ಶಿವಮೊಗ್ಗ: ವಿಶ್ವದಲ್ಲಿ ಇಂದು ರಸ್ತೆ ಅಪಘಾತದಲ್ಲಿ ಸಾಯುವವರ ಸಂಖ್ಯೆ ಮೊದಲ ಸ್ಥಾನದಲ್ಲಿದ್ದರೆ ಕ್ಯಾನ್ಸರ್‌ನಿಂದ ಸಾಯುವವರ ಸಂಖ್ಯೆ ಎರಡನೆಯ ಸ್ಥಾನದಲ್ಲಿದೆ ಎಂದು ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯ ಸರ್ಜನ್ ಡಾ. ಬಿ.ಎ. ರೋಷನ್ ಕಳವಳ ವ್ಯಕ್ತಪಡಿಸಿದರು.
ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕ್ಯಾನ್ಸರ್ ಇಂದು ಹಾಗೂ ನಾಳೆ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿ ಮಾತನಾಡಿದರು.
ಪ್ರಪಂಚದಲ್ಲಿ ಪ್ರತಿ 8 ನಿಮಿಷದಲ್ಲಿ ಒಬ್ಬರು ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಪ್ರತಿನಿತ್ಯ 2500 ಜನ ಕೇವಲ ತಂಬಾಕು ಸೇವನೆಯಿಂದ ಉಂಟಾಗುವ ಬಾಯಿಯ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿದ್ದಾರೆ ಎಂಬ ಆತಂಕಕಾರಿ ವಿಷಯ ಕೆಲವು ಅಂಕಿಅಂಶಗಳಿಂದ ತಿಳಿದುಬಂದಿದೆ ಎಂದರು.
ಇಂದು ದೇಶದಲ್ಲಿ ಶೇ. 25 ರಷ್ಟುಮಂದಿ ತಂಬಾಕು ಜಗಿಯುವುದರಿಂದ ಕ್ಯಾನ್ಸರ್‌ಗೆ ತುತ್ತಾದರೆ, ಇನ್ನು ಕೆಲವರು ಮಾದಕ ವ್ಯಸನ, ಮದ್ಯಪಾನ, ಧೂಮಪಾನದಿಂದ ಕ್ಯಾನ್ಸರ್‌ನಂತಹ ರೋಗಕ್ಕೆ ತುತ್ತಾಗಿ ತಮ್ಮ ಅಮೂಲ್ಯ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿವರ್ಷ ಸುಮಾರು 11,52,294 ಹೊಸ ಕ್ಯಾನ್ಸರ್ ರೋಗಿಗಳುನೋಂದಾವಣೆಯಾಗುತ್ತಿರುವುದು ಮತ್ತೊಂದು ಆತಂಕಕಾರಿಯಾದ ವಿಷಯ ನಮ್ಮ ಬದಲಾದ ಜೀವನ ಕ್ರಮ, ಆಧುನಿಕ ತಂತ್ರಜ್ಞಾನಗಳ ದುಷ್ಪರಿಣಾಮ, ಮೊಬೈಲ್ ಟವರ್‌ಗಳಿಂದ ಹೊರಬರುವ ಮಾರಣಾಂತಿಕ ವಿಕಿರಣಗಳು ಮಾನವನ ದೇಹವನ್ನು ಪ್ರವೇಶಿಸಿ ಕ್ಯಾನ್ಸರ್ ಉಂಟಾಗುವಂತೆ ಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕ್ಯಾನ್ಸರ್ ಬರಲು ನಿರ್ಧಿಷ್ಠ ಕಾರಣವನ್ನು ಇದುವರೆಗೂ ಪತ್ತೆ ಹಚ್ಚಲಾಗಲಿಲ್ಲವಾದರೂ ಕೆಲವು ಕ್ಯಾನ್ಸರ್‌ಗಳು ಮಾರಣಾಂತಿಕವಾಗಿದ್ದರೆ ಇನ್ನು ಕೆಲವು ಕ್ಯಾನ್ಸರ್‌ಗಳು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಿ ಕಾಯಿಲೆ ಗುಣಪಡಿಸಬಹುದು. ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆಯನ್ನು ಮಾಡಿಕೊಂಡರೆ ಕ್ಯಾನ್ಸರ್‌ನಿಂದ ಪಾರಾಗಬಹುದು ಎಂದು ತಿಳಿಸಿದರು.
ನಮ್ಮ ಆಧುನಿಕ ಆಹಾರ ಶೈಲಿ, ಹೊರಗಿನ ಕುರುಕಲು ಆಹಾರ, ಅಶುದ್ದ ಮಾಂಸ ಹಾಗೂ ರಸಾಯನಿಕ ಸಿಂಪಡಿಸಿದ ತರಕಾರಿಗಳು ಇಂದು ಕ್ಯಾನ್ಸರ್‌ನ ಆಗಮನಕ್ಕೆ ಮೂಲ ಕಾರಣವಾಗಿದೆ. ಕೆಲವು ವ್ಯಾಪಾರಿಗಳು ಗ್ರಾಹಕರನ್ನು ಆಕರ್ಷಿಸಲು ಸಿಹಿ ಪದಾರ್ಥಗಳಲ್ಲಿ ಬಳಸುವ ಅಪಾಯಕಾರಿ ರಾಸಾಯನಿಕ ಅಂಶಗಳು ನಮ್ಮ ದೇಹವನ್ನು ಸೇರಿ ಕ್ಯಾನ್ಸರ್ ಉಂಟಾಗುವಂತೆ ಮಾಡುತ್ತಿದೆ ಎಂದು ಹೇಳಿದರು.
ಜಗತ್ತಿನಾದ್ಯಂತ ಇಂದು ಕ್ಯಾನ್ಸರ್ ತನ್ನ ಕರಾಳತೆಯನ್ನು ಪ್ರದರ್ಶಿಸುತ್ತಿದೆ. ಕ್ಯಾನ್ಸರ್ ನಿಂದ ಪಾರಾಗಲು ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ಶುದ್ದವಾದ ಹಣ್ಣು-ತರಕಾರಿ ಸೇವನೆ, ಆದಷ್ಟು ಶುದ್ದವಾದ ಗಾಳಿಯನ್ನು ಸೇವಿಸಿದರೆ ನಮ್ಮ ಆರೋಗ್ಯಕ್ಕೆ ಉತ್ತಮ ಎಂದು ಸಲಹೆ ನೀಡಿದರು.
ಕಾರ್ಯಕ್ರಮಲ್ಲಿ ಪ್ರಾಂಶುಪಾಲ ಡಾ. ಎಸ್.ಎಂ. ಕಟ್ಟಿ, ಉಪಪ್ರಾಂಶುಪಾಲ ಡಾ. ಸಿ.ಎಂ. ಸಿದ್ದಲಿಂಗಪ್ಪ, ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಡಾ. ಆರ್.ಪಿ. ಪೈ, ಆಸ್ಪತ್ರೆಯ ಸರ್ಜರಿ ವಿಭಾಗದ ಡಾ. ಬಿ.ಪಿ. ಸುರೇಶ್ ಇನ್ನಿತರರು ಉಪಸ್ಥಿತರಿದ್ದರು.
ಸೌಜನ್ಯ:
ಯತೀಶ್,
ಮಾರ್ಕೆಟಿಂಗ್ ವಿಭಾಗ
ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ, ಶಿವಮೊಗ್ಗ
Discussion about this post