ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ವಾತಂತ್ರ್ಯ ಪೂರ್ವದಲ್ಲಿ ವಿದ್ಯಾ ಕ್ಷೇತ್ರಕ್ಕೆ ಖಾಸಗಿ ಭಾಗವಹಿಸುವಿಕೆಯ ಉದ್ದೇಶದಿಂದ ಸ್ಥಾಪನೆಗೊಂಡ ಪ್ರತಿಷ್ಟಿತ ರಾಷ್ಟ್ರೀಯ ಶಿಕ್ಷಣ ಸಮಿತಿಯು National Education Committee 75ನೇ ವರ್ಷದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು ಭಾರತೀಯ ಅಂಚೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಎನ್.ಇ.ಎಸ್ ವಿಶೇಷ ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಎನ್‌ಇಎಸ್ ಅಮೃತ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷರಾದ ಡಾ. ಪಿ.ನಾರಾಯಣ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಶಿವಮೊಗ್ಗ ಜಿಲ್ಲೆಯ ಹೋರಾಟಗಾರರು ಮಹಾತ್ಮ ಗಾಂಧೀಜಿಯವರ ಕರೆಗೆ ಮನ್ನಣೆ ನೀಡಿ ‘ನಹೀ ಜ್ಞಾನೇನ ಸದೃಶ್ಯಂ’ ಎಂಬ ಘೋಷ ವಾಕ್ಯದಡಿ 1946ರಲ್ಲಿ ಸ್ಥಾಪನೆಗೊಂಡ ರಾಷ್ಟ್ರೀಯ ಶಿಕ್ಷಣ ಸಮಿತಿಯು ಮೊದಲ ಹಂತವಾಗಿ ರಾಷ್ಟ್ರೀಯ ಪ್ರೌಢ ಶಾಲೆಯನ್ನು ಪ್ರಾರಂಭಿಸಲಾಯಿತು. ಕರ್ನಾಟಕ ಸರ್ಕಾರದ ಕೃಷಿ ಸಚಿವರಾಗಿದ್ದ ದಿ.ಎಚ್.ಎಸ್. ರುದ್ರಪ್ಪನವರು ಸಂಸ್ಥೆಯ ಮೊದಲ ಸ್ಥಾಪಕ ಅಧ್ಯಕ್ಷರಾಗಿ ಮಹಾನ್ ದಾನಿಗಳಾಗಿದ್ದ ದಿ. ಹೆಚ್.ವೆಂಕಟಶಾಸ್ತ್ರಿಗಳು ಉಪಾಧ್ಯಕ್ಷರಾಗಿದ್ದರು. ದಿ. ಎಸ್.ವಿ. ಕೃಷ್ಣಮೂರ್ತಿರಾವ್ ಕಾರ್ಯದರ್ಶಿಗಳಾಗಿ ದಿ. ಎಸ್.ಆರ್. ನಾಗಪ್ಪಶೆಟ್ಟಿ ಸಹ ಕಾರ್ಯದರ್ಶಿಗಳಾಗಿ, ಹೆಚ್. ಲಿಂಗಪ್ಪ ಖಜಾಂಚಿಗಳಾಗಿ ಹಾಗೂ ಕಡಿದಾಳ್ ಮಂಜಪ್ಪ, ನರಸಿಂಹ ಕಾಮತ್, ಡಾ. ಕೆ.ಎನ್. ದತ್ತಾತ್ರಿ, ಜಯತೀರ್ಥಾಚಾರ್, ಡಿ.ಎಸ್. ದಿನಕರ್, ಹೆಚ್. ಸಿದ್ದಯ್ಯ, ಶ್ರೀನಿವಾಸ ಅಯ್ಯಂಗಾರ ಅವರುಗಳು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು. ಪ್ರಸ್ತುತ ಕಲೆ, ವಾಣಿಜ್ಯ, ವಿಜ್ಞಾನ, ಎಂಜಿನಿಯರಿಂಗ್, ಫಾರ್ಮಸಿ, ಕಾನೂನು, ಸಿಬಿಎಸ್‌ಸಿ, ಐಸಿಎಸ್‌ಸಿ, ಎಂಬಿಎ, ಎಂಸಿಎ ಸೇರಿದಂತೆ ಪ್ರಾಥಮಿಕ, ಪ್ರೌಢ, ಪಿಯುಸಿ, ಪದವಿ, ಸ್ನಾತ್ತಕೊತ್ತರ ಪದವಿ ಶಿಕ್ಷಣದ 36 ವಿದ್ಯಾಲಯಗಳನ್ನು ಮುನ್ನಡೆಸಲಾಗುತ್ತಿದ್ದು ಮಲೆನಾಡಿನ ಶೈಕ್ಷಣಿಕ ಹೆಮ್ಮರವಾಗಿ ಬೆಳೆದು ನಿಂತಿದೆ. ಸರಿಸುಮಾರು 1500ಕ್ಕೂ ಹೆಚ್ಚು ಸಿಬ್ಬಂದಿಗಳು, 14000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಈ ಮೂಲಕ ಹಳ್ಳಿ ಹಳ್ಳಿಗಳಿಗೆ ಶಿಕ್ಷಣದ ಕ್ರಾಂತಿಯ ಕುರಿತ ಗಾಂಧೀಜಿಯವರ ಆಶಯವನ್ನು ಪೂರೈಸುವ ಸಾರ್ಥಕತೆಯ ಕೆಲಸವನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ನಡೆಸಿಕೊಂಡು ಬರುತ್ತಿದೆ. ಕಳೆದ 75 ವರ್ಷದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಎನ್.ಇ.ಎಸ್ ವಿವಿಧ ಸಂಸ್ಥೆಗಳಿಂದ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ.
ಮಾ.10ರಂದು ಸಂಜೆ 4ಕ್ಕೆ ಎನ್.ಇ.ಎಸ್ ಕಾರ್ಯಾಲಯದ ಆವರಣದಲ್ಲಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು ದಕ್ಷಿಣ ವಲಯ ಪೋಸ್ಟ್ ಮಾಸ್ಟರ್ ಜನರಲ್ ಡಿ.ಎಸ್.ವಿ.ಆರ್. ಮೂರ್ತಿ ಅಂಚೆ ಲಕೋಟೆ ಬಿಡುಗಡೆ ಮಾಡಲಿದ್ದಾರೆ. ಮೇಯರ್ ಸುನಿತಾ ಅಣ್ಣಪ್ಪ, ಶಿವಮೊಗ್ಗ ವಿಭಾಗ ಅಂಚೆ ಅಧಿಕ್ಷಕ ಜಿ.ಹರೀಶ್, ಉನ್ನತ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಅಶೋಕ.ಡಿ.ರೇವಣಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್.ಎಂ.ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್.ವಿಶ್ವನಾಥ ಅಧ್ಯಕ್ಷತೆ ವಹಿಸಲಿದ್ದು, ಉಪಾಧ್ಯಕ್ಷರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿಗಳಾದ ಡಿ.ಆರ್.ಅಮರೇಂದ್ರ ಕಿರೀಟಿ, ಖಜಾಂಚಿ ಸಿ.ಆರ್.ನಾಗರಾಜ ಅವರು ಉಪಸ್ಥಿತರಿರುವರು. ಇದೇ ವೇಳೆ ಮಾಸ ಪತ್ರಿಕೆ ‘ರಾ.ಶಿ ಸಂಗತಿ’ ಬಿಡುಗಡೆಗೊಳ್ಳಲಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿದೆ.
Also read: ವಿಶ್ವಮಹಿಳಾ ದಿನಾಚರಣೆ ನಿಮಿತ್ತ ಶ್ರಮಿಕ ಮಹಿಳೆಯರಿಗೆ ಶಾಲು ಹೊದಿಸಿ ಸನ್ಮಾನ
ವರ್ಷವಿಡಿ ವಿಶೇಷ ಕಾರ್ಯಕ್ರಮ: ಕೋವಿಡ್ ಸಾಂಕ್ರಾಮಿಕ ಹಿನ್ನಲೆಯಲ್ಲಿ ಅಮೃತ ಮಹೋತ್ಸವ ಆಚರಣೆಯನ್ನು ಮುಂದೂಡಲಾಗಿತ್ತು. ಈ ಹಿನ್ನಲೆಯಲ್ಲಿ2022-23ರ ವರ್ಷವನ್ನು ಎನ್.ಇ.ಎಸ್ ಅಮೃತ ವರ್ಷವೆಂದು ಘೋಷಿಸಲಾಗಿದ್ದು, ಪ್ರತಿ ತಿಂಗಳು ಉಪನ್ಯಾಸ ಸರಣಿ ಸೇರಿದಂತೆ ವಿವಿಧ ವೈಜ್ಞಾನಿಕ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಅಮೃತ ಮಹೋತ್ಸವದ ಸವಿನೆನಪಿಗಾಗಿ ಒಂದು ಶಾಶ್ವತ ಯೋಜನೆಯನ್ನು ಸಹ ಅನುಷ್ಟಾನಗೊಳಿಸಲಾಗುವುದು.
ವಿದ್ಯಾರ್ಥಿಗಳೊಂದಿಗೆ ಇಸ್ರೋ ಮಾಜಿ ಅಧ್ಯಕ್ಷ ಡಾ.ಶಿವನ್ ಸಂವಾದ:
ಮಾ.12ರಂದು ಮಧ್ಯಾಹ್ನ 3ಗಂಟೆಗೆ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಮೃತ ಮಹೋತ್ಸವದ ಉಪನ್ಯಾಸ ಸರಣಿಯ ಪ್ರಥಮ ಉಪನ್ಯಾಸ ಆಯೋಜಿಸಲಾಗಿದ್ದು ಇಸ್ರೋ ಮಾಜಿ ಅಧ್ಯಕ್ಷರಾದ ಡಾ. ಕೆ.ಶಿವನ್ ಅವರು ‘ದೈನಂದಿನ ಜೀವನದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಪ್ರಭಾವ’ ಕುರಿತಾಗಿ ಮಾತನಾಡಲಿದ್ದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್.ವಿಶ್ವನಾಥ, ಉಪಾಧ್ಯಕ್ಷರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಖಜಾಂಚಿ ಸಿ.ಆರ್.ನಾಗರಾಜ, ಕುಲಸಚಿವರಾದ ಪ್ರೊ.ಟಿ.ಎಸ್.ಹೂವಯ್ಯಗೌಡ, ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post