ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕುಂಭದ್ರೋಣ ಮಳೆಯ ಪರಿಣಾಮ ಹಳೇನಗರದ ಎನ್’ಎಸ್’ಟಿ ರಸ್ತೆಯ ಹಲವು ಮನೆಗಳಿಗೆ ನಿನ್ನೆ ನೀರು ನುಗ್ಗಿದ್ದ ಹಿನ್ನೆಲೆಯಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುವಂತೆ ಸ್ಥಳೀಯರು ನಗರಸಭೆ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ಶ್ರೀರಾಮಸೇನೆ ಮೂಲಕ ಆಯುಕ್ತರಿಗೆ ಮನವಿ ಸಲ್ಲಿಸಿದ ಸ್ಥಳೀಯ ನಿವಾಸಿಗಳು ಪ್ರತೀವರ್ಷವೂ ಸಹ ಭಾರೀ ಮಳೆ ಸುರಿದಾಗ ಭೂತನಗುಡಿ, ಬಸವೇಶ್ವರ ವೃತ್ತದ ಬಳಿ ಮಳೆ ನೀರು ಈ ರೀತಿ ಅವಾಂತರ ಸೃಷ್ಠಿಸುತ್ತದೆ ಎಂದು ಸಮಸ್ಯೆಯನ್ನು ವಿವರಿಸಿದ್ದಾರೆ.
ಈವರೆಗೆ ನಗರಸಭೆಯ ಯಾವುದೇ ಅಧಿಕಾರಿಗಳು ಸರಿಯಾದ ಕ್ರಮಕೈಗೊಂಡು ಸಮಸ್ಯೆ ಬಗೆಹರಿಸುವತ್ತ ಗಮಹರಿಸಿಲ್ಲ. ಪರಿಣಾಮವಾಗಿ ಭಾರೀ ಮಳೆ ಸುರಿದ ವೇಳೆ ಸ್ಥಳೀಯರು ಪರದಾಡುವಂತಾಗಿದೆ. ಆದ್ದರಿಂದ ಮಳೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿದುಹೋಗುಂತೆ, ಮನೆಗಳಿಗೆ ನೀರು ನುಗ್ಗದ ರೀತಿ ನಗರಸಭೆ ವತಿಯಿಂದ ಶಾಶ್ವತ ಪರಿಹಾರ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಇನ್ನು, ಇಲ್ಲಿನ ನಿವಾಸಿಗಳ ಪ್ರಕಾರ, ಚರಂಡಿಯ ನೀರು ಹಿಮ್ಮುಖವಾಗಿ ಹರಿದಿದ್ದೇ ಮನೆಯೊಳಕ್ಕೆ ನೀರು ನುಗ್ಗಲು ಕಾರಣವಾಗಿದ್ದು, ಮಳೆಗಾಲದ ಆರಂಭದಲ್ಲಿಯೂ ಸಹ ರೀತಿಯಾಗಿತ್ತು. ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿರುವುದೇ ಇದಕ್ಕೆಲ್ಲ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post