ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರಮಟ್ಟದ ಸ್ಕ್ವಾಯ್ ಕ್ರೀಡೆಗೆ ರಾಜ್ಯದಿಂದ ಶಿವಮೊಗ್ಗ ಜಿಲ್ಲೆಯ 2 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ ಎಂದು ಕಲ್ಲುಗಂಗೂರಿನ ಮಾರುತಿ ಕರಾಟೆ ಹಾಗೂ ಕ್ರೀಡಾ ತರಬೇತಿ ಕೇಂದ್ರದ ಅಧ್ಯಕ್ಷ ಹಾಗೂ ತರಬೇತುದಾರ ರಮೇಶ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿ.24ರಂದು ಬೆಂಗಳೂರಿನಲ್ಲಿ ನಡೆದ ಸ್ಕ್ವಾಯ್ ಕ್ರೀಡೆಯಲ್ಲಿ ಶಿವಮೊಗ್ಗದ ಜೈನ್ ಪಬ್ಲಿಕ್ ಶಾಲೆಯ ಮದೀಹಾ ಹಾಗೂ ಡಿವಿಎಸ್ ಶಾಲೆಯ ಶಶಾಂಕ್ ಎಂಬ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜಸ್ಥಾನದ ಜೈಪುರದಲ್ಲಿ ಜನವರಿ 3ರಿಂದ ನಡೆಯಲಿರುವ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಹಾಗೆಯೇ ಇವರ ಜೊತೆಗೆ ಜಿಲ್ಲೆಯಿಂದ ಭಾಗವಹಿಸಿದ್ದ ಗುರುಕುಲ ಶಾಲೆಯ ಲೋಹಿತ್ ದ್ವಿತೀಯ ಸ್ಥಾನ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಲೇಖನ ತೃತೀಯ ಸ್ಥಾನ ಪಡೆದಿದ್ದಾರೆ ಎಂದರು.
ಪ್ರಥಮ ಸ್ಥಾನ ಪಡೆದ ಮದೀಹಾ ಹಾಗೂ ಶಶಾಂಕ್ ಅವರು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಮೊಟ್ಟಮೊದಲ ಪ್ರಯತ್ನದಲ್ಲಿಯೇ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ಮೇಲ್ಕಂಡ 4 ಮಕ್ಕಳು ಕಲ್ಲುಗಂಗೂರು ಗ್ರಾಮದಲ್ಲಿರುವ ಮಾರುತಿ ಕರಾಟೆ ಹಾಗೂ ಕ್ರೀಡಾ ತರಬೇತಿ ಕೇಂದ್ರದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಇದು ಇಲ್ಲಿನ ಸ್ಥಳಿಯರಿಗೂ ಅತ್ಯಂತ ಸಂತಸ ತಂದಿದೆ ಎಂದರು.
Also read: ಉತ್ತರ ಪ್ರದೇಶ | ಹಿಂದೂ ದೇಗುಲಗಳ ಪುರಾತನ ಸಾರ ಕಾಪಾಡಲು ಸಿಎಂ ಯೋಗಿ ಮಾಸ್ಟರ್ ಪ್ಲಾನ್
ಸ್ಕ್ವಾಯ್ ಕ್ರೀಡೆಯೂ ಭಾರತದ ಪ್ರಾಚೀನ ಯುದ್ಧ ಕಲೆಯಾಗಿದೆ. ಕಾಶ್ಮೀರದ ಮೂಲ ಹೊಂದಿದ್ದು, ಇತ್ತೀಚೆಗೆ ಗೋವಾದಲ್ಲಿ ನಡೆದ ನ್ಯಾಷನಲ್ ಗೇಮ್ಸ್‍ನಲ್ಲಿ ಇದನ್ನು ಅಳವಡಿಸಲಾಗಿದೆ. 2018ರಿಂದಲೇ ಶಿವಮೊಗ್ಗದ ಕ್ರೀಡಾಪಟುಗಳು ಈ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದಿಂದ ಆಯ್ಕೆಮಾಡಿ, ರಾಜ್ಯಮಟ್ಟಕ್ಕೆ ಕಳಿಸಲಾಗಿತ್ತು. ಈಗ ರಾಷ್ಟ್ರಮಟ್ಟಕ್ಕೆ ಪಾಲ್ಗೊಳ್ಳುತ್ತಿದ್ದಾರೆ. ಅವರು ವಿಜೇತರಾಗಲಿ ಎಂದರು.
ಸ್ಕ್ವಾಯ್ ಅಸೋಸಿಯೇಷನ್ ಆಫ್ ಕರ್ನಾಟಕದ ಉಪಾಧ್ಯಕ್ಷ ಶಿವಮೊಗ್ಗ ವಿನೋದ್ ಮಾತನಾಡಿ, ಈ ನಾಲ್ವರ ಸಾಧನೆ ಶ್ಲಾಘನೀಯವಾದದ್ದು ಅದರಲ್ಲೂ 2 ಮಕ್ಕಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಸಂತೋಷದ ವಿಷಯ. ಸರ್ಕಾರ, ಶಾಲೆಗಳು ಕ್ರೀಡೆಗಳಿಗೆ ಆದ್ಯತೆ ನೀಡಬೇಕು ಎಂದರಲ್ಲದೆ, ವಿಜೇತ ಮಕ್ಕಳಿಗೆ ಅಭಿನಂದನೆ ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪೋಷಕರಾದ ನಾಗರಾಜ್, ರಾಮಚಂದ್ರಪ್ಪ ಹಾಗೂ ಪ್ರಕಾಶ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post