ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೆಲವು ತಿಂಗಳುಗಳ ಹಿಂದೆ ಮಾದಕ ದ್ರವ್ಯ ಸೇವನೆಯಿಂದ ಸುದ್ದಿಯಾಗಿದ್ದ ಚಿತ್ರನಟಿಯರು ಮಾದಕ ದ್ರವ್ಯ ಸೇವಿಸಿದ್ದುದರ ಬಗ್ಗೆ ಹೈದ್ರಾಬಾದ್ ಫೋರೆನ್ಸಿಕ್ ಲ್ಯಾಬ್‌ನಿಂದ ದೃಢೀಕರಿಸಿದ ಅಧಿಕೃತ ವರದಿ ಬಂದಿದ್ದು, ಅವರನ್ನು ಶೀಘ್ರವೇ ನಿಯಮಾನುಸಾರ ಕಾನೂನು ಕ್ರಮಕ್ಕೆ ಗುರಿಪಡಿಸಲಾಗುವುದು ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಅವರು ಇಂದು ಮಾಚೇನಹಳ್ಳಿ ಕೆ.ಎಸ್.ಆರ್.ಪಿ. 8 ಬಟಾಲಿಯನ್‌ಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿದರು.
ರಾಜ್ಯದಲ್ಲಿ ನಡೆಯುತ್ತಿರುವ ಮಾದಕ ದ್ರವ್ಯ ಸಾಗಾಣೆ ಮತ್ತು ಅಕ್ರಮ ಮಾರಾಟದ ಕುರಿತು ಪೊಲೀಸ್ ಇಲಾಖೆಯಿಂದ ನಿರ್ದಾಕ್ಷಿಣ್ಯವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಇಂತಹ ದೃಷ್ಕೃತ್ಯದಲ್ಲಿ ಭಾಗಿಯಾಗುವ ಯಾವುದೇ ಚಟುವಟಿಕೆಯನ್ನು ನಿಯಂತ್ರಿಸುವುದು ಹಾಗೂ ವ್ಯಕ್ತಿಯನ್ನು ದಂಡನೆಗೆ ಗುರಿಪಡಿಸಲಾಗುವುದು. ಅದಕ್ಕಾಗಿ ಇಲಾಖೆಯಲ್ಲಿ ಪ್ರತ್ಯೇಕವಾದ ತಂಡವನ್ನು ರಚಿಸಲಾಗಿದೆ ಎಂದರು.
ರಾಜ್ಯದಲ್ಲಿಯೂ ಫೋರೆನ್ಸಿಕ್ ಲ್ಯಾಬ್‌ನ್ನು ಅತ್ಯಾಧುನಿಕ ರೀತಿಯಲ್ಲಿ ಉನ್ನತೀಕರಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಜಿಲ್ಲೆಯಲ್ಲಿ ಅವ್ಯಾಹತವಾಗಿ ಓಸಿ ಮಟ್ಕಾ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದು, ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸಂಬಂಧಿತ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೇ ಈ ಅಕ್ರಮದಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗಳ ಮೇಲೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಪೊಲೀಸ್ ಇಲಾಖೆಯಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಡ್ತಿ, ನೇಮಕಾತಿ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಕೆಲವು ವಿಷಯಗಳ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಪತ್ರ ಮುಖೇನ ತಿಳಿಸಿದ್ದಾರೆ. ಈ ಸಂಬಂಧ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು. ಅಂತೆಯೇ ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂಧಿಗಳಿಗೆ ಸುಸಜ್ಜಿತ ವಸತಿ ಗೃಹಗಳನ್ನು ನಿರ್ಮಿಸಿಕೊಡಲು ಉದ್ದೇಶಿಸಲಾಗಿದೆ ಎಂದರು.
ಇಲಾಖೆಯಲ್ಲಿ ಡಿ.ಎ.ಆರ್, ಪೊಲೀಸ್, ಕೆ.ಎಸ್.ಆರ್.ಪಿ. ಇನ್ನೂ ಹಲವು ವಿಭಾಗಗಳಿವೆ. ಅವುಗಳಲ್ಲಿನ ನುರಿತ ಸಿಬ್ಬಂದಿಗಳನ್ನು ಸಕಾಲಿಕವಾಗಿ ಬಳಸಿಕೊಳ್ಳಲು ಅನುಕೂಲವಾಗುವಂತೆ ಒಂದು ಇಲಾಖೆಯ ಅಧೀನಕ್ಕೊಳಪಡಿಸುವ ಬಗ್ಗೆ ಚರ್ಚಿಸಲಾಗುವುದು. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಸರ್ಕಾರವು ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ್ದು, ಅಂತೆಯೇ ರಾಜ್ಯದಲ್ಲಿ ಸಂಘರ್ಷಕ್ಕೆ ಅವಕಾಶವಿಲ್ಲದಂತೆ ಹಬ್ಬ-ಹರಿದಿನಗಳನ್ನು ಆಚರಿಸಲು ಸೂಚನೆ ನೀಡಲಾಗುವುದು ಎಂದರು.
ರಾಜ್ಯದಲ್ಲಿ ಈಗಾಗಲೇ ಔರಾದ್ಕರ್ ವರದಿ ಶೇ.80ರಷ್ಟು ಅನುಷ್ಟಾನಕ್ಕೆ ಬಂದಿದೆ. ತಾಂತ್ರಿಕ ತೊಡಕುಗಳಿಂದ ಬಾಕಿ ಉಳಿದಿರುವ ವರದಿಯನ್ನು ಅನುಷ್ಠಾನಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಪೊಲೀಸ್ ಸಿಬ್ಬಂದಿಗಳಿಗೆ ತರಬೇತಿ :
ಪೊಲೀಸರು ಸಾರ್ವಜನಿಕರೊಂದಿಗೆ ಸ್ನೇಹ ಪೂರ್ವಕವಾಗಿ ವರ್ತಿಸಬೇಕು ಹಾಗೂ ಅವರ ಅಗತ್ಯಗಳಿಗೆ ಪೂರಕವಾಗಿ ಸ್ಪಂದಿಸಬೇಕು. ಅದಕ್ಕಾಗಿ ಪೊಲೀಸ್ ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಲಾಗುವುದು ಎಂದರು.
ಆಫ್ಘಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರನ್ನು ಗುರುತಿಸಿ ಸುರಕ್ಷಿತವಾಗಿ ಕರೆತರಲು ಹಿರಿಯ ಪೊಲೀಸ್ ಅಧಿಕಾರಿ ಉಮೇಶ್‌ಕುಮಾರ್ ಅವರನ್ನು ನೇಮಿಸಲಾಗಿದೆ. ಇವರು ಕೇಂದ್ರ ರಕ್ಷಣಾ ಇಲಾಖೆಯೊಂದಿಗೆ ಸಂಪರ್ಕ ಸಾಧಿಸಿ, ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಪ್ರಯತ್ನ ಮುಂದುವರೆಯಲಿದೆ. ಈಗಾಗಲೇ ರಾಜ್ಯದ 9 ಜನರನ್ನು ತಾಯ್ನಾಡಿಗೆ ಕರೆತರಲಾಗಿದೆ ಎಂದರು.
ರಾಜ್ಯದ ಎಲ್ಲಾ ಜಿಲ್ಲೆಯ ಪೊಲೀಸ್ ಇಲಾಖೆಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ರಕ್ಷಣೆ ಬಗ್ಗೆ ವಿಶೇಷ ಕ್ರಮ ವಹಿಸಲಾಗುತ್ತಿದೆ. ಇಲಾಖೆಯ ನ್ಯೂನತೆಗಳನ್ನು ಅರಿತು ಸರಿಪಡಿಸಲು ಯತ್ನಿಸಲಾಗುವುದು. ಅಲ್ಲದೇ ಪೊಲೀಸ್ ಬಲವನ್ನು ಇನ್ನಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾರ್ವಜನಿಕ ನೆಮ್ಮದಿಯ ಬದುಕಿಗೆ ಅನುಕೂಲವಾಗುವಂತೆ ಅತ್ಯಾಧುನಿಕ ರೀತಿಯಲ್ಲಿ 112 ಸಹಾಯವಾಣಿ ಕೇಂದ್ರ ಆರಂಭಿಸಿದ್ದು, ಈ ಕೇಂದ್ರವನ್ನು ಅತ್ಯಾಧುನಿಕ ರೀತಿಯಲ್ಲಿ ಇನ್ನಷ್ಟು ವಿನ್ಯಾಸಗೊಳಿಸಲು ಉದ್ದೇಶಿಸಿದೆ. ಅದಕ್ಕಾಗಿ ಹೊಸ ವಾಹನಗಳನ್ನು ಖರೀದಿಸಲು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲು ಗಮನಹರಿಸಲಾಗುವುದು. ಅತ್ಯಲ್ಪ ಅವಧಿಯಲ್ಲಿ ನೊಂದ ನಾಗರೀಕರ ರಕ್ಷಿಸಲು ಹಾಗು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಈ ಪಡೆ ಕಾರ್ಯಪ್ರವೃತ್ತಗೊಳ್ಳಲಿದೆ. ರಾಜ್ಯದ ನಗರ ಪ್ರದೇಶಗಳಲ್ಲಿ ಎಂದರು.
ರಾಜ್ಯದ ಎಲ್ಲಾ ನಗರಗಳ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಇಲಾಖೆಯಿಂದ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅಂತೆಯೇ ಖಾಸಗಿ ಸಂಘ-ಸಂಸ್ಥೆಗಳವರು, ಉದ್ದಿಮೆದಾರರು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ. ಈ ಕ್ಯಾಮೆರಾಗಳ ಚಿತ್ರಿತ ಭಾಗವನ್ನು ಪೊಲೀಸ್ ಇಲಾಖೆಯ ಅಗತ್ಯಗಳಿಗೆ ಒದಗಿಸುವಂತೆಯೂ ಸೂಚಿಸಲಾಗಿದೆ ಎಂದರು.
ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗವನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಶಾಸಕ ಕೆ.ಬಿ. ಅಶೋಕನಾಯ್ಕ್ ಸೇರಿದಂತೆ ಕೆ.ಎಸ್.ಆರ್.ಪಿ.ಯ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post