ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅತಿವೃಷ್ಟಿಯಿಂದ ಬೆಳೆನಷ್ಟ ಮತ್ತು ರೈತರ ಸಮಸ್ಯೆಗಳು ಹಾಗೂ ಬೆಳೆವಿಮೆ ಬಗ್ಗೆ ಚರ್ಚಿಸಲು ಇಂದು ಸಂಸದ ಬಿ.ವೈ. ರಾಘವೇಂದ್ರ #MP Raghavendra ಅವರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಬೆಳೆವಿಮೆಗಾಗಿ ಈಗಾಗಲೇ ಕೇಂದ್ರದಿಂದ 52 ಕೋಟಿ, ರಾಜ್ಯದಿಂದ 52 ಕೋಟಿ ಮತ್ತು ರೈತರಿಂದ 23 ಕೋಟಿ ವಿಮಾ ಕಂತಿನ ಹಣವನ್ನು ಪಾವತಿಸಿದ್ದು, ವಿಮಾ ಕಂಪನಿಯಿಂದ ಕೇವಲ 113 ಕೋಟಿ ಮಾತ್ರ ರೈತರಿಗೆ ಪರಿಹಾರ ಬಂದಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಶೇ.75ರಷ್ಟು ಮಳೆ ಮಾಪಕಗಳು ಹಾಳಾಗಿದೆ. ಪರಿಹಾರ ಘೋಷಣೆ ಮಾಡಿರುವುದು ಅವೈಜ್ಞಾನಿಕವಾಗಿದೆ. ಕಂತು ಕಟ್ಟಿದ ಹಣದಷ್ಟು ಕೂಡ ಪರಿಹಾರ ಬಂದಿಲ್ಲ. ಅಧಿಕಾರಿಗಳು ಸಲ್ಲಿಸಿದ ಬೆಳೆನಷ್ಟದ ಪ್ರಮಾಣದಲ್ಲಿ ಬಹಳ ವ್ಯತ್ಯಾಸವಿದೆ. ಅವರು ಸೂಚಿಸಿದ್ದಕ್ಕಿಂತ 100 ಮಳೆ ಹೆಚ್ಚಾಗಿದೆ. ಅನೇಕ ಗೊಂದಲಗಳಿಂದಾಗಿ ವಿಮೆಯನ್ನು ಕಟ್ಟಿದ ರೈತರಿಗೆ ನಷ್ಟದ ಪ್ರಮಾಣದಲ್ಲಿ ಅಂಕಿಅಂಶಗಳ ವ್ಯತ್ಯಯದಿಂದಾಗಿ ವಿಮಾಮೊತ್ತ ಕಡಿಮೆ ಬಂದಿದೆ. ಇದರಿಂದ ರೈತರು ಸಂಕಷ್ಟಕ್ಕೊಳಗಾಗಿದ್ದು, ಅದರ ಚರ್ಚೆಗೆ ವಿಶೇಷ ಸಭೆ ಕರೆದಿತ್ತು. ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಮತ್ತು ಸಿಇಓ ಒಂದು ವಾರದಲ್ಲಿ ಎಲ್ಲವನ್ನು ಸರಿಪಡಿಸುವ ಆಶ್ವಾಸನೆ ಕೊಟ್ಟಿದ್ದಾರೆ. ಯಾವ ರೈತರಿಗೂ ಅನ್ಯಾಯ ಆಗದ ರೀತಿಯಲ್ಲಿ ಬೆಳೆವಿಮೆ ದೊರಕಿಸಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು.
ನಾನು ಈಗಾಗಲೇ ಕೇಂದ್ರ ಕೃಷಿ ಸಚಿವ ಶಿವರಾಜ್‍ಸಿಂಗ್ ಚೌವ್ಹಾಣ್ ಅವರನ್ನು ಭೇಟಿಮಾಡಿ, ಮಲೆನಾಡು ಭಾಗದ ರೈತರ ಸಮಸ್ಯೆಗಳ ಬಗ್ಗೆ ವಿವರಿಸಿದ್ದೇನೆ. ಅಡಿಕೆಗೆ ಬಂದ ಕೊಳೆರೋಗ ಮತ್ತು ಹಳದಿ ಎಲೆ ರೋಗದ ಬಗ್ಗೆಯೂ ಅವರಿಗೆ ವಿವರಿಸಿದ್ದು, ಆಮದು ಅಡಿಕೆಯನ್ನು ಕಡಿಮೆ ಮಾಡಬೇಕು ಎಂದು ವಿನಂತಿಸಿಕೊಂಡಿದ್ದೇನೆ ಎಂದರು.
ಮಳೆ ಮಾಪಕ ಇರುವ ಕೆಲವೆಡೆ ಮೇಲ್ಗಡೆಗೆ ಛಾವಣಿಹಾಕಿದ್ದು ಇದರಿಂದ ಮಳೆ ಮಾಪನದಲ್ಲಿ ವ್ಯತ್ಯಾಸ ಆಗಿ ತಪ್ಪು ಅಂಕಿ ಅಂಶಗಳಿಂದ ರೈತರ ಬೆಳೆನಷ್ಟ ಪ್ರಮಾಣ ನಮೂದಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಬಗ್ಗೆ ಅವರಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.
ಕೆಲವುಕಡೆ ರೈತರಿಗೆ ಹೆಕ್ಟೇರ್‍ವೊಂದಕ್ಕೆ ಅಡಿಕೆಗೆ 6000 ರೂ. ಪರಿಹಾರ ನೀಡಲಾಗಿದೆ. ಕೆಲವು ರೈತರಿಗೆ ಕೇವಲ 600 ರೂ. ಬಂದಿದೆ. ಸಂಸತ್‍ನಲ್ಲಿ ನಾನು ಈ ಬಗ್ಗೆ ಧ್ವನಿ ಎತ್ತಿದ್ದೇನೆ ಎಂದರು. ನಮ್ಮ ದೇಶದಲ್ಲಿ ಆಮದು ಅಡಿಕೆ ಪ್ರಮಾಣ ಹೆಚ್ಚಾಗುತ್ತಿದ್ದು, ಕಾರಣ ಇಲ್ಲಿ ಅಡಿಕೆ ಉತ್ಪನ್ನಗಳ ಬೇಡಿಕೆ ಹೆಚ್ಚಾಗಿದ್ದು, ಕೇವಲ 300 ಕೋಟಿಯಷ್ಟು ರಫ್ತಾಗುತ್ತಿದೆ ಎಂಬುದನ್ನು ಕೃಷಿ ಸಚಿವರು ಸಂಸತ್ತಿನಲ್ಲಿ ತಿಳಿಸಿದ್ದಾರೆ. ನಮ್ಮ ರೈತರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆಯನ್ನು ಬೆಳೆದರೂ ನಮ್ಮ ದೇಶದಲ್ಲಿ ಬೇಡಿಕೆ ಇದೆ ಎಂದರು.
ಇಂಡಿಗೋ ವಿಮಾನಗಳು ರದ್ದಾದ ಹಿನ್ನಲೆಯಲ್ಲಿ ಶಿವಮೊಗ್ಗ ಮತ್ತು ರಾಜ್ಯ ಸೇರಿದಂತೆ ಸಾವಿರಾರು ಪ್ರಯಾಣಿಕರಿಗೆ ಆದ ತೊಂದರೆ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಇತಿಹಾಸದಲ್ಲೇ ಮೊದಲ ಬಾರಿಗೆ ಈ ರೀತಿಯ ವಿಮಾನಯಾನ ವ್ಯವಸ್ಥೆಯಲ್ಲಿ ತೊಂದರೆಯಾಗಿದೆ. ಇಂಡಿಗೋ ಮತ್ತು ಜೆಟ್‍ಕ್ರಾಫ್ಟ್ ನಡುವಿನ ಶೀತಲಸಮರದಿಂದ ಈ ಸಮಸ್ಯೆ ಉದ್ಭವವವಾಗಿದ್ದು, ಭಾರತೀಯ ವಿಮಾನಯಾನ ಪ್ರಾಧಿಕಾರ ಇಂಡಿಗೋ ವಿಮಾನಯಾನ ಸಂಸ್ಥೆಗೆ ಕಳೆದ ಎರಡು ವರ್ಷದಿಂದ ಎಚ್ಚರಿಕೆಯ ನೋಟೀಸ್ ಕೊಡುತ್ತಾ ಬಂದಿದೆ. ಇಂಡಿಗೋ ಸಂಸ್ಥೆಯಿಂದ ಪ್ರಾಧಿಕಾರದ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ. 36,000 ಪೈಲೆಟ್‍ಗಳ ಹುದ್ದೆ ಖಾಲಿಯಿದ್ದು, ಈಗ ಕಾರ್ಯನಿರ್ವಹಿಸುವ ಪೈಲೆಟ್‍ಗಳಿಗೆ 16 ಗಂಟೆ ಕೆಲಸ ನೀಡಿದ್ದು ಕೂಡ ಆಕ್ರೋಶಕ್ಕೆ ಕಾರಣವಾಗಿದ್ದು, ಅವರು ಪ್ರತಿಭಟನೆಗೆ ಇಳಿದಿದ್ದಾರೆ. ಅನೇಕ ಬಾರಿ ಕೇಂದ್ರ ಸರ್ಕಾರ, ವಿಮಾನಯಾನ ಪ್ರಾಧಿಕಾರ, ವಿಮಾನ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದರೂ ಅವರು ಸರಿಪಡಿಸಿಕೊಳ್ಳದೇ ಇದ್ದದ್ದು ಈ ಸಮಸ್ಯೆಗೆ ಕಾರಣವಾಗಿದ್ದು, ಸಾರ್ವಜನಿಕರಿಗಾದ ನಷ್ಟವನ್ನು ವಿಮಾನಯಾನ ಸಂಸ್ಥೆಗಳೇ ತುಂಬಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಸಿಇಓ ಹೇಮಂತ್, ಅಪರ ಜಿಲ್ಲಾಧಿಕಾರಿ ಅಭಿಷೇಕ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಕೃಷಿ ಅಧಿಕಾರಿ ಕಿರಣ್‍ಕುಮಾರ್, ಮಾಜಿ ಶಾಸಕ ಅಶೋಕ್‍ನಾಯ್ಕ್, ಅಜಿತ್, ಮಲ್ಲಿಕಾರ್ಜುನ ಹಕ್ರೆ, ಟಿ.ಡಿ. ಮೇಘರಾಜ್, ಸಿದ್ಧಲಿಂಗಪ್ಪ, ಗಣೇಶ್ ಬಿಳಕಿ, ಕೆ.ವಿ. ಅಣ್ಣಪ್ಪ, ಸುನೀತಾ ಅಣ್ಣಪ್ಪ, ಸಂತೋಷ್ ಬಳ್ಳೇಕೆರೆ, ರಾಜೇಶ್ ಕಾಮತ್, ಕೃಷಿ ಇಲಾಖೆಯ ಅಧಿಕಾರಿಗಳು, ರೆವಿನ್ಯೂ ಅಧಿಕಾರಿಗಳು, ವಿಮಾ ಕಂಪನಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















