ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರೀಯ ಏಕತಾ ದಿನಾಚರಣೆ (National Unity Day) ಹಾಗೂ ಮಾದಕ ದ್ರವ್ಯ ದುರುಪಯೋಗದ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಕೆಎಸ್ಆರ್ಪಿ ವತಿಯಿಂದ ಹಮ್ಮಿಕೊಂಡಿರುವ ರಾಷ್ಟ್ರೀಯ ಮೋಟಾರ್ ಸೈಕಲ್ (Motorcycle Rally) ರ್ಯಾಲಿ ಶನಿವಾರ ಚಿತ್ರದುರ್ಗದಿಂದ ಹಂಚಿನ ಸಿದ್ದಾಪುರ ಮಾರ್ಗವಾಗಿ ಶಿವಮೊಗ್ಗಕ್ಕೆ (Shivamogga) ಆಗಮಿಸಿತು. ನಗರದ ಗೋಪಿ ಸರ್ಕಲ್ನಲ್ಲಿ ರ್ಯಾಲಿ ತಂಡವನ್ನು ಸಾರ್ವಜನಿಕರು ಹಾಗೂ ಸಂಘಟಕರ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ನಿಖಿಲ್ ಬಿ., ಯುವಜನತೆ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿಕೊಂಡು ಇತರರಲ್ಲಿಯೂ ಜಾಗೃತಿ ಮೂಡಿಸಬೇಕು ಎಂದರು.
ಮಾದಕ ದ್ರವ್ಯಗಳ ದುರುಪಯೋಗವು ವ್ಯಕ್ತಿಯ ಆರೋಗ್ಯ, ಕುಟುಂಬ ಹಾಗೂ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಯುವಜನತೆ ದೃಢ ಸಂಕಲ್ಪದೊಂದಿಗೆ ಪ್ರತಿಜ್ಞೆ ಮಾಡಿ, ಮಾದಕ ದ್ರವ್ಯಗಳ ವಿರುದ್ಧದ ಹೋರಾಟದಲ್ಲಿ ಪೊಲೀಸ್ ಇಲಾಖೆ ಹಾಗೂ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಕರೆ ನೀಡಿದರು.
ಮಾದಕ ದ್ರವ್ಯ ವಿರುದ್ಧ ಕಠಿಣ ಕ್ರಮ
ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಸೇವನೆ ಮತ್ತು ಮಾರಾಟದ ವಿರುದ್ಧ ಪೊಲೀಸ್ ಇಲಾಖೆ ನಿರಂತರವಾಗಿ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಈ ವರ್ಷ ಶಿವಮೊಗ್ಗದಲ್ಲೇ ಮಾದಕ ದ್ರವ್ಯಗಳಿಗೆ ಸಂಬಂಧಿಸಿದಂತೆ ಸುಮಾರು 550 ಪ್ರಕರಣಗಳನ್ನು ದಾಖಲಿಸಲಾಗಿದೆ. ಸುಮಾರು 40 ಕೆ.ಜಿ. ಗಾಂಜಾ ಹಾಗೂ ಎಂಡಿಎಂಎ ಸೇರಿದಂತೆ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು.
ಮಾದಕ ದ್ರವ್ಯಗಳ ಮಾರಾಟದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಜೈಲಿಗೆ ಕಳುಹಿಸಲಾಗುತ್ತಿದೆ. ಎನ್ಡಿಪಿಎಸ್ ಕಾಯ್ದೆಯಡಿ ಆರೋಪಿಗಳಿಗೆ ಶಿಕ್ಷೆ ವಿಧಿಸುವ ಮೂಲಕ ಮಾದಕ ದ್ರವ್ಯಗಳ ಪಿಡುಗನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

‘ನಶಾ ಮುಕ್ತ ಕರ್ನಾಟಕ’ಕ್ಕೆ ವಿಶೇಷ ಅಭಿಯಾನ
ಕರ್ನಾಟಕವನ್ನು ಸಂಪೂರ್ಣ ನಶಾಮುಕ್ತ ರಾಜ್ಯವನ್ನಾಗಿ ಮಾಡುವ ಉದ್ದೇಶದಿಂದ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವತಿಯಿಂದ ವಿವಿಧ ವಿಶೇಷ ಅಭಿಯಾನಗಳನ್ನು ನಡೆಸಲಾಗುತ್ತಿದೆ. ‘ಬೇಡ ಬ್ರೋ’, ‘ನಶಾ ಮುಕ್ತ ಕರ್ನಾಟಕ’ ಹಾಗೂ ‘ಆಪರೇಷನ್ ರೈಸ್’ ಸೇರಿದಂತೆ ಹಲವು ಆ್ಯಂಟಿ ಡ್ರಗ್ ಕಾರ್ಯಕ್ರಮಗಳ ಮೂಲಕ ಯುವಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ರಾಜ್ಯದಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟದ ವಿರುದ್ಧ ಕಠಿಣ ಕ್ರಮ ಮುಂದುವರಿದಿದ್ದು, ಇದೇ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕೆಎಸ್ಆರ್ಪಿ ತಂಡವು ಬೆಂಗಳೂರಿನಿಂದ ಗುಜರಾತ್ನ ಕೇವಡಿಯಾವರೆಗೆ ಬೈಕ್ ರ್ಯಾಲಿ ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.

ಬೆಂಗಳೂರಿನಿಂದ ಕೇವಡಿಯಾವರೆಗೆ ಜಾಗೃತಿ ರ್ಯಾಲಿ
ರಾಷ್ಟ್ರೀಯ ಏಕತಾ ದಿನಾಚರಣೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆಯ ಅಂಗವಾಗಿ ಕೆಎಸ್ಆರ್ಪಿ ವತಿಯಿಂದ ರಾಜ್ಯಾದ್ಯಂತ ಬೈಕ್ ರ್ಯಾಲಿ ಆಯೋಜಿಸಲಾಗಿದೆ. ಬೆಂಗಳೂರಿನಿಂದ ಆರಂಭಗೊಂಡಿರುವ ರ್ಯಾಲಿಯು ಚಿತ್ರದುರ್ಗ, ಶಿವಮೊಗ್ಗ, ಸಾಗರ, ಗೋಕರ್ಣ, ಗೋವಾ, ಪಣಜಿ ಹಾಗೂ ಮುಂಬೈ ಮೂಲಕ ಸಾಗಲಿದೆ. ಬಳಿಕ ಗುಜರಾತ್ನ ಕೇವಡಿಯಾ ತಲುಪಿ ಜಾಗೃತಿ ಜಾಥಾ ಸಮಾಪ್ತಿಗೊಳ್ಳಲಿದೆ.
ಏಕತಾ ಗೋಡೆ ಎದುರು ಪ್ರತಿಜ್ಞೆ
ಗೋಪಿ ಸರ್ಕಲ್ನಲ್ಲಿ ನಡೆದ ಸ್ವಾಗತ ಸಮಾರಂಭದ ಬಳಿಕ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಬೈಕ್ ಸವಾರರು, ವಿದ್ಯಾರ್ಥಿಗಳು ಹಾಗೂ ಗಣ್ಯರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಅವರು ‘ಏಕತಾ ಗೋಡೆ’ಯ ಮುಂಭಾಗದಲ್ಲಿ ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಒಗ್ಗಟ್ಟಾಗಿ ಹೋರಾಡುವಂತೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಇದೇ ಸಂದರ್ಭದಲ್ಲಿ ಎಸ್ಪಿ ಸೇರಿದಂತೆ ಯುವಕರು ‘ಏಕತಾ ಗೋಡೆ’ ಮೇಲೆ ತಮ್ಮ ಸಂದೇಶಗಳನ್ನು ಬರೆದು ಮಾದಕ ದ್ರವ್ಯಗಳ ವಿರುದ್ಧದ ಜಾಗೃತಿಗೆ ಬೆಂಬಲ ವ್ಯಕ್ತಪಡಿಸಿದರು.

Shivamogga: ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ
ಪ್ರತಿಜ್ಞಾ ವಿಧಿ ಸ್ವೀಕರಿಸಿದ ಬಳಿಕ ಸ್ಥಳೀಯ ಬೈಕ್ ಸವಾರರೊಂದಿಗೆ ರ್ಯಾಲಿ ಗೋಪಿ ಸರ್ಕಲ್ನಿಂದ ಆರಂಭವಾಯಿತು. ರ್ಯಾಲಿಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸಿತು.
ಗೋಪಿ ಸರ್ಕಲ್ನಿಂದ ಆರಂಭಗೊಂಡ ರ್ಯಾಲಿಯು ಎ.ಎ. ಸರ್ಕಲ್, ಕರ್ನಾಟಕ ಸಂಘ, ಶಂಕರ ಮಠ ರಸ್ತೆ, ಸಂಗೊಳ್ಳಿ ರಾಯಣ್ಣ ಸರ್ಕಲ್, ಕೆಇಬಿ ಸರ್ಕಲ್, ರೈಲ್ವೆ ನಿಲ್ದಾಣದ ಎದುರು, ಎ.ಎ. ಕಾಲೋನಿ, ಉಷಾ ಸರ್ಕಲ್, ವಿನೋಬಾ ನಗರ 60 ಅಡಿ ರಸ್ತೆ, ಆಲ್ಕೋಳ ಸರ್ಕಲ್, ಗೋಪಾಲ ಗೌಡ ಬಡಾವಣೆ ಹಾಗೂ ಡಿವಿಜಿ ಸರ್ಕಲ್ ಮೂಲಕ ಸಾಗಿತು.
ಬಳಿಕ ಡಿಎಆರ್ ಮಂಡಳಿ ಸರ್ಕಲ್, ಸಂದೇಶ್ ಮೋಟಾರ್ಸ್, ಎನ್.ಟಿ. ರಸ್ತೆ, ಗೋಪಾಳ ಬಸ್ ನಿಲ್ದಾಣ ಹಾಗೂ ತುಂಗಾ ನಗರ ಬೈಪಾಸ್ ಮೂಲಕ ಸಾಗಿ ಅಶೋಕ ಸರ್ಕಲ್ ಆಡಿಟೋರಿಯಂನಲ್ಲಿ ರ್ಯಾಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.
Also Read>> ಮೈಸೂರು ದಸರಾ ಕಂಬಳಕ್ಕೆ ಕಾನೂನು ಸಂಕಷ್ಟದ ಭೀತಿ? ಪ್ರಾಣಿ ಕಲ್ಯಾಣ ನಿಯಮಗಳ ಬಗ್ಗೆ ಪ್ರಶ್ನೆ?
ಸಂಚಾರ ನಿಯಮ ಪಾಲನೆಯ ಸಂದೇಶ
ರ್ಯಾಲಿಯಲ್ಲಿ ಭಾಗವಹಿಸಿದ್ದ ಬೈಕ್ ಸವಾರರು ಗುಣಮಟ್ಟದ ಹೆಲ್ಮೆಟ್ ಧರಿಸಿ, ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಸಂದೇಶವನ್ನೂ ನೀಡಿದರು. ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸುವುದರ ಜೊತೆಗೆ ಸುರಕ್ಷಿತ ವಾಹನ ಚಾಲನೆ ಹಾಗೂ ಜವಾಬ್ದಾರಿಯುತ ನಾಗರಿಕತೆಯ ಮಹತ್ವವನ್ನು ಸಾರಲಾಯಿತು.
ಮಾದಕ ದ್ರವ್ಯಗಳ ವಿರುದ್ಧದ ಈ ಐಕ್ಯತಾ ಅಭಿಯಾನದಲ್ಲಿ ಕೆಎಸ್ಆರ್ಪಿ ಕಮಾಂಡೆಂಟ್ ಯುವಕುಮಾರ್, ಹಿರಿಯ ಹಾಗೂ ಕಿರಿಯ ಪೊಲೀಸ್ ಅಧಿಕಾರಿಗಳು, ನಗರದ ಅನೇಕ ಯುವಕರು ಮತ್ತು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












