ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಹಾಗೂ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿರುವ ಬೀದಿ ದೀಪಗಳ ನಿರ್ವಹಣೆಯಲ್ಲಿ ಅಧಿಕಾರಿಗಳ ಉದಾಸೀನತೆ ಮತ್ತು ಬೇಜವಾಬ್ದಾರಿತನವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಶಾಸಕರ ಅಧಿಕೃತ ಕಚೇರಿಯಾದ ‘ಕರ್ತವ್ಯ ಭವನ’ದಲ್ಲಿ ಶಿವಮೊಗ್ಗ ನಗರದ ವಿದ್ಯುತ್ ಸರಬರಾಜು ಮತ್ತು ಬೀದಿ ದೀಪಗಳ ನಿರ್ವಹಣೆಗೆ ಸಂಬಂಧಿಸಿದಂತೆ ಮೆಸ್ಕಾಮ್ ಹಾಗೂ ಪಾಲಿಕೆಯ ವಿದ್ಯುತ್ ವಿಭಾಗದ ಅಧಿಕಾರಿಗಳೊಂದಿಗೆ ಶಾಸಕರು ತುರ್ತು ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ಬೀದಿ ದೀಪಗಳು ಕೆಟ್ಟು ಹೋಗಿದ್ದರೂ ಸಕಾಲಕ್ಕೆ ದುರಸ್ತಿ ಮಾಡದ ಇಲಾಖೆಯ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಸಾರ್ವಜನಿಕರಿಂದ ಸಾಲು ಸಾಲು ದೂರುಗಳು ಬರುತ್ತಿರುವುದನ್ನು ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರಾತ್ರಿ ವೇಳೆಯಲ್ಲಿ ಕತ್ತಲೆಯ ವಾತಾವರಣದಿಂದಾಗಿ ಸಾರ್ವಜನಿಕರು, ವಿಶೇಷವಾಗಿ ಮಹಿಳೆಯರು ಮತ್ತು ಹಿರಿಯ ನಾಗರಿಕರು ಓಡಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳು ತಮ್ಮ ಕಚೇರಿ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ, ಎಲ್ಲಾ ಬೀದಿ ದೀಪಗಳು ಕಾರ್ಯನಿರ್ವಹಿಸುವಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.
ಮುಂದುವರಿದು, ನಗರದ ಬೀದಿ ದೀಪಗಳ ದೈನಂದಿನ ನಿರ್ವಹಣೆಯ ಗುತ್ತಿಗೆ ಪಡೆದು, ನಿಯಮಾವಳಿಗಳ ಪ್ರಕಾರ ಸರಿಯಾಗಿ ಕಾರ್ಯನಿರ್ವಹಿಸದೆ ಸಾರ್ವಜನಿಕ ಆಸ್ತಿಗೆ ಹಾಗೂ ಜನಸಾಮಾನ್ಯರ ಸುಗಮ ಜೀವನಕ್ಕೆ ಅಡ್ಡಿಪಡಿಸುತ್ತಿರುವ ಗುತ್ತಿಗೆದಾರರ (Contractors) ವಿರುದ್ಧ ತಕ್ಷಣವೇ ಶಿಸ್ತುಕ್ರಮ ಕೈಗೊಳ್ಳಬೇಕು. ಅಂತಹ ವಿಫಲ ಮತ್ತು ಬೇಜವಾಬ್ದಾರಿ ಗುತ್ತಿಗೆದಾರರಿಗೆ ಇಲಾಖೆಯ ವತಿಯಿಂದ ಅಧಿಕೃತ ನೋಟಿಸ್ ನೀಡಿ, ಸೂಕ್ತ ಕ್ರಮ ಜರುಗಿಸಬೇಕು ಎಂದು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಪರಿಶೀಲನಾ ಸಭೆಯಲ್ಲಿ ವಿದ್ಯುತ್ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು, ಪಾಲಿಕೆಯ ವಿದ್ಯುತ್ ವಿಭಾಗದ ಅಧಿಕಾರಿಗಳು ಹಾಗೂ ಶಾಸಕರ ಕಾರ್ಯಾಲಯದ ಪ್ರಮುಖರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










Comments 1