ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ತುಂಬಿ ಹರಿಯುತ್ತಿರುವ ತುಂಗಾ ನದಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಇಂದು ಬಾಗಿನ ಅರ್ಪಿಸಿದರು.
ಇಂದು ಮುಂಜಾನೆ ಕುಟುಂಬ ಸಹಿತ ತುಂಗಾ ನದಿಗೆ ಪೂಜೆ ಸಲ್ಲಿಸಿದ ಅವರು, ಬಾಗಿನ ಅರ್ಪಿಸಿ, ಜಿಲ್ಲೆಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಿದರು.
ಆನಂತರ ಮಾತನಾಡಿದ ಅವರು, ಉತ್ತಮ ಮಳೆಯಾಗುತ್ತಿರುವುದು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಇದೇ ವೇಳೆಯಲ್ಲಿ ರೈತರಿಗೆ ಮಳೆಗಾಲದಲ್ಲಿ ಯಾವುದೇ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

ಕಳೆದ ವರ್ಷದ ನೆರೆಯಿಂದ ರಾಜ್ಯದ ಜನರು ಬಹಳಷ್ಟು ತೊಂದರೆ ಅನುಭವಿಸಿದರು. ಹೀಗಾಗಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಸುಗಮ ಸಂಚಾರಕ್ಕಾಗಿ ರಸ್ತೆ ಹಾಗೂ ಸೇತುವೆಗಳ ದುರಸ್ಥಿಗಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 1500 ಕೋಟಿ ರೂ. ಬಿಡುಗಡೆ ಮಾಡಿದೆ. ಈಗ ಉತ್ತಮ ಮಳೆಯಾಗಿದ್ದು, ಈ ಬಾರಿ ಮಳೆಯಿಂದ ಯಾರಿಗೂ, ಯಾವ ರೀತಿಯಲ್ಲೂ ಸಹ ಹಾನಿಯಾಗದಿರಲಿ ಎಂದು ಪ್ರಾರ್ಥಿಸಿದ್ದೇವೆ ಎಂದರು.
ಈಶ್ವರಪ್ಪ ಪತ್ನಿ ಜಯಲಕ್ಷ್ಮೀ, ಪ್ರಮುಖರಾದ ಚನ್ನಬಸಪ್ಪ, ಮೇಯರ್, ಉಪಮೇಯರ್ ಸೇರಿದಂತೆ ಹಲವರಿದ್ದರು.
Get In Touch With Us info@kalpa.news Whatsapp: 9481252093
















