ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ವಿಐಎಸ್’ಎಲ್ ಕಾರ್ಮಿಕ ವಸತಿಗೃಹಗಳಲ್ಲಿ ವಾಸವಿಸರುವ ನಿವೃತ್ತ ಕಾರ್ಮಿಕರು ವಸತಿ ಗೃಹಗಳನ್ನು ಖಾಲಿ ಮಾಡುವಂತೆ ಆಡಳಿತ ಮಂಡಳಿ ನೋಟಿಸ್ ನೀಡುತ್ತಿದೆ ಎಂಬ ವದಂತಿ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಸದರಿ ವಸತಿಗೃಹದಲ್ಲಿರುವವರ ಬಾಡಿಗೆ ಅಥವಾ ಲೀಸ್ ಅವಧಿ ಪೂರ್ಣಗೊಳ್ಳುವಂತಿದ್ದರೆ ಅದರ ನವೀಕರಣಕ್ಕಾಗಿ ನೋಟೀಸ್ ನೀಡಲಾಗುತ್ತಿದೆಯೇ ಹೊರತು ಖಾಲಿ ಮಾಡಿಸಲು ಅಲ್ಲ. ಈ ಕುರಿತಂತೆ ನಾನು ಕಾರ್ಖಾನೆಯ ಆಡಳಿತ ಮಂಡಳಿಯವರೊಂದಿಗೆ ಮಾತನಾಡಿದ್ದೇನೆ. ಯಾರೂ ತಪ್ಪು ತಿಳುವಳಿಕೆ ಹೊಂದುವುದು ಬೇಡ. ಕುಡಿಯುವ ನೀರಿನ ಸಮಸ್ಯೆಯನ್ನೂ ಸಹ ಅಧಿಕಾರಿಗಳು ಬಗೆಹರಿಸುವಂತೆ ಸೂಚಿಸಿದ್ದೇನೆ ಎಂದರು.
ವಸತಿಗೃಹದ ಬಾಡಿಗೆ ಅವಧಿಯನ್ನು 11 ತಿಂಗಳಿಗೆ ನವೀಕರಿಸಬೇಕಾದದ್ದು ಸಹಜ. ಅದನ್ನು 33 ತಿಂಗಳಿಗೆ ಹೆಚ್ಚಿಸಲು ಅವಕಾಶವಿಲ್ಲ, ಒಂದೊಮ್ಮೆ ಕಾರ್ಖಾನೆಯನ್ನು ಖಾಸಗಿಯವರು ನಡೆಸಲು ಮುಂದೆ ಬಂದರೆ ಅವರಿಗೆ ಅವುಗಳನ್ನು ಹಸ್ತಾಂತರಿಸಬೇಕಾಗುತ್ತದೆ. ವಸತಿಗೃಹದ ಬಾಡಿಗೆಯನ್ನು 5-6 ವರ್ಷಗಳ ಕಾಲ ಏರಿಸದಂತೆ ಮಾತಾಡಿದ್ದು ಆ ಬಗ್ಗೆ ಗಾಬರಿ ಬೇಡ, ಮನೆಗಳಿಗೆ ಡೆಪಾಸಿಟ್ ಹಣವನ್ನು ಏಕರೂಪವಾಗಿ ಮಾಡದಂತೆ ತಿಳಿಸಿದ್ದು ಒಂದು ಬೆಡ್ ರೂಂ ಇರುವ ಮನೆಗೆ 2 ಲಕ್ಷ, ಎರಡು ಬೆಡ್ ರೂಂ ಇರುವ ಮನೆಗೆ 3 ಲಕ್ಷ ಹಾಗೂ ಅಧಿಕಾರಿಗಳ ನಿವಾಸಕ್ಕೆ 5 ಲಕ್ಷ ನಿಗದಿ ಪಡಿಸಲಾಗುವುದು ಎಂದರು.
ಎಂಪಿಎಂ ಕೊಳಚೆ ಬಡಾವಣೆ
ಎಂಪಿಎಂ ಪ್ರದೇಶದಲ್ಲಿನ ವಸತಿಗೃಹಗಳಿರುವ ಪ್ರದೇಶದಲ್ಲಿ ಮೂರು ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರವನ್ನೂ ಸಹ ನೀಡಲಾಗಿದ್ದು ಈಗ ಎಂಪಿಎಂ ಕಾರ್ಖಾನೆ ವಸತಿಗೃಹ ತೆರವಿಗೆ ಮುಂದಾದರೆ ಕೊಳಚೆ ಪ್ರದೇಶದ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದರು, ಈ ಬಗ್ಗೆ ನಾನು ಗಮನಹರಿಸಿ ಆ ಕೊಳಚೆ ಪ್ರದೇಶದ ನಿವಾಸಿಗಳಿಗೆ ತೊಂದರೆಯಾಗದ ರೀತಿ ಯಾವುದೇ ರೀತಿ ಕ್ರಮ ಕೈಗೊಳ್ಳಬೇಕೆಂದು ಅಲ್ಲಿನ ಅಧಿಕಾರಿಗಳೊಂದಿಗೆ ಮಾತನಾಡುವ ಭರವಸೆ ನೀಡಿದರು.
ಗುತ್ತಿಗೆ ಕಾರ್ಮಿಕರು
ವಿಐಎಸ್‌ಎಲ್ ಕಾರ್ಖಾನೆ ಖಾಸಗಿಯವರು ವಹಿಸಿಕೊಂಡರೆ ಈಗ ಕಾರ್ಖಾನೆಯಲ್ಲಿರುವ ಗುತ್ತಿಗೆ ಕಾರ್ಮಿಕರ ಕೆಲಸಕ್ಕೆ ಧಕ್ಕೆಯಾಗದ ರೀತಿ ಅಲ್ಲಿ ಅವರಿಗೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ವ್ಯವಸ್ಥೆ ಮಾಡಬೇಕೆಂದು ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು ಸಂಸದರಿಗೆ ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಪರಿಸ್ಥಿತಿ ನಮಗೆ ಚೆನ್ನಾಗಿ ಅರಿವಿದೆ. ಇಲ್ಲಿನ ಗುತ್ತಿಗೆ ಕಾರ್ಮಿಕರನ್ನು ಬೇರೆಯವರ ರೀತಿ ನೋಡಲು ಸಾಧ್ಯವಿಲ್ಲ, ನಿಮ್ಮ ಬೇಡಿಕೆ ಈಡೇರಿಕೆ ಬಗ್ಗೆ ನಾನು ಖಂಡಿತ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲಾ ಕಾರ್ಯದರ್ಶಿ ಧರ್ಮಪ್ರಸಾದ್, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಸೂಡಾ ಸದಸ್ಯ ರಾಮಲಿಂಗಯ್ಯ ಎಂಐಎಂಎಸ್ ಸದಸ್ಯ ರಮೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಪ್ರಭಾಕರ್, ಮುಖಂಡರಾದ ಮಂಜುನಾಥ್ ಕದಿರೇಶ್, ಆನಂದಕುಮಾರ್, ಮಂಗೋಟೆ ರುದ್ರೇಶ್, ಹನುಮಂತ ನಾಯ್ಕ, ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post