆ ಸಚಿವ ಕೆ.ಎಸ್. ಈಶ್ವರಪ್ಪ ಅವರು ಮನವಿ ಮಾಡಿದರು.
ಅವರು ಇಂದು ಜಿಲ್ಲಾಡಳಿತವು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಮಾಧ್ಯಮದ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡುತ್ತಿದ್ದರು.

ರಾಜ್ಯೋತ್ಸವದ ಈ ಶುಭ ದಿನದಂದು ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ ಜಿಲ್ಲೆಯ 4ಜನರಿಗೆ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿರುವುದು ನಮ್ಮೆಲ್ಲರಿಗೆ ಸಂತಸದ ತಂದಿದೆ ಎಂದರು.
ಇತ್ತೀಚೆಗೆ ಕೇಳಿ ಬರುತ್ತಿರುವ ಬಿಟ್ ಕಾಯಿನ್ ಮತ್ತು ಡ್ರಗ್ಸ್ ಅಕ್ರಮಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಸರ್ಕಾರ ನಿರ್ಧಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಅದಕ್ಕಾಗಿ ರಾಜ್ಯ ಗೃಹ ಸಚಿವರಿಗೆ ವಿಶೇಷ ಅಧಿಕಾರ ನೀಡಿದೆ ಎಂದರು.
ಸ್ವಚ್ಚ ಭಾರತ್ ಮಿಶನ್ ಯೋಜನೆಯಡಿಯಲ್ಲಿ ಜಿಲ್ಲೆಯ 270ಗ್ರಾ.ಪಂ.ಗಳಿಗೆ ಕಸ ಸಂಗ್ರಹಕ್ಕಾಗಿ ವಾಹನಗಳನ್ನು ನೀಡಲಾಗಿದೆ. ಇವುಗಳ ವ್ಯವಸ್ಥಿತ ನಿರ್ವಹಣೆಗಾಗಿ ಈಗಾಗಲೇ 30ಗ್ರಾಮ ಪಂಚಾಯಿತಿಗಳ 30 ಮಹಿಳಾ ಸಿಬ್ಬಂಧಿಗಳಿಗೆ ಮೊದಲ ಹಂತದಲ್ಲಿ ವಾಹನ ಚಾಲನಾ ತರಬೇತಿ ನೀಡಿ ನಿರ್ವಹಣೆಯ ಹೊಣೆಗಾರಿಕೆ ನೀಡಲಾಗಿದೆ. ಹಂತಹಂತವಾಗಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿಯೂ ಮಹಿಳಾ ಸದಸ್ಯರಿಗೆ ನಿರ್ವಹಣೆಯ ಹೊಣೆ ನೀಡಲಾಗುವುದು. ಈ ಕ್ರಮ ರಾಜ್ಯದಲ್ಲಿಯೆ ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಮೇಯರ್ ಶ್ರೀಮತಿ ಸುನಿತಾ ಅಣ್ಣಪ್ಪ, ಚನ್ನಬಸಪ್ಪ, ಜ್ಯೋತಿಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post