ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ವಿಐಎಸ್’ಎಲ್ ಕ್ವಾಟ್ರಸ್ ಮನೆಗಳಿಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಪೂರೈಕೆಗೆ ಸಂಬಂಧಿಸಿದಂತೆ ನಡೆಯುತ್ತಿದ್ದ ಪ್ರತಿಭಟನೆ ಪರವಾಗಿ ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ಖಡಕ್ ಮಾತಿಗೆ ವಿಐಎಸ್’ಎಲ್ ಹಿರಿಯ ಅಧಿಕಾರಿಗಳು ಅಕ್ಷರಶಃ ತತ್ತರಗೊಂಡ ಘಟನೆ ಇಂದು ನಡೆದಿದೆ.
ವಿಐಎಸ್’ಎಲ್ ಕಾರ್ಖಾನೆ ನಿವೃತ್ತ ನೌಕರರ ಕ್ವಾಟ್ರಸ್ ಮನೆಗಳ ಬಾಡಿಗೆಯನ್ನು ಶೇ.100ರಷ್ಟು ಏರಿಕೆ ಮಾಡಿದ್ದು ಹಾಗೂ ಈ ಹಿಂದೆ ಇದ್ದ ನಿಯಮವನ್ನು ಬದಲಿಸಿ ಪ್ರತಿದಿನ ಎರಡು ಬಾರಿಗೆ ಬದಲಾಗಿ ಒಂದೇ ಬಾರಿ ನೀರು ಬಿಡಲಾಗುತ್ತಿದೆ. ಅಲ್ಲದೇ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿಲ್ಲ ಎಂದು ಆರೋಪಿಸಿ ನೂರಾರು ನಿವಾಸಿಗಳು ವಿಐಎಸ್’ಎಲ್ ನಗರಾಡಳಿತ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರ ಪರವಾಗಿ ಮಾತುಕತೆ ನಡೆಸಿದ ಶಾಸಕ ಸಂಗಮೇಶ್ವರ್ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಭಾರೀ ವಾಗ್ವಾದ
ನಗರಾಡಳಿತ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಸುಮಾರು 3 ಗಂಟೆಗೂ ಅಧಿಕ ಕಾಲ ಭಾರೀ ವಾಗ್ವಾದ ನಡೆಯಿತು.
ಆರು ವರ್ಷಗಳ ಕಾಲ ಬಾಡಿಗೆಯನ್ನು ಏರಿಕೆ ಮಾಡುವಂತಿಲ್ಲ. ಈ ಅವಧಿಯಲ್ಲಿ ಒಂದು ವರ್ಷ ಈಗಾಗಲೇ ಕಳೆದು ಹೋಗಿರುವ ಹಿನ್ನೆಲೆಯಲ್ಲಿ ಇಂದಿನಿಂದ ಮುಂದಿನ 5 ವರ್ಷಗಳ ಕಾಲ ಬಾಡಿಗೆ ಹೆಚ್ಚಿಸುವಂತಿಲ್ಲ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದು, ಇದನ್ನು ಲಿಖಿತ ರೂಪದಲ್ಲಿ ನೀಡುವುದಾಗಿ ಅಧಿಕಾರಿಗಳೂ ಸಹ ಒಪ್ಪಿಕೊಂಡಿದ್ದಾರೆ.
ಇನ್ನು, ಈ ಹಿಂದೆ ಇದ್ದ ನಿಯಮವನ್ನು ಬದಲಾವಣೆ ಮಾಡಿ ದಿನಕ್ಕೆ ಎರಡರ ಬದಲಾಗಿ ಒಂದೇ ಬಾರಿ ಕುಡಿಯುವ ನೀರು ಬಿಡುತ್ತಿರುವ ಕ್ರಮಕ್ಕೆ ಶಾಸಕರು ಕೆಂಡಾಮಂಡಲರಾದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೂಲಭೂತ ಸೌಕರ್ಯಗಳ ಕಾನೂನಿನಂತೆ ಜನಕ್ಕೆ ಅಗತ್ಯವಿರುವಷ್ಟು ನೀರು ಪೂರೈಕೆಗೆ ಕತ್ತರಿ ಹಾಕಿರುವ ಕ್ರಮಕ್ಕೆ ಕಿಡಿ ಕಾರಿದರು. ಪ್ರತಿದಿನ ಬೆಳಗ್ಗೆ ಒಂದು ಗಂಟೆ, ಸಂಜೆ ಒಂದು ಗಂಟೆ ಕಡ್ಡಾಯವಾಗಿ ನೀರು ಬಿಡುವ ನಿರ್ಧಾರ ಕೈಗೊಳ್ಳಬೇಕು. ಈ ನಿರ್ಧಾರವನ್ನು ಈಗಲೇ ಪ್ರಕಟಿಸಿ, ಲಿಖಿತ ರೂಪದಲ್ಲಿ ನೀಡಬೇಕು ಪಟ್ಟು ಹಿಡಿದರು.
ಆದರೆ, ಇದಕ್ಕೆ ಒಪ್ಪದ ವಿಐಎಸ್’ಎಲ್ ಇಡಿ ಸತ್ಯನಾರಾಯಣ್, ಪೈಪ್ ಲೈನ್ ಸೇರಿದಂತೆ ಈ ಸಂಬಂಧಿತ ಸಂಪೂರ್ಣ ಪರಿವೀಕ್ಷಣೆ ನಡೆಸಿ ಆನಂತರ ನಿರ್ಧಾರ ತಿಳಿಸುತ್ತೇವೆ ಎಂದರು. ಆದರೆ, ಇದಕ್ಕೆ ಒಪ್ಪದ ಶಾಸಕರು ಜನರೇನು ಕಂಪೆನಿಯ ಆಸ್ತಿ ಕೇಳುತ್ತಿಲ್ಲ. ಕುಡಿಯುವ ನೀರು ಪೂರೈಕೆ ವಿಚಾರದಲ್ಲಿ ಈ ರೀತಿ ಉಡಾಫೆ ಮಾಡುವ ನಿಮ್ಮ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ. ಈಗಿಂದೀಗಲೇ ನಿರ್ಧಾರ ಪ್ರಕಟಿಸಿ ಎಂದು ಪಟ್ಟು ಹಿಡಿದರು.
ಆನಂತರ, ಒಂದು ವಾರಗಳ ಅವಧಿಯ ಒಳಗಾಗಿ ಎಲ್ಲ ರೀತಿಯ ಪರಿವೀಕ್ಷಣೆ ನಡೆಸಿ, ದಿನಕ್ಕೆ ಎರಡು ಬಾರಿ ನೀರು ಬಿಡುವ ಕುರಿತಾಗಿ ನಿರ್ಧಾರ ಪ್ರಕಟಿಸಲು ಒಪ್ಪಿಗೆ ಸೂಚಿಸಲಾಯಿತು.
ಒಂದು ವಾರದ ಗುಡುವು
ಸಭೆಯ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಬೆಳಗ್ಗೆ ಒಂದು ಗಂಟೆ, ಸಂಜೆ ಒಂದು ಗಂಟೆ ನೀರು ಕೊಡಬೇಕು ಎಂಬ ಬೇಡಿಕೆಗೆ ಇಂದಿನಿಂದ ಒಂದು ವಾರದ ಅವಧಿ ಕೊಟ್ಟಿದ್ದೇವೆ. ಒಂದು ವಾರದ ಒಳಗಾಗಿ ನೀರು ಬಿಡುವ ನಿರ್ಧಾರ ಕೈಗೊಳ್ಳದೇ ಇದ್ದಲ್ಲಿ ಇಡಿ ಸೇರಿದಂತೆ ಅಧಿಕಾರಿಗಳನ್ನು ಕಚೇರಿಯಲ್ಲೇ ಕೂಡಿ ಹಾಕಿ, ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನು, ಆರು ವರ್ಷಗಳ ಕಾಲ ಬಾಡಿಗೆಯನ್ನು ಏರಿಕೆ ಮಾಡದಂತೆ ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದ್ದು, ಈಗಾಗಲೇ ಒಂದು ವರ್ಷ ಮುಕ್ತಾಯವಾಗಿದೆ. ಹೀಗಾಗಿ, ಇಂದಿನಿಂದ ಮುಂದಿನ ಐದು ವರ್ಷಗಳ ಕಾಲ ಏರಿಕೆ ಮಾಡದಂತೆ ಕೈಗೊಳ್ಳಲಾಗಿರುವ ನಿರ್ಧಾರವನ್ನು ಲಿಖಿತ ರೂಪದಲ್ಲಿ ಅಧಿಕಾರಿಗಳು ನೀಡಲಿದ್ದಾರೆ. ಯಾವುದೇ ಕಾರಣಕ್ಕೂ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ಶಾಸಕರ ಸಭೆಯ ಹಾಗೂ ಅವರ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ. ನಿವಾಸಿಗಳ ಪ್ರತಿಭಟನೆ ವಿಚಾರ ತಿಳಿದು ತತಕ್ಷಣವೇ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಪರವಾಗಿ ಸಭೆ ನಡೆಸಿ, ವಿಚಾರವನ್ನು ಬಹುತೇಕ ಯಶಸ್ವಿಗೊಳಿಸಿದ ಶಾಸಕರನ್ನು ಗೌರವಿಸಿ, ಪ್ರಶಂಸಿಸಲಾಯಿತು.
ಇಂದು ಮುಂಜಾನೆಯಿಂದ ನಗರಾಡಳಿತ ಕಚೇರಿ ಮುಂಭಾಗದಲ್ಲಿ ನಿವಾಸಿಗಳು ಆರಂಭಿಸಿದ್ದ ಪ್ರತಿಭಟನೆ ಮಧ್ಯಾಹ್ನದ ವೇಳೆಗೆ ಕಾವು ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಶಾಸಕರು ಮೂರು ಗಂಟೆಗೂ ಅಧಿಕ ಕಾಲ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ಪಟ್ಟು ಬಿಡದೇ ಬಹುತೇಕ ಸಕಾರಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಯಶಸ್ವಿಯಾದರು. ಕುಡಿಯುವ ನೀರಿನ ವಿಚಾರದಲ್ಲಿ ಮಾತ್ರ ಅಧಿಕಾರಿಗಳಿಗೆ ನೀಡಿರುವ ಒಂದು ವಾರದ ಗಡುವಿನ ನಂತರ ವಿಚಾರ ಎತ್ತ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post