ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಸಹವಾಸ ದೋಷದಿಂದ ದುಶ್ಚಟ ಕಲಿತವರನ್ನು ಅದರಿಂದ ಹೊರಕ್ಕೆ ತಂದು ಹೊಸ ಜೀವನ ರೂಢಿಸಿಕೊಳ್ಳುವ ಮಹತ್ ಕಾರ್ಯ ಮಾಡುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಡಿಯ ವಿಶ್ವಕ್ಕೇ ಮಾದರಿಯಾದುದು ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಮುಖಂಡ ಕರುಣಾಮೂರ್ತಿ ಅಭಿಪ್ರಾಯಪಟ್ಟರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಗಾಂಧಿ ಸ್ಮೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಷ್ಟೋ ಹಂತದಲ್ಲಿ ಜನರನ್ನು ಸರಿದಾರಿಗೆ ತರುವಲ್ಲಿ ಸರ್ಕಾರಗಳು ಕೈಚೆಲ್ಲಿಬಿಡುತ್ತವೆ. ಆದರೆ, ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗಡೆ ಅವರ ಮಾರ್ಗದರ್ಶನದಲ್ಲಿ ನಿರಂತರವಾಗಿ ನಡೆಸುತ್ತಿರುವ ಹಲವು ಕಾರ್ಯಕ್ರಮಗಳು ದೇಶವನ್ನು ಕಟ್ಟುವಲ್ಲಿ ಮಹತ್ವದ ಕೊಡುಗೆ ನೀಡುತ್ತಿವೆ ಎಂದರು.
ಬ್ರಿಟೀಷರ ಆಳ್ವಿಕೆಯಿಂದ ದೇಶವನ್ನು ಮುಕ್ತಗೊಳಿಸಿದ ಮಹಾತ್ಮ ಗಾಂಧಿ ವಿಶ್ವಕ್ಕೇ ಮಾದರಿ. ಗಾಂಧೀಜಿ ತಮ್ಮ ಜೀವನ ತಾವು ನೋಡಿಕೊಂಡು ಸುಮ್ಮನೆ ಇರಬಹುದಿತ್ತು. ಆದರೆ, ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಮಹಾತ್ಮರಾದರು. ಮದ್ಯ ಮುಕ್ತ ದೇಶವಾಗಬೇಕು ಎಂದು ಗಾಂಧೀಜಿ ಕಂಡ ಕನಸನ್ನು ಪೂಜ್ಯ ವೀರೇಂದ್ರ ಹೆಗಡೆ ಅವರು ನನಸು ಮಾಡುತ್ತಾ ಅಪ್ರಮತಿಮ ದೇಶ ಸೇವೆ ಮಾಡುತ್ತಿದ್ದಾರೆ ಎಂದರು.
ಧರ್ಮಸ್ಥಳ ಮಂಜುನಾಥ ಸ್ವಾಮಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಮದ್ಯ ವರ್ಜನ ಶಿಬಿರದಲ್ಲಿ ಪಾಲ್ಗೊಂಡು ದುಶ್ಚಟ ತ್ಯಜಿಸಿ, ಹೊಸ ಜೀವನ ಸಾಗಿಸುತ್ತಿರುವ ಹಲವಾರು ಸಾರ್ವಜನಿಕರ ತಮ್ಮ ಅಭಿಪ್ರಾಯ ಹಂಚಿಕೊಂಡರು.
ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಆಜಾ ನಾಯ್ಕ್ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಆನಂದ ಕುಮಾರ್, ಪ್ರಮುಖರಾದ ಗೀತಾ, ಪಾಲಾಕ್ಷಪ್ಪ, ಜಯರಾಂ ಗೊಂಧಿ, ಭೈರಪ್ಪ, ರಾಜಣ್ಣ ಮಾತನಾಡಿದರು. ವರ್ಷ ಚೇತನ್ ಪ್ರಾರ್ಥಿಸಿ, ರುದ್ರೇಶ್ ಸ್ವಾಗತಿಸಿದರು. ಗೋವಿಂದಪ್ಪ ನಿರೂಪಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ಜನಜಾಗೃತಿ ವೇದಿಕೆ ಹಾಗೂ ನವಜೀವನ ಸಮಿತಿ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post