ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕಲಾವಿದ, ಬರಹಗಾರ, ರಂಗಕರ್ಮಿ ಹಾಗೂ ಪತ್ರಕರ್ತರೂ ಆಗಿದ್ದ ಮೈ.ನಾ. ಸುಬ್ರಹ್ಮಣ್ಯ ಅವರು ಇಂದು ವಿಧಿವಶರಾಗಿದ್ದಾರೆ.
ಮೈನಾಸು ಎಂದೇ ಜನಜನಿತರಾಗಿದ್ದ ಇವರು ಪತ್ರಕರ್ತರಾಗಿಯೂ ಗುರುತಿಸಿಕೊಂಡಿದ್ದು, ಶಿವಮೊಗ್ಗ ಟೆಲೆಕ್ಸ್ ಪತ್ರಿಕೆ ಮೊದಲ ಪ್ರಕಾಶಕರಾಗಿದ್ದರು.
ಕಲಾವಿದರಾಗಿಯೂ ಗುರುತಿಸಿಕೊಂಡಿದ್ದ ಮೈನಾಸು ಅಂಬರೀಶ್ ನಾಯಕತ್ವ ಒಂದು ಚಿತ್ರದಲ್ಲಿಯೂ ಸಹ ನಟಿಸಿದ್ದರು. ಶಿವಮೊಗ್ಗ ಹಲವು ಸ್ಥಳೀಯ ಹಾಗೂ ಪ್ರಾದೇಶಿಕ ಪತ್ರಿಕೆಗಳಿಗೆ ಅಂಕಣ, ಚುಟುಕು, ಕವನಗಳನ್ನು ಬರೆಯುತ್ತಿದ್ದರು.
ಮೈನಾಸು ಅವರ ನಿಧನದಿಂದ ಶಿವಮೊಗ್ಗದ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಹಾಸ್ಯ ಕಾರ್ಯಕ್ರಮಗಳನ್ನು ನಾಡಿನ ಹಲವಡೆ ನೀಡಿದ್ದಾರೆ. ವಾಸವಿ ಸಮಾಜದ ಹಲವಾರು ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು. ವಿಭಿನ್ನ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ನೈಪುಣ್ಯ ಸಾಧಿಸಿದ್ದರು.
ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಮೈನಾಸು ಎಂದೇ ಚಿರಪರಿಚಿತ ನಾದ ಮೈ.ನಾ ಸುಬ್ರಹ್ಮಣ್ಯ ಸಜ್ಜನ ವ್ಯಕ್ತಿತ್ವದ ಜೀವ. ರಂಗಭೂಮಿ,ಸಾಹಿತ್ಯ, ಪತ್ರಿಕೋದ್ಯಮ, ಧಾರ್ಮಿಕ , ಶೈಕ್ಷಣಿಕ ಕ್ಷೇತ್ರಗಳಲ್ಲಿ ಆತ್ಮಪೂರ್ಣವಾಗಿ ತೊಡಗಿಸಿಕೊಂಡಿದ್ದ ಮೈನಾಸು ” ಶಿವಮೊಗ್ಗ ಟೆಲೆಕ್ಸ್” ಕನ್ನಡ ದಿನಪತ್ರಿಕೆ ಯ ಸಂಸ್ಥಾಪಕ ಸಂಪಾದಕನಾಗುವ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟವರು.
ಐದು ವರ್ಷಗಳ ಕಾಲ ಸಂಪಾದಕನಾಗಿ ಪತ್ರಿಕೆಯನ್ನು ವೃತ್ತಿಬದ್ಧವಾಗಿ ನಡೆಸಿಕೊಂಡು ಬಂದ ಶ್ರಮದಾಯಿ. ಆರ್ಯವೈಶ್ಯ ಸಾಹಿತ್ಯ ಪರಿಷತ್, ಕನ್ಯಾಕಪರಮೇಶ್ವರಿ ದೇವಸ್ಥಾನ ಸಮಿತಿ, ಆರ್ಯವೈಶ್ಯ ಶ್ರೀ ರಾಮ ಸಹಕಾರ ಸಂಘ, ವಾಸವಿ ವಿದ್ಯಾಲಯ, ಹವ್ಯಾಸಿ ರಂಗಕಲಾವಿದರ ಒಕ್ಕೂಟ ಹೀಗೆ…ಅನೇಕ ವಿಭಿನ್ನ ಸಂಘಟನೆಗಳಲ್ಲಿ ಸಕ್ರೀಯ ವಾಗಿ ತೊಡಗಿಸಿಕೊಂಡಿದ್ದರು.
Get In Touch With Us info@kalpa.news Whatsapp: 9481252093
Discussion about this post