ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಬೈಂದೂರು ಹಾಗೂ ಮೂಕಾಂಬಿಕಾ ಅಭಯಾರಣ್ಯದಲ್ಲಿ ಪ್ರಾಣಿ ರಕ್ಷಣಾ ಕೇಂದ್ರ ಸ್ಥಾಪನೆ ಮಾಡುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಉಡುಪಿ ಜಿಲ್ಲೆಯ ಕುಂದಾಪುರ ಹಾಗೂ ಬೈಂದೂರು ತಾಲೂಕು ಮತ್ತು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕುಗಳ ವ್ಯಾಪ್ತಿಯಲ್ಲಿರುವ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯಕ್ಕೆ ಮೂಕಾಂಬಿಕಾ ದೇವಿಯ ಹೆಸರನ್ನಿಡಲಾಗಿದೆ. 370.37 ಚದರ ಕಿಮೀ ವಿಸ್ತೀರ್ಣದ ವಿಶಾಲ ಭೂಪ್ರದೇಶ ಹೊಂದಿರುವ ಈ ಅಭಯಾರಣ್ಯವು, ಪಶ್ಚಿಮ ಕರಾವಳಿಯ ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು ಮತ್ತು ಪಶ್ಚಿಮ ಕರಾವಳಿಯ ಅರೆನಿತ್ಯಹರಿದ್ವರ್ಣದ ಕಾಡುಗಳನ್ನು ಒಳಗೊಂಡಿದೆ ಎಂದವರು ತಿಳಿಸಿದ್ದಾರೆ.
ಈ ಅಭಯಾರಣ್ಯವು ಚಿರತೆ, ಕಾಡುನಾಯಿ, ನರಿ, ಕರಡಿ, ಸಾರಂಗ, ಜಿಂಕೆ ಮತ್ತು ಇತರ ಅನೇಕ ಪ್ರಾಣಿಗಳಿವೆ. ವಿಶೇಷವಾಗಿ ಇಲ್ಲಿ ಪ್ರಮುಖವಾಗಿ ಕಾಡಿನ ಮೈನಾ, ಬಿಳಿ ಕೆನ್ನೆಯ ಬುಲ್‌ಬುಲ್, ಕೆಂಪು ವೆಂಟೆಡ್ ಬಲ್‌ಬುಲ್, ಹಾರ್ನ್ ಬಿಲ್ಸ್ ಮತ್ತು ಇತರೆ ಪ್ರಮುಖ ಪಕ್ಷಿಗಳು ಆಶ್ರಯ ಪಡೆದಿವೆ. ಮಾನವ-ಪ್ರಾಣಿಗಳ ಸಂಘರ್ಷದಿಂದಾಗಿ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದಿದ್ದಾರೆ.

ವನ್ಯಜೀವಿಗಳ ನಿರ್ವಹಣೆ ಮತ್ತು ಸಂರಕ್ಷಣೆಗಾಗಿ ಸಾರ್ವಜನಿಕರ ಬೆಂಬಲವನ್ನು ಸೃಷ್ಟಿಸಲು ಹಾಗೂ ಮನುಷ್ಯ ಮತ್ತು ವನ್ಯಜೀವಿಗಳಿಗೆ ಸವಾಲಾಗಿರುವ ಈ ಸಮಸ್ಯೆಯನ್ನು ಪರಿಹರಿಸಲು ಕೆಲವು ಸೂಕ್ತ ಮತ್ತು ಪರಿಣಾಮಕಾರಿ ತಂತ್ರಗಳ ತುರ್ತು ಅಗತ್ಯವಾಗಿದೆ ಎಂದು ತಿಳಿಸಿರುವ ಅವರು, ವನ್ಯಜೀವಿಗಳಿಂದಾಗಿ ಈ ಭಾಗದಲ್ಲಿರುವ ಕೃಷಿ ಜಾಗ ಮತ್ತು ಅಡಿಕೆ ತೋಟಗಳಲ್ಲಿ ಸಮಸ್ಯೆ ತುಂಬಾ ತೀವ್ರವಾಗಿದೆ. ಸಾರಂಗ, ಕಾಡೆಮ್ಮೆ, ಕಾಡು ಹಂದಿಗಳು ಮತ್ತು ಜಿಂಕೆಗಳಿಂದಾಗಿ ಆಗಾಗ್ಗೆ ಬೆಳೆ ಹಾನಿ ಉಂಟಾಗುತ್ತಿದೆ. ಚಿರತೆಗಳು ಸಾಮಾನ್ಯವಾಗಿ ಹತ್ತಿರದ ಹಳ್ಳಿಯಿಂದ ದನಗಳನ್ನು ಹೊತ್ತೊಯ್ಯುವುದು ಸಾಮಾನ್ಯವಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರಾಣಿ ರಕ್ಷಣಾ ಕೇಂದ್ರ ಮತ್ತು ಮೃಗಾಲಯದ ಉದ್ಯಾನವನ್ನು ಮಂಜೂರು ಮಾಡುವಂತೆ ಕೇಂದ್ರ ಸಚಿವರಲ್ಲಿ ವಿನಂತಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಕಟ್ಟಿನಹೊಳೆಯಿಂದ ಕೊಡಚಾದ್ರಿವರೆಗಿನ ಮಣ್ಣಿ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನು ಸುಧಾರಣೆಗೆ ಕ್ರಮ
ಕರ್ನಾಟಕ ವನ್ಯಜೀವಿ ವಲಯದ ಕಟ್ಟಿನಹೊಳೆಯಿಂದ ಕೊಡಚಾದ್ರಿವರೆಗಿನ ಮಣ್ಣಿ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನು ಸುಧಾರಣೆಗೊಳಿಸಲು ಇತ್ತೀಚೆಗೆ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಅನುಮೋದನೆ ದೊರೆತಿದೆ. ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಭೆಯಲ್ಲಿಯೂ ಅನುಮೋದನೆಗೆ ಶಿಫಾರಸ್ಸು ಮಾಡುವಂತೆ ಕೇಂದ್ರ ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















