ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಯುಷ್ ಸಚಿವಾಲಯ, ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥಾನ, ವೇದವ್ಯಾಸ ಯೋಗಪ್ರತಿಷ್ಠಾನ ಮೈಸೂರು, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ, ಶಿವಮೊಗ್ಗ, ಶಿವಮೊಗ್ಗ ಯೋಗೋತ್ಸವ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಮಾ.30ರಂದು ಶ್ರೀ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಯೋಗೋತ್ಸವವನ್ನು-2026ನ್ನು #National Yoga Festival ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಯೋಗೋತ್ಸವ ಸಂಚಾಲಕ ಡಾ.ಕೆ.ರಾಘವೇಂದ್ರ ಪೈ ಹೇಳಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ವಿಶೇಷ ಕಾರ್ಯಕ್ರಮವು ಅಂತರಾಷ್ಟ್ರೀಯ ಯೋಗ ದಿನದ 100 ದಿನಗಳ ಮುಂಚೆಯೇ ನಡೆಯುತ್ತಿದೆ. ಇದು 100 ದಿನಗಳ ಕೌಂಟ್‍ಡೌನ್ ಕಾರ್ಯಕ್ರಮವಾಗಿದೆ. ಪ್ರತೀವರ್ಷ ಜೂ.21ರಂದು ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. ಅದರ ಮುನ್ನ ದಿನವಾಗಿ ರಾಷ್ಟ್ರವ್ಯಾಪ್ತಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ದೇಶದ ನೂರು ನಗರಗಳಲ್ಲಿ ನೂರು ಸಂಸ್ಥೆಗಳು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಅದರಲ್ಲಿ ಶಿವಮೊಗ್ಗವೂ ಕೂಡಾ ಒಂದು ಎಂದರು.
ಶಿವಮೊಗ್ಗದಲ್ಲಿ ನಡೆಯುವ ಯೋಗೋತ್ಸವದಲ್ಲಿ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯೋಗಾಭ್ಯಾಸಿಗಳು, ಶಿಕ್ಷಕರು, ವಿವಿಧ ಯೋಗ ಸಂಸ್ಥೆಗಳು, ಯೋಗ ಗುರುಗಳು ಭಾಗವಹಿಸಲಿದ್ದಾರೆ. ಯೋಗದಲ್ಲಿ ಸಾಧನೆ ಮಾಡಿದ ಭಾಮಾ ಶ್ರೀಕಂಠ ಹಾಗೂ ಡಾ. ಮಣೂರು ಪ್ರಕಾಶ ಪ್ರಭು ಅವರುಗಳನ್ನು ಸನ್ಮಾನಿಸಲಾಗುವುದು ಎಂದರು.
ಅಂದು ಬೆಳಿಗ್ಗೆ 6.30ರಿಂದ 8.30ರವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶಾಖಾ ಮಠದ ಶ್ರೀ ನಾದಮಯಾನಂದಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಸಂಸದ ಬಿ.ವೈ.ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಶಾಸಕ ಎಸ್.ಎನ್.ಚನ್ನಬಸಪ್ಪ ಭಾಗವಹಿಸುವರು ಎಂದರು.
ಯೋಗದ ಮಹತ್ವವನ್ನು ಸಮಾಜದ ಎಲ್ಲಾ ವರ್ಗಗಳಿಗೆ ಪರಿಚಯಿಸುವುದು, ಯುವಕರಲ್ಲಿ ಶಾರೀರಿಕ ಹಾಗೂ ಮಾನಸಿಕ ಶಕ್ತಿಯನ್ನು ವೃದ್ಧಿಸುವುದು ಒಂದು ಭೂಮಿ, ಒಂದು ಆರೋಗ್ಯ ಸಂದೇಶ ಸಾರುವುದು ಈ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದ ಉದ್ದೇಶವಾಗಿದೆ. ಎಲ್ಲಾ ಯೋಗ ಬಂಧುಗಳು ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಭಾಗವಹಿಸಿದ ಎಲ್ಲಾ ಯೋಗಬಂಧುಗಳಿಗೆ ಪ್ರಮಾಣಪತ್ರ ನೀಡಲಾಗುವುದು. ವಿವಿಧ ಯೋಗ ಸಂಸ್ಥೆಗಳ ಶಿಕ್ಷಕರಿಗೆ ಪ್ರಶಂಸನಾ ಪತ್ರ ನೀಡಲಾಗುವುದು. ಅಲ್ಲದೆ ಯೋಗ ಶಿಬಿರಾರ್ಥಿಗಳಿಂದ ಯೋಗ ಗುಚ್ಚದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಮಣೂರು ಪ್ರಕಾಶ ಪ್ರಭು, ಅನಿಲ್ ಕುಮಾರ್ ಶೆಟ್ಟರ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















