ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಮೆಗ್ಗಾನ್ ಆಸ್ಪತ್ರೆಯ ಬಳಿ ಇರುವ ಅನಧೀಕೃತ ತಿಂಡಿಗಾಡಿಗಳನ್ನು ಮಹಾನಗರ ಪಾಲಿಕೆಯ #Shivamogga Mahanagara Palike ಆಡಳಿತದ ವತಿಯಿಂದ ಇಂದು ಸಂಚಾರಿ ಪೊಲೀಸರ ನೆರವಿನೊಂದಿಗೆ ತೆರವುಗೊಳಿಸಲಾಯಿತು.
ನಗರದಲ್ಲಿ ಸುಮಾರು 150ಕ್ಕೂ ಹೆಚ್ಚು ತಳ್ಳುವ ಗಾಡಿಗಳು ಮತ್ತು ಜ್ಯೂಸ್ ಮಾಡುವ ಗಾಡಿಗಳು, ನಿಷ್ಕ್ರೀಯವಾಗಿದ್ದು ಬೀದಿಬದಿ ವ್ಯಾಪಾರದ ಕಾರ್ಡ್ ಪಡೆದಿದ್ದರೂ ಸಹ ಅವರು ಅದನ್ನು ಸದುಪಯೋಗ ಮಾಡದೆ ಸಾರ್ವಜನಿಕರಿಗೆ ಅಡ್ಡಿಯಾಗುವ ರೀತಿಯಲ್ಲಿ ಫುಟ್‍ಪಾತ್ ಮೇಲೆ ಶಾಶ್ವತವಾಗಿ ಸ್ಥಾಪಿಸಿದ್ದರು.
ಕಳೆದ 20 ದಿನಗಳ ಹಿಂದೆಯೇ ಮಹಾನಗರ ಪಾಲಿಕೆಯಿಂದ ಪತ್ರಿಕೆಗಳ ಮೂಲಕ ಸೂಚನೆ ಹೊರಡಿಸಿ, ತೆರವುಗೊಳಿಸುವಂತೆ ಸೂಚಿಸಲಾಗಿತ್ತು. ಆದರೂ ಕೂಡ ಸಂಬಂಧಪಟ್ಟ ತಳ್ಳುವ ಗಾಡಿಗಳ ಮಾಲೀಕರು ತೆರವುಗೊಳಿಸದೇ ಇದ್ದ ಕಾರಣ ಇಂದಿನಿಂದ ತೆರವು ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಮೆಗ್ಗಾನ್ ಆಸ್ಪತ್ರೆ ಮುಂಭಾಗ ಫುಟ್‍ಪಾತ್‍ನಲ್ಲಿರುವ ಮಾಲೀಕರು ಅದನ್ನು ನಿಷ್ಕ್ರೀಯವಾಗಿರಿಸಿದ ಮತ್ತು ಕೆಲವು ಅನಧೀಕೃತ ಗಾಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಸಧ್ಯಕ್ಕೆ ದೊಡ್ಪೆಪೇಟೆ ಪೊಲೀಸ್ ಠಾಣಾ ಆವರಣಕ್ಕೆ ಸ್ಥಳಾಂತರಿಸಲಾಗಿದ್ದು, ನಿಯಮಾನುಸಾರ ದಂಡಕಟ್ಟಿ ಮತ್ತೆ ಅವರಿಗೆ ಅವಕಾಶ ಇರುತ್ತದೆ.
ಈ ಸಂದರ್ಭದಲ್ಲಿ ಪಾಲಿಕೆಯ ಸಮುದಾಯ ವ್ಯವಹಾರಿಕ ಅಧಿಕಾರಿ ಅನುಪಮಾಭಟ್ ಅವರು ಮಾತನಾಡಿ, ಮಹಾನಗರ ಪಾಲಿಕೆಯ ಆಯುಕ್ತರ ಆದೇಶದ ಮೇರೆಗೆ ಅಧಿಕಾರಿಗಳ ತಂಡದೊಂದಿಗೆ ಬಂದು ಮೆಗ್ಗಾನ್ ಆಸ್ಪತ್ರೆ ಮುಂಭಾಗ ಇರುವ ಅನಧೀಕೃತ, ನಿಷ್ಕ್ರೀಯವಾಗಿದ್ದ ಗಾಡಿಗಳನ್ನು ತೆರವುಗೊಳಿಸಲಾಗಿದೆ.
ಕಡುಬಡವರಿಗೆ ಸ್ವಯಂ ಉದ್ಯೋಗದ ಅಡಿಯಲ್ಲಿ ಅವರಿಗೆ ನೆರವು ನೀಡಿ ಬೀದಿಬದಿಯಲ್ಲಿ ವ್ಯಾಪಾರ ಮಾಡಲು ಕಾರ್ಡ್‍ಗಳನ್ನು ವಿತರಿಸಿ, ಸಹಕರಿಸಿದ್ದೇವೆ. ಆದರೆ ಕೆಲವರು ಒಳಬಾಡಿಗೆಗೆ ನೀಡುವುದು ಮತ್ತು ಅಲ್ಲಿ ಯಾವುದೇ ಕಾರ್ಯಚಟುವಟಿಕೆ ನಡೆಸದೇ ಇರುವುದು ಮತ್ತು ತಮ್ಮ ಮೊಬೈಲ್ ಕ್ಯಾಂಟೀನ್ ಗಾಡಿಗಳ ಸುತ್ತಮುತ್ತ ಟರ್ಪಾಲು ಹಾಕಿ ಐದಾರು ಟೇಬಲ್ ಮತ್ತು ಕುರ್ಚಿಗಳನ್ನು ಅಳವಡಿಸಿ, ಫುಟ್‍ಪಾತ್‍ನಲ್ಲಿ ಹೋಟೆಲ್ಲನ್ನು ನಿರ್ಮಿಸಿದ್ದು, ಅಂತಹುಗಳನ್ನು ನೋಟೀಸು ನೀಡಿ, ಇಂದು ತೆರವುಗೊಳಿಸಲಾಗಿದೆ. ಈ ಕಾರ್ಯಾಚರಣೆ ನಿರಂತರವಾಗಿದ್ದು, ಬೀದಿಬದಿ ವ್ಯಾಪಾರಸ್ಥರು ಕೂಡಲೇ ತಮಗೆ ನೀಡಿದ ಸೌಲಭ್ಯದ ಸದುಪಯೋಗ ಮಾಡಬೇಕು. ಮತ್ತು ನಿಯಮಾವಳಿಗಳನ್ನು ಪಾಲಿಸಬೇಕು. ಸ್ವಚ್ಛತೆಯನ್ನು ಕಾಪಾಡಬೇಕು. ಪಾದಚಾರಿಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಇದನ್ನು ಮೀರಿ ಅವರು ವರ್ತಿಸಿದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಟಿವಿಸಿ ಸಮಿತಿಯ ಸದಸ್ಯರಾದ ಅಶೋಕ್‍ಕುಮಾರ್ ಗಾಂಧಿ, ಆರೋಗ್ಯ ನಿರೀಕ್ಷಕ ವಸಂತ್‍ಕುಮಾರ್, ಲೋಹಿತ್, ವಿಕಾಸ್, ಹಾಗೂ ಟ್ರಾಫಿಕ್ ಠಾಣೆಯ ವೃತ್ತ ನಿರೀಕ್ಷಕ ದೇವರಾಜಪ್ಪ ಮತ್ತು ಸಿಬ್ಬಂದಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















