ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬದುಕಿನ ಸಾಧನೆಯ ಹಾದಿಯಲ್ಲಿ ಯಶಸ್ವಿಯಾಗಲು ಮಾತೃಭಾಷೆಯ ಕಲಿಕೆಯಲ್ಲಿ ಪರಿಪಕ್ವತೆ ಅತ್ಯವಶ್ಯಕ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅಭಿಪ್ರಾಯಪಟ್ಟರು.
ನಗರದ ಸಿ.ಭೀಮಸೇನರಾವ್ ಕಾನೂನು ಕಾಲೇಜಿನಲ್ಲಿ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ರಾಷ್ಟ್ರೀಯ ಶಿಕ್ಷಣ ಸಮಿತಿ, ಸಿ.ಭೀಮಸೇನ ರಾವ್ ಕಾನೂನು ಕಾಲೇಜು, ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಕಾನೂನು ವಿದ್ಯಾರ್ಥಿಗಳಿಗಾಗಿ ಶನಿವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಅನುಸಂಧಾನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.

ಮಾನವ ಸಂಬಂಧದಲ್ಲಿ ಅನುಸಂಧಾನ ಅತಿ ಮುಖ್ಯ. ವಿವಾದಗಳನ್ನು ಶಾಂತ ರೂಪವಾಗಿ ಬಗೆಹರಿಸುವ ಕಲೆ ವಕೀಲ ವೃತ್ತಿಯಲ್ಲಿ ಅತ್ಯವಶ್ಯಕ. ಅನುಸಂಧಾನದಿಂದ ಇಬ್ಬರು ಕಕ್ಷಿದಾರರಲ್ಲಿಯು, ಮನಸ್ಸಿಗೆ ನೆಮ್ಮದಿ ಸಿಗುವಂತಹ ಸಂದರ್ಭ ರೂಪಿಸಿ. ಹಣಕ್ಕಿಂತ, ಜನರ ವಿಶ್ವಾಸ ನಂಬಿಕೆ ಗಳಿಸುವತ್ತ ಕೇಂದ್ರಿಕರಿಸಿ. ವಕೀಲರು ಸಮಾಜವನ್ನು ಉತ್ತಮದೆಡೆಗೆ ಪರಿವರ್ತಿಸಬಲ್ಲ ಶಕ್ತಿ ಹೊಂದಿದ್ದಾರೆ. ನಿರ್ಗತಿಕರಿಗೆ, ಬಡವರಿಗೆ, ಸಮಾಜದ ಅಭಿವೃದ್ಧಿಗೆ ನಿಮ್ಮ ಬುದ್ದಿವಂತಿಕೆಯನ್ನು ಪಸರಿಸುವ ಕಾರ್ಯಮಾಡಿ. ಹೃದಯ ಶ್ರೀಮಂತಿಕೆಯನ್ನು ಬೆಳೆಸಿಕೊಳ್ಳಿ.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಅನುಸಂಧಾನದಲ್ಲಿ ಪ್ರಾಮಾಣಿಕತೆ ಮತ್ತು ಸಮಗ್ರತೆ ಎಂಬುದು ಅತ್ಯಮೂಲ್ಯ. ವೃತ್ತಿ ಧರ್ಮದಲ್ಲಿ ಪ್ರಾಮಾಣಿಕತೆ ಉಳಿಸಿಕೊಂಡಾಗ ಮಾತ್ರ, ಸವಾಲುಗಳನ್ನು ಎದುರಿಸುವ ಸ್ಥೈರ್ಯ ದೊರಕಲಿದೆ ಎಂದು ಹೇಳಿದರು.

ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜು ಪ್ರಥಮ
ರಾಜ್ಯಮಟ್ಟದ ಅನುಸಂಧಾನ ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನ ತಂಡ ಪ್ರಥಮ ಬಹುಮಾನ ಪಡೆದರು. ಬೆಳಗಾವಿಯ ಬಿ.ವಿ.ಬೆಲ್ಲದ್ ಕಾನೂನು ಕಾಲೇಜಿನ ತಂಡ ದ್ವಿತೀಯ ಬಹುಮಾನ ಪಡೆದರು. ಉಡುಪಿಯ ವೈಕುಂಠ ಬಾಳೆಗಾರ್ ಕಾನೂನು ಕಾಲೇಜು ಸಮಾಧಾನಕರ ಬಹುಮಾನ ಪಡೆದರು. ರಾಜ್ಯದ ವಿವಿಧ ಕಾನೂನು ಕಾಲೇಜುಗಳ 20 ತಂಡಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post