ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ : ಸಭೆ ನಡೆಸಲು ಅವಕಾಶ ನೀಡಲಿಲ್ಲ ಎಂದು ಹಕ್ಕುಚ್ಯುತಿ ಮಂಡಿಸುವುದಾಗಿ ತಿಳಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಸಿದ್ದರಾಮಯ್ಯನವರೇ ಕಾಂಗ್ರೆಸ್ ಸರ್ಕಾರಕ್ಕೊಂದು ಸಂವಿಧಾನ, ಭಾರತೀಯ ಜನತಾ ಪಕ್ಷಕ್ಕೊಂದು ಸಂವಿಧಾನವೇ ? ಎಂದು ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕನಾಗಿದ್ದಾಗ ರಾಜ್ಯದಲ್ಲಿದ್ದ ಬರಗಾಲ ಪರಿಸ್ಥಿತಿಯನ್ನು ಚರ್ಚಿಸಲು ಎಲ್ಲ ಜಿಲ್ಲೆಗಳ ಪ್ರವಾಸ ಮಾಡಿ, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲು ನಿರ್ಧರಿಸಿದ್ದೆ. ನನಗೆ ಆಗ ಎಲ್ಲಾ ಜಿಲ್ಲಾಧಿಕಾರಿಗಳು ಹೇಳಿದ್ದು ಒಂದೇ ಉತ್ತರ. ನೀವು ವಿರೋಧ ಪಕ್ಷದ ನಾಯಕರಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲು ಸರ್ಕಾರದಿಂದ ಅನುಮತಿ ಇಲ್ಲ. ಈ ಕುರಿತು ಸರ್ಕಾರದ ಆದೇಶವಿದೆ ಎಂದು ತಿಳಿಸಿದ್ದರು.
ಆಗ ತಾವೇ ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಮಯ. ಬರಗಾಲದ ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅನುಮತಿ ನೀಡಬೇಕೆಂದು ನಾನು ನಿಮಗೆ ಪತ್ರವನ್ನು ಸಹ ಬರೆದೆ. ಅದರೆ ನಿಮ್ಮಿಂದ ಅದಕ್ಕೆ ಯಾವ ಉತ್ತರವೂ ಬರಲಿಲ್ಲ. ಇದೀಗ ತಮಗೆ ಸಭೆ ನಡೆಸಲು ಅವಕಾಶ ನೀಡಲಿಲ್ಲ ಎಂದು ಆರೋಪ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಹಾಗಾದರೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೆ ಒಂದು ಸಂವಿಧಾನ. ಬಿಜೆಪಿ ಸರ್ಕಾರವಿದ್ದರೆ ಬೇರೊಂದು ಸಂವಿಧಾನ ಇದೆಯೇ? ಎಂದು ಸಿದ್ಧರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಲಸಿಕೆ ನೀಡುವ ಮೂಲಕ ಕೊರೋನಾ ತೊಲಗಿಸಲು ಪಣತೊಟ್ಟಿದ್ದಾರೆ. ಆದರೆ, ಕಾಂಗ್ರೆಸ್ ಇದಕ್ಕೆ ಅಪವಾದವೆಂಬಂತೆ ವರ್ತಿಸುತ್ತಿದ್ದಾರೆ. ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ಧರಾಮಯ್ಯರಿಗೆ ಬಹಿರಂಗ ಪತ್ರ ಬರೆಯುತ್ತಿದ್ದೇನೆ. ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಬಾರದೆಂದು ಆದೇಶದ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಹಕ್ಕುಚ್ಯುತಿ ಮಂಡನೆ ಮಾಡಲು ಹೊರಟಿದ್ದಾರೆ. ನಾನು ವಿಪಕ್ಷ ನಾಯಕನಾಗಿದ್ದ ಸಂದರ್ಭದಲ್ಲಿ ಸಿದ್ಧರಾಮಯ್ಯ ಸಿ.ಎಂ. ಆಗಿದ್ದರು. ಆಗ ನನಗೆ, ಬರಗಾಲದ ಸಭೆ ನಡೆಸಲು ಬಿಟ್ಟಿರಲಿಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆಯಲು ಅವಕಾಶ ನೀಡಿರಲಿಲ್ಲ. ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಲು ತಡೆ ಒಡ್ಡಿದ್ದರು. ಆದರೆ, ಈಗ ಹಕ್ಕುಚ್ಯುತಿ ಮಂಡನೆ ಮಾಡಲು ಹೊರಟಿದ್ದಾರೆ ಎಂದು ಕುಹಕವಾಡಿದರು.
ದೆಹಲಿಯಲ್ಲಿ ಬಡವರ ಮೇಲೆ ಲಸಿಕೆ ಪ್ರಯೋಗ ಮಾಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು. ಕೋವಿಡ್ ಸಂಕಷ್ಟ ಸಂದರ್ಭದಲ್ಲೂ ಈ ರೀತಿ ರಾಜಕೀಯ ಕಾರಣಕ್ಕಾಗಿ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ವಿರೋಧಪಕ್ಷದ ನಾಯಕರುಗಳು ವ್ಯಾಕ್ಸಿನ್ ಬಗ್ಗೆ ಅಪಪ್ರಚಾರ ಈಗಲಾದರೂ ನಿಲ್ಲಿಸಬೇಕು. ಇಂದು ರಾಜ್ಯದಲ್ಲಿ, ದೇಶದಲ್ಲಿ ಕೊರೋನಾ ಹೆಚ್ಚಾಗಲು ಕಾಂಗ್ರೆಸ್ಸೇ ಕಾರಣ. ಇಂದಿನ ಜನರ ಸಾವಿಗೆ ನೇರವಾಗಿ ಕಾಂಗ್ರೆಸ್ಸೇ ಕಾರಣ. ನೀವು ಆಗ ಸುಮ್ಮನಿದ್ದಿದ್ದರೆ, ಇಷ್ಟೋತ್ತಿಗೆ ವ್ಯಾಕ್ಸಿನ್ ಪಡೆದು, ಜನರು ಬದುಕುತ್ತಿದ್ದರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕೊರೋನಾ ಹೆಚ್ಚಾಗಲು ಕಾಂಗ್ರೆಸ್ಸೇ ಕಾರಣ. ಜನರು ಕಾಂಗ್ರೆಸ್ ನ ಕುತಂತ್ರದ ರಾಜಕಾರಣ ದಿಂದಾಗಿಯೇ ಸಾಯುತ್ತಿದ್ದಾರೆ. ಲಸಿಕೆ ಬಗ್ಗೆ ಬಹಳ ಅಪಪ್ರಚಾರ ಮಾಡಿದ್ದರು. ಇದರಿಂದಾಗಿಯೇ ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕಿದರು. ಪ್ರಧಾನಿ ನರೇಂದ್ರ ಮೋದಿ ಲಸಿಕೆ ಹಾಕಿಸಿಕೊಳ್ಳಿ ಎಂದಾಗ, ಕುತಂತ್ರ ರಾಜಕಾರಣದ ಮೂಲಕ ದೇಶದ ಜನ ಲಸಿಕೆ ಪಡೆಯದ ಹಾಗೆ ಮಾಡಿದಿರಿ. ದ್ವಂದ್ವ ನೀತಿ ಮೂಲಕ ಕುತಂತ್ರ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಇದಕ್ಕೆ ಉತ್ತರ ನೀಡಬೇಕು ಎಂದು ಸವಾಲು ಹಾಕಿದರು.
ನೀವು ಪತ್ರಿಕೆಗಳಲ್ಲಿ ಹೇಳಿಕೆ ನೀಡಿರುವ ಕಾರಣದಿಂದಾಗಿಯೇ ನಾನು ಬಹಿರಂಗ ಪತ್ರ ಬರೆದಿದ್ದೇನೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಉತ್ತರ ನೀಡಬೇಕು. ಕಾಂಗ್ರೆಸ್‌ಗೆ ಒಂದು ಸಂವಿಧಾನ ಬಿಜೆಪಿ ಅಧಿಕಾರದಲ್ಲಿದ್ದರೆ ಒಂದು ಸಂವಿಧಾನ ಇದೆಯೇ ಎಂಬುದನ್ನು ತಿಳಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್. ದತ್ತಾತ್ರಿ, ಡಿ.ಎಸ್. ಅರುಣ್, ಎಸ್.ಎನ್. ಚನ್ನಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post