ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ವಿಐಎಸ್’ಎಲ್’ನ್ನು ಪುನಶ್ಚೇತನ ಮಾಡುತ್ತೇವೆ ಎನ್ನುತ್ತಲೇ ಕಾರ್ಖಾನೆಯನ್ನು ಒಬ್ಬ ವ್ಯಕ್ತಿಗೆ ಮಾರಾಟ ಮಾಡಲು ಮುಂದಾಗಿರುವುದು ಖಂಡನೀಯ ಎಂದು ವಿಐಎಸ್’ಎಲ್ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಎಸ್.ಎನ್. ಬಾಲಕೃಷ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ವಿಐಎಸ್’ಎಲ್ ಕಾರ್ಖಾನೆಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಇದನ್ನು ಪಕ್ಷಾತೀತವಾಗಿ ಖಂಡಿಸುತ್ತಿದ್ದು, ಇದರ ವಿರುದ್ಧ ಭದ್ರಾವತಿ ಸಮಸ್ತ ಜನತೆ ಪರವಾಗಿ ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದರು.
2015ರಲ್ಲಿ ಕೇಂದ್ರ ಉಕ್ಕು ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಭದ್ರಾವತಿಯ ಕಾರ್ಖಾನೆಗೆ ಭೇಟಿ ನೀಡಿ ಕಾರ್ಖಾನೆಯನ್ನು ಸೈಲ್ ವತಿಯಿಂದ ಅಭಿವೃದ್ಧಿಗಾಗಿ 10 ಸಾವಿರ ಕೋಟಿ ರೂ. ತೊಡಗಿಸುವುದಾಗಿ ಭರವಸೆ ನೀಡಿದ್ದರು. ಆನಂತರ ಸಚಿವರಾಗಿದ್ದ ಬೀರೇಂದ್ರ ಸಿಂಗ್ ಅವರು ಭೇಟಿ ನೀಡಿ 6 ಸಾವಿರ ರೂ. ತೊಡಗಿಸುವುದಾಗಿ ಹೇಳಿದ್ದರು ಎಂದರು.
2016ರಲ್ಲಿ ಸಂಸದರಾಗಿದ್ದ ಬಿ.ಎಸ್. ಯಡಿಯೂರಪ್ಪನವರು ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಬಿಡುವುದಿಲ್ಲ. ರಾಜ್ಯ ಸರ್ಕಾರ ಅಗತ್ಯವಾಗಿರುವ ಗಣಿಯನ್ನು ಮಂಜೂರು ಮಾಡಿದರೆ, ಕೇಂದ್ರ ಸರ್ಕಾರದಿಂದ ಬಂಡವಾಳ ಹೂಡಿ ಮುನ್ನಡೆಸುವುದಾಗಿ ಹೇಳಿದ್ದರು. ಸಿದ್ದರಾಮಯ್ಯನವರ ರಾಜ್ಯ ಸರ್ಕಾರ ಸಂಡೂರು ತಾಲೂಕಿನಲ್ಲಿ 140 ಎಕರೆ ಗಣಿ ಮಂಜೂರು ಮಾಡಿತ್ತು. ಆದರೂ ಸಹ ಇಂದು ಕಾರ್ಖಾನೆಯನ್ನು ಖಾಸಗಿಯವರಿಗೆ ಮಾರಲು ಹೊರಟಿದ್ದಾರೆ ಎಂದು ಕಿಡಿ ಕಾರಿದರು.
ಪ್ರಮುಖ ಬೇಡಿಕೆಗಳೇನು? ವಿಐಎಸ್’ಎಲ್ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಬಾರದು ವಿಐಎಸ್’ಎಲ್ ಗುತ್ತಿಗೆ ಕಾರ್ಮಿಕರಿಗೆ 26 ದಿನ ಕೆಲಸ ಕೊಡಬೇಕು ವಿಐಎಸ್’ಎಲ್ ನಿವೃತ್ತ ಕಾರ್ಮಿಕರಿಗೆ ವಿತರಿಸಿರುವ ಮನೆಗಳನ್ನು ಮುಂದುವರೆಸಬೇಕು
ಭದ್ರಾವತಿ ಜನತೆಗೆ ನೀಡಿದ್ದ ವಾಗ್ದಾನವನ್ನು ಇಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ಮರೆತು, ಖಾಸಗಿಯವರಿಗೆ ಮಾರಾಟ ಮಾಡಿ ಅಭಿವೃದ್ಧಿಪಡಿಸುವುದಾಗಿ ವರಸೆ ಬದಲಿಸಿರುವುದು ಖಂಡನೀಯ ಎಂದರು.
ಖಾಸಗೀಕರಣದಿಂದ ಕಾರ್ಖಾನೆ ಶಾಶ್ವತವಾಗಿ ನಶಿಸಿಹೋಗಲಿದ್ದು, ಇದನ್ನೇ ನಂಬಿರುವ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಉದ್ಯೋಗ ಕಳೆದುಕೊಂಡು, ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಖಾನೆಯ ನಗರ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಉಳಿಕೆಯಾಗಿದ್ದ ವಸತಿಗೃಹಗಳನ್ನು ನಿವೃತ್ತ ಕಾರ್ಮಿಕರಿಗೆ ವಿತರಣೆ ಮಾಡಿದ್ದು ಇಂದು ಖಾಸಗೀಕರಣದ ನೆಪಹೇಳಿ, ಮನೆ ಖಾಲಿ ಮಾಡಿಸಿ ಎಲ್ಲರನ್ನೂ ಬೀದಿಪಾಲು ಮಾಡಲು ಹೊರಟಿದ್ದಾರೆ ಎಂದು ದೂರಿದರು.
ಈ ಎಲ್ಲ ಬೆಳವಣಿಗೆಗಳಿಂದ ಭದ್ರಾವತಿ ನಗರಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಿ, ಇದರ ವಿರುದ್ಧ ಪಕ್ಷಾತೀತವಾಗಿ ಹೋರಾಡಲು ನಿರ್ಧರಿಸಲಾಗಿದ್ದು, ನ.29ರಂದು ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಭೇಟಿಯಾಗಿ ಎಚ್ಚರಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಜೆ. ಜಗದೀಶ್ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post