ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ನವದೆಹಲಿ |
ಶಿವಮೊಗ್ಗ ಹಾಗು ಸುತ್ತಮುತ್ತಲಿನ ಜಿಲ್ಲೆಗಳ ಪ್ರಧಾನ ಬೆಳೆಯಾದ ಮೆಕ್ಕೆಜೋಳದ ಸಂಶೋಧನಾ ಕೇಂದ್ರ ಸ್ಥಾಪಿಸಲು ಅಗತ್ಯವಾದ ಆರ್ಥಿಕ ನೆರವು ಮಂಜೂರು ಮಾಡುವಂತೆ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ MP Raghavendra ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ Nirmala Seetharaman ಅವರಿಗೆ ಮನವಿ ಮಾಡಿದ್ದಾರೆ.
ಮೆಕ್ಕೆಜೋಳ ಬೆಳೆ ಪ್ರದೇಶ ರಾಜ್ಯದಲ್ಲಿ ಹೆಚ್ಚುತ್ತಿದ್ದರೂ, ಇಳುವರಿ ಮಾತ್ರ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ. ಈ ಕೇಂದ್ರ ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿದ ಸಂಸದರು ಈ ಸಂಬಂಧ ಮನವಿ ಪತ್ರ ಸಲ್ಲಿಸಿದರು. ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ಮೆಕ್ಕೆ ಜೋಳ ಸಂಶೋಧನಾ ಕೇಂದ್ರಕ್ಕೆ ನಡೆಸಿದ ಸ್ಥಳ ಪರಿಶೀಲನೆ ಬಳಿಕ, ಶಿವಮೊಗ್ಗದಲ್ಲಿ ಐಸಿಎಆರ್- ಐಐಎಂಆರ್ ನ ಮೆಕ್ಕೆಜೋಳ ಪ್ರಾದೇಶಿಕ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಶಿಫಾರಸು ಮಾಡಿದೆ ಎಂದು ಸಂಸದರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
ಮೆಕ್ಕೆಜೋಳ ಸಂಶೋಧನಾ ಕೇಂದ್ರಕ್ಕೆ ಪೂರಕವಾದ ಎಲ್ಲಾ ಅಂಶಗಳು ಶಿವಮೊಗ್ಗದಲ್ಲಿ ಇರುವುದನ್ನು ಪರಿಗಣಿಸಿ ಸ್ಥಳ ಆಯ್ಕೆ ಸಮಿತಿಯು ಶಿವಮೊಗ್ಗಕ್ಕೆ ಈ ಕೇಂದ್ರವನ್ನು ಶಿಫಾರಸು ಮಾಡಿದೆ. ಅದರಂತೆ, ಮುಂದಿನ ಅಗತ್ಯ ಕ್ರಮಕ್ಕಾಗಿ ಎಸ್ಎಸ್ಸಿ ವರದಿಯನ್ನು ಐಸಿಎಆರ್ಗೆ ಸಲ್ಲಿಸಲಾಗಿದೆ. ಇದಕ್ಕೆ ಸುಮಾರು ಐದು ಕೋಟಿ ಅನುದಾನವನ್ನು ನಿರೀಕ್ಷಿಸಲಾಗುತ್ತಿದೆ.
ಮೆಕ್ಕೆಜೋಳದ ಪ್ರಾದೇಶಿಕ ಕೇಂದ್ರವು ದೇಶದಲ್ಲಿ ಮೆಕ್ಕೆಜೋಳದ ಉತ್ಪಾದನೆಯಲ್ಲಿ ನವೀನ ಸಂಶೋಧನೆ ಮೂಲಕ ಸುಧಾರಣೆಯನ್ನು ತ್ವರಿತಗೊಳಿಸಲು ಅತ್ಯಗತ್ಯವಾಗಿದೆ. ದೇಶದ ಇಂಧನ ಬೇಡಿಕೆಯನ್ನು ಸರಿದೂಗಿಸಲು ಪೆಟ್ರೋಲ್ನೊಂದಿಗೆ ಎಥೆನಾಲ್ನ 20% ಮಿಶ್ರಣವನ್ನು ಸಾಧ್ಯವಾಗಿಸಲು ಮೆಕ್ಕೆಜೋಳ ಉತ್ಪಾದನೆ ಹೆಚ್ಚಿಸುವುದು ಅತ್ಯಗತ್ಯವಾಗಿದೆ. ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ಮೆಕ್ಕೆಜೋಳ ಬೆಳೆಯುವ ಪ್ರದೇಶವನ್ನು ಹೊಂದಿರುವ ರಾಜ್ಯವಾಗಿದ್ದು, ದೇಶದ ಮೆಕ್ಕೆಜೋಳ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ರಾಜ್ಯದ ಮೆಕ್ಕೆಜೋಳದ ಇಳುವರಿ ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಕಡಿಮೆಯಾಗಿದೆ. ಶಿವಮೊಗ್ಗದಲ್ಲಿ ಈ ಸಂಶೋಧನಾ ಕೇಂದ್ರ ಸ್ಥಾಪನೆಯು ರಾಜ್ಯದ ಸರಾಸರಿ ಇಳುವರಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಹೀಗಾಗಿ ಇದು ರಾಜ್ಯದ ರೈತರಿಗೆ ದೊಡ್ಡ ಮಟ್ಟದಲ್ಲಿ ಪ್ರಯೋಜನವಾಗಲಿದೆ. ಜೊತೆಗೆ ಇದು ದೇಶದ ಇತರ ಭಾಗಗಳ ರೈತರಿಗೂ ಕೂಡಾ ತನ್ನ ಸಂಶೋಧನೆಯ ಮೂಲಕ ನೆರವಾಗಲಿದೆ. ಈ ಹಿನ್ನಲೆಯಲ್ಲಿ ಈ ಕೇಂದ್ರ ಸ್ಥಾಪನೆಗೆ ಅಗತ್ಯವಾದ ಅನುದಾನವನ್ನು ಮಂಜೂರು ಮಾಡಲು ಸಂಸದರು ವಿತ್ತ ಸಚಿವರನ್ನು ಕೋರಿದ್ದಾರೆ.
ಜೊತೆಗೆ, ಈ ದೇಶದ ಪ್ರತಿಷ್ಠಿತ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಪುನರಾರಂಭಕ್ಕೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಂಡಿದ್ದಕ್ಕಾಗಿ ಅವರು ಸಚಿವರನ್ನು ಅಭಿನಂದಿಸಿ, ಧನ್ಯವಾದ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post