ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೊರೋನ ಸೋಂಕಿನ ಕಾರಣದಿಂದಾಗಿ ಬಹುದಿನಗಳಿಂದ ಸ್ಥಗಿತಗೊಂಡಿದ್ದ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳು ಹಂತಹಂತವಾಗಿ ಆರಂಭಗೊಳ್ಳುತ್ತಿವೆ. ಇಂದಿನಿಂದ ರಾಜ್ಯದಾದ್ಯಂತ 1ರಿಂದ 5ನೇ ತರಗತಿಗಳು ಆರಂಭಗೊಂಡಿದ್ದು, ಸಹಜವಾಗಿ ಮಕ್ಕಳು, ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರಲ್ಲಿ ಸಂಭ್ರಮದ ವಾತಾವರಣದ ಮನೆಮಾಡಿದೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಹೇಳಿದರು.
ಅವರು ಇಂದು ಶಿವಮೊಗ್ಗ ಸಮೀಪದ ಮಲವಗೊಪ್ಪದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲಾ ಆರಂಭದ ಕ್ಷಣಕ್ಕೆ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ, ಹೂವು ಹಾಗೂ ಸಿಹಿ ನೀಡಿ ಸ್ವಾಗತಿಸಿ, ಮಾತನಾಡಿದರು. ಪೋಷಕರು ತಮ್ಮ ಒಪ್ಪಿಗೆಯ ಪತ್ರದೊಂದಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದು, ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಎಂದಿನಂತೆ ಸಹಜವಾಗಿದೆ ಎಂದರು.
ತಜ್ಞರ ಸಲಹೆಯಂತೆ ಶಾಲೆಗಳನ್ನು ಆರಂಭಿಸಲಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಪ್ರತಿನಿತ್ಯ ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದ ಅವರು, ಇಂದಿನಿಂದ ನವೆಂಬರ್ 1ರವರೆಗೆ ಮಧ್ಯಾಹ್ನದವರೆಗೆ ಮಾತ್ರ ಶಾಲೆಗಳು ನಡೆಯಲಿವೆ. ಮಕ್ಕಳ ಮಾನಸಿಕ ಸ್ಥಿತಿಯನ್ನು ಶಾಲೆಯೆಡೆಗೆ ಸೆಳೆಯುವ ನಿಟ್ಟಿನಲ್ಲಿ ಆರಂಭ ಹಂತವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ನವೆಂಬರ್ 1ರ ನಂತರ ಶಾಲೆಗಳು ಮೊದಲಿನಂತೆ ಬೆಳಿಗಿನಿಂದ ಸಂಜೆಯವರೆಗೆ ನಡೆಯಲಿವೆ. ಅಂದಿನಿಂದಲೇ ಮಧ್ಯಾಹ್ನದ ಅಕ್ಷರ ದಾಸೋಹ ಮುಂದುವರೆಯಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಅವಧಿಗೆ ಪಠ್ಯದಲ್ಲಿ ಯಾವುದೇ ಕಡಿತ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಾದ್ಯಂತ ಸುಮಾರು 48,000ಪ್ರಾಥಮಿಕ ಶಾಲೆಗಳಿವೆ. ಅವುಗಳಲ್ಲಿ 29,000ಶಾಲೆಗಳಲ್ಲಿ ಪೂರ್ಣಪ್ರಮಾಣದ ವ್ಯವಸ್ಥೆ ಒದಗಿಸಲಾಗಿದೆ. ಅವುಗಳನ್ನು ಶ್ರೇಣಿಗಳಾಗಿ ವಿಂಗಡಿಸಲಾಗಿದೆ. 7,000ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ನ್ಯೂನತೆಗಳಿರುವುದನ್ನು ಗಮನಿಸಲಾಗಿದೆ. ಅವುಗಳನ್ನು ಆದ್ಯತೆಯ ಮೇರೆಗೆ ಇತ್ಯರ್ಥಪಡಿಸಲು ಆಯಾ ವಿಧಾನ ಸಭಾ ಕ್ಷೇತ್ರದ ಶಾಸಕರಿಗೆ ನಿರ್ವಹಣೆಯ ಜವಾಬ್ದಾರಿಯನ್ನು ನೀಡಲಾಗಿದೆ. ಸ್ಥಳೀಯವಾಗಿರುವ ದಾನಿಗಳ ಸಹಕಾರವನ್ನು ಪಡೆದು, ಶಾಲೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಅನೇಕ ಜನ ದಾನಿಗಳು ಆಸಕ್ತಿ ತೋರಿಸಿದ್ದಾರೆ ಎಂದರು.
ಶಾಲಾ ದಿನಗಳಲ್ಲಿ ಸರ್ಕಾರವು ಹೊರಡಿಸಿರುವ ಕೊರೋನ ನಿಯಮನ್ನು ಕಡ್ಡಾಯವಾಗಿ ಪಾಲಿಸುವಂತೆ ನಿರ್ದೇಶಿಸಲಾಗಿದೆ. ಕೊರೋನ ಅವಧಿಯಲ್ಲಿ ಮಕ್ಕಳ ಶೈಕ್ಷಣಿಕ ಪಠ್ಯ ಚಟುವಟಿಕೆಗಳಿಂದ ವಿಮುಖರಾಗಿರಬಹುದಾಗಿದ್ದು, ಅವರನ್ನು ಶಿಕ್ಷಣದ ಕಲಿಕೆಗೆ ಕರೆತರಲು ವಿಶೇಷ ತರಗತಿಗಳನ್ನು ಆರಂಭಿಸಲು ಸೂಚಿಸಲಾಗಿದೆ. ಅದಕ್ಕಾಗಿ ರಾಜ್ಯದ ಎಲ್ಲಾ ಶಿಕ್ಷಕರನ್ನು ವಿಶ್ವಾಸಕ್ಕೆ ಪಡೆದು ಕ್ರಮವಹಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಸರ್ವಾಂಗೀಣ ವಿಕಾಸಕ್ಕಾಗಿ ನನ್ನ ಶಾಲೆ, ನನ್ನ ಕೊಡುಗೆ ಎಂಬ ಹೊಸ ಪರಿಕಲ್ಪನೆಯ ಆಪ್ ಒಂದನ್ನು ವಿನ್ಯಾಸಗೊಳಿಸಲಾಗುತ್ತಿದೆ. ಇದರಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಿಕ್ಷಣಾಸಕ್ತರು, ಊರಿನ ಹಿರಿಯರು ಭಾಗವಹಿಸಿ ಶಾಲೆಯನ್ನು ಅಭಿವೃದ್ದಿಪಡಿಸಿ, ಶಾಲಾ ವಾತಾವರಣ ಸುಂದರವಾಗಿರುವಂತೆ ನೋಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಶಿಕ್ಷಕರ ಪದೋನ್ನತಿ ಕುರಿತಂತೆ ಶಿಕ್ಷಕರು ಹಾಗೂ ಸರ್ಕಾರದ ನಡುವೆ ಜಿಜ್ಞಾಸೆಗಳಿವೆ. ಪರೀಕ್ಷೆ ಮುಖಾಂತರ ಪದೋನ್ನತಿ ನೀಡಬೇಕೆಂಬುದು ಇಲಾಖೆಯ ಆಶಯ. ಆದರೆ ಶಿಕ್ಷಕರು ಪರೀಕ್ಷೆ ಇಲ್ಲದೆಯೆ ಪದೋನ್ನತಿ ಬಯಸುತ್ತಿದ್ದಾರೆ. ವಿವಿಧ ಕಾರಣಗಳಿಂದಾಗಿ ಬಹು ದಿನಗಳಿಂದ ನೆನೆಗುದಿಗೆ ಬಿದ್ದದ್ದ ಶಿಕ್ಷಕರ ವರ್ಗಾವಣೆಗೆ ಅವರ ಕೋರಿಕೆಯಂತೆ ವರ್ಗಾವಣೆ ಪ್ರಕ್ರಿಯೆ ಪುನರ್ ಆರಂಭಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರುದ್ರೇಗೌಡರು, ಆರ್ಯವೈಶ್ಯ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಡಿ.ಎಸ್.ಅರುಣ್, ಚೆನ್ನಬಸಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಂ.ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್, ಡಯಟ್ ಪ್ರಾಚಾರ್ಯ ಬಸವರಾಜಪ್ಪ ಸೇರಿದಂತೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಮುಖ್ಯೋಪಾಧ್ಯಾಯರು, ಸಹಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post