ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ತಮಗೆ ಸಲ್ಲುತ್ತಿದ್ದ ಗೌರವಧನವನ್ನೂ ಸಹ ತಮ್ಮ ಸ್ವಂತಕ್ಕೆ ಬಳಸಿಕೊಳ್ಳದೇ ಕಲಾವಿದರಿಗೆ ಗೌರವಧನದ ರೂಪದಲ್ಲಿ ವಿತರಿಸುತ್ತಿದ್ದ ಅಪರೂಪದ ವ್ಯಕ್ತಿ ಪ್ರೊ.ಎಂ.ಎ. ಹೆಗ್ಡೆ ಅವರು ಎಂದು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಹಾಗೂ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಶ್ರೀ ಲಕ್ಷ್ಮೀ ನಾರಾಯಣ ಕಾಶಿ ಹೇಳಿದರು.
ಇತ್ತೀಚಿಗೆ ಅಸ್ತಂಗತರಾದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಂ.ಎ. ಹೆಗ್ಡೆ ಅವರಿಗೆ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಕಾಲದ ಯಕ್ಷಗಾನವನ್ನು ಅಕಾಡೆಮಿಯ ಚೌಕಟ್ಟಿಗೆ ತರುವಲ್ಲಿ ಯಕ್ಷಗಾನ ಅಕಾಡೆಮಿಯ ಮೂಲಕ ಸ್ತುತ್ಯರ್ಹ ಕಾರ್ಯ ದಿ. ಹೆಗ್ಡೆ ಅವರ ಅಧ್ಯಕ್ಷೀಯ ಅವಧಿಯಲ್ಲಿ ಆಗಿದೆ. ಸ್ವತಃ ಯಕ್ಷಗಾನ ಕ್ಷೇತ್ರದಲ್ಲಿ ಪರಣಿತರಾಗಿದ್ದ ಅವರು ಸೃಜನಶೀಲರಾಗಿ ವಿಶಿಷ್ಠ ಯೋಜನೆಗಳನ್ನು ಹಮ್ಮಿಕೊಂಡಿದ್ದರು ಎಂದರು.
ಯಾವುದೇ ಆಲೋಚನೆಗಳನ್ನು ಹತ್ತಾರು ಬಾರಿ ಆಸಕ್ತರೊಂದಿಗೆ ಚರ್ಚಿಸಿ ಅನುಷ್ಠಾನಕ್ಕೆ ತರುತ್ತಿದ್ದರು. ತಮಗೆ ಸಲ್ಲುತ್ತಿದ್ದ ಗೌರವಧನವನ್ನು ಸ್ವಂತಕ್ಕೆ ಬಳಸದೇ ಕಲಾವಿದರಿಗೆ ಸನ್ಮಾನದ ರೂಪದಲ್ಲಿ ವಿತರಿಸುತ್ತಿದ್ದರು. ಇಂತಹ ಅಪರೂಪದ ವ್ಯಕ್ತಿಯ ನಿಧನ ಯಕ್ಷರಂಗಕ್ಕೆ ತುಂಬಲಾರದ ನಷ್ಟ ಎಂದು ಕಂಬನಿ ಮಿಡಿದರು.
ಹೆಗ್ಡೆ ಅವರು ಹಲವು ಸಾಹಿತ್ಯಕ ಕೃತಿಗಳನ್ನು ರಚಿಸಿದ್ದಾರೆ. ಅದರಲ್ಲಂತೂ ಅನುವಾದಿತ ’ಶಬ್ದ ಮತ್ತು ಜಗತ್ತು ಕೃತಿಯು ಅವರ ವಿದ್ವತ್ತಿಗೆ ಸಾಕ್ಷಿಯಾಗಿದೆ ಎಂದರು.
ವಿಕಾಸ ಶಾಲೆಯ ಆವರಣದಲ್ಲಿ ಫ್ರೊ.ಎಂ.ಎ. ಹೆಗ್ಡೆ ಅವರ ಅಭಿಮಾನಿಗಳು ಏರ್ಪಡಿಸಿದ್ದರು. ಸಹ್ಯಾದ್ರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಶುಭಾ ಮರವಂತೆ ಅವರು ಹೆಗ್ಡೆ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಸರ್ವಶ್ರೀ ಬಿ.ಎಸ್. ಕಾಮತ್ (ಬಾಬಣ್ಣ) ಮತ್ತು ಯಕ್ಷಗುರು ಈಗಿನಬೈಲು ಪರಮೇಶ್ವರ ಹೆಗ್ಡೆ ಉಪಸ್ಥಿತರಿದ್ದರು. ಕಿರಣ್ ಪೈ ನಿರೂಪಿಸಿ, ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















