ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಾರಣಾಂತಿಕ ಕೊರೋನ ಸೋಂಕಿನಿಂದ ರಕ್ಷಣೆ ಪಡೆಯಲು ಲಸಿಕೆ ಪಡೆಯುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಅವರು ನಗರದ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡುತ್ತಿದ್ದರು. ಭಾರತ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕಿವೆ ಮಾತ್ರವಲ್ಲ ಆರ್ಥಿಕವಾಗಿ ನಲುಗಿ ಹೋಗಿವೆ. ಕೆಲವು ರಾಷ್ಟ್ರಗಳು ಅನೇಕ ಸವಾಲುಗಳನ್ನು ಎದುರಿಸಬೇಕಾಗಿರುವುದು ಬೇಸರದ ಸಂಗತಿ ಎಂದರು.
ಇಂತಹ ಸಂದಿಗ್ಧ ಸಂದರ್ಭದಲ್ಲಿ ಅನೇಕ ರಾಷ್ಟ್ರಗಳಲ್ಲಿ ಸೋಂಕನ್ನು ನಿಯಂತ್ರಿಸುವ ಲಸಿಕೆ ಕಂಡುಹಿಡಿಯಲು ಅವಿರತವಾಗಿ ಶ್ರಮಿಸಿದವು. ವಿಶೇಷವಾಗಿ ನಮ್ಮ ದೇಶದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಕಡಿಮೆ ವೆಚ್ಚದ ಔಷಧವನ್ನು ದೇಶದ ಜನತೆಗೆ ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಈ ಕಾರ್ಯಕ್ರಮದ ಮೊದಲ ಹಂತವಾಗಿ ದೇಶದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ, ಕೊರೋನ ಸೋಂಕಿನ ನಿಯಂತ್ರಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಕೊರೋನ ವಾರಿಯರ್ಸ್‌ಗಳಿಗೆ ಈಗಾಗಲೇ ಮೊದಲ ಹಂತದಲ್ಲಿ ಲಸಿಕೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಈವರೆಗೆ 14246 ಆರೋಗ್ಯ ಸಿಬ್ಬಂದಿಗಳಿಗೆ ಲಸಿಕೆ ಹಾಕಲಾಗಿದ್ದು ಗುರಿ ಮೀರಿದ ಸಾಧನೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದ ಎರಡನೇ ಹಂತವಾಗಿ 60ವರ್ಷ ಮೇಲ್ಪಟ್ಟ ಎಲ್ಲರಿಗೂ ಹಾಗೂ ವಿವಿಧ ಕಾಯಿಲೆಗಳಿಂದ ಬಾಧಿತರಾಗಿರುವ 45ವರ್ಷ ಮೇಲ್ಪಟ್ಟವರು ತಮ್ಮ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬಹುದಾಗಿದೆ. ಈ ಲಸಿಕೆಯು ಜಿಲ್ಲೆಯ ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಬ್ಯವಿದ್ದು, ಸ್ಥಳದಲ್ಲಿಯೇ ಹೆಸರು ನೋಂದಾಯಿಸಿ ಲಸಿಕೆ ಪಡೆಯಬಹುದಾಗಿದೆ ಎಂದರು.
ಮುಂದಿನ ಕೆಲವೇ ದಿನಗಳಲ್ಲಿ ದೇಶದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಸಿಕೆ ತಲುಪಿಸಲು ಯತ್ನಿಸಲಾಗುವುದು. ಜಿಲ್ಲೆಯಲ್ಲಿ ಲಸಿಕೆ ವಿತರಿಸುವಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಶ್ರಮವನ್ನು ಅವರು ಶ್ಲಾಘಿಸಿದರು.
ಜಿಲ್ಲೆಯ ಪ್ರತಿಷ್ಠಿತ ಕೈಗಾರಿಕೆಗಳಲ್ಲೊಂದಾಗಿರುವ ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಯತ್ನಿಸಲಾಗಿದ್ದು, ಈ ಸಂಬಂಧ ಇತ್ತೀಚಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾತಾಮನ್ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗಿದ್ದು ಸಚಿವರು ಪೂರಕವಾಗಿ ಸ್ಪಂದಿಸಿರುವುದಾಗಿ ತಿಳಿಸಿದರು.
ಚಿತ್ರದುರ್ಗ – ಶಿವಮೊಗ್ಗ (ರಾ.ಹೆ.13) ಬಾಕಿ ಉಳಿದ ರಸ್ತೆ ನಿರ್ಮಾಣ ಕಾಮಗಾರಿಗೆ 516ಕೋಟಿ, ವಿದ್ಯಾನಗರದ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ 44ಕೋಟಿ, ತೀರ್ಥಹಳ್ಳಿ – ಕೊಪ್ಪ – ಶೃಂಗೇರಿ ದ್ವಿಪಥದ ರಸ್ತೆ ನಿರ್ಮಾಣಕ್ಕೆ 96ಕೋಟಿ, ಶಿವಮೊಗ್ಗ ನಗರದ ಬೈಪಾಸ್ ರಸ್ತೆಯ ತುಂಗಾ ನದಿಯ ಸೇತುವೆ ಪಕ್ಕದಲ್ಲಿ ಮತ್ತೊಂದು ಸೇತುವೆ ನಿರ್ಮಾಣಕ್ಕೆ 20ಕೋಟಿ, ನಿಟ್ಟೂರು ಮತ್ತು ಹೊಸನಗರ ಭಾಗದ ಶರಾವತಿ ಹಿನ್ನೀರಿನ ಜೊತೆ ಸಂಪರ್ಕವಿರುವ ಶಿಥಿಲಗೊಂಡಿರುವ ಸೇತುವೆಗಳಿಗೆ ಪರ್ಯಾಯವಾಗಿ 7 ಸೇತುವೆಗಳ ನಿರ್ಮಾಣಕ್ಕೆ 20ಕೋಟಿ, ನಾಗೋಡಿ ಬಳಿಯ ಘಾಟಿ ತಿರುವಿನಲ್ಲಿ ಗೇಬಿಯನ್ ತಡೆಗೋಡೆ ಹಾಗೂ ರಸ್ತೆ ನಿರ್ಮಾಣಕ್ಕೆ 4022ಕೋಟಿ, ಸಾಗರ ನಗರ ವ್ಯಾಪ್ತಿಯಲ್ಲಿ ಚತುಷ್ಫಥ ರಸ್ತೆ ನಿರ್ಮಾಣಕ್ಕೆ 77.19ಕೋಟಿ, ತೀರ್ಥಹಳ್ಳಿ ಪಟ್ಟಣದಲ್ಲಿ ಧ್ವಿಪಥದ ಬೃಹತ್ ಸೇತುವೆ ಹಾಗೂ ಬೈಪಾಸ್ ರಸ್ತೆ ನಿರ್ಮಾಣಕ್ಕೆ 55.62ಕೋಟಿ, ರೂ.ಗಳಿಗೆ ಮಂಜೂರಾತಿ ದೊರೆತಿದೆ ಎಂದು ವಿವರಿಸಿದರು.
ವಿಶೇಷವಾಗಿ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳ ರಸ್ತೆ ಸುಗಮ ಸಂಚಾರಕ್ಕಾಗಿ ಕೇಂದ್ರ ಭೂಸಾರಿಗೆ ಮಂತ್ರಾಲಯದಿಂದ ಈಗಾಗಲೇ ಮಂಜೂರಾಗಿ ಮುಕ್ತಾಯ ಹಂತದಲ್ಲಿರುವ ತುಮಕೂರು – ಶಿವಮೊಗ್ಗ, ಚಿತ್ರದುರ್ಗ – ಶಿವಮೊಗ್ಗ ಚತುಷ್ಪಥ ರಸ್ತೆ ಯೋಜನೆಗಳಲ್ಲದೆ ಹೊಸದಾದ 10ಕ್ಕೂ ಹೆಚ್ಚಿನ ಸಹಸ್ರಾರು ಕೋಟಿ ರೂ.ಗಳ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಮಂಜೂರಾತಿ ದೊರೆತಿದ್ದು, ಶೀಘ್ರದಲ್ಲಿ ಕಾರ್ಯಾರಂಭಗೊಳ್ಳಲಿವೆ ಎಂದರು.
ಸಾಗರದಿಂದ ಮರಕುಟಕವರೆಗಿನ ರಸ್ತೆಯನ್ನು ದ್ವಿಪಥದ ರಸ್ತೆಯನ್ನಾಗಿ ಹೆದ್ದಾರಿ ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಲು ಡಿಪಿಆರ್ ತಯಾರಿಸುವ ಕೆಲಸ ಪ್ರಗತಿಯಲ್ಲಿದೆ. ಸಿಗಂಧೂರು ಬಳಿ ಶರಾವತಿ ಹಿನ್ನೀರಿಗೆ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಕೇಬಲ್ ಅಳವಡಿಸಿ ನಿರ್ಮಾಣ ಮಾಡುವ ವಿನೂತನ ವಿನ್ಯಾಸದ ಆಕರ್ಷಣೀಯ ಸೇತುವೆ ನಿರ್ಮಾಣಕ್ಕಾಗಿ 423.15ಕೋಟಿ, ಶಿವಮೊಗ್ಗ ನಗರದ ಸಂದೇಶ್ ಮೋಟಾರ್ಸ್ ನಿಂದ ಹರಕೆರೆವರೆಗೆ 4ಪಥದ ರಸ್ತೆ ನಿರ್ಮಾಣ ಕಾಮಗಾರಿಗೆ 54.58ಕೋಟಿ ಹಾಗೂ ಬೈಂದೂರು – ರಾಣಿಬೆನ್ನೂರು ರಸ್ತೆಯಲ್ಲಿ ದ್ವಿಪಥದ ರಸ್ತೆ ನಿರ್ಮಾಣ ಕಾಮಗಾರಿಗೆ 310ಕೋಟಿ ರೂ.ಗಳ ಕಾಮಗಾರಿಗೆ ಅನುಮೋದನೆ ದೊರೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜ್ಯೋತಿಪ್ರಕಾಶ್, ಡಿ.ಎಸ್.ಅರುಣ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಡಾ.ರಾಜೇಶ್ ಸುರಗೀಹಳ್ಳಿ ಮುಂತಾದವರು ಉಪಸ್ಥಿತರಿದ್ದರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post