ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಇಡಿಯ ರಾಜ್ಯದಲ್ಲೇ ಈ ಬಾರಿಯ ದಸರಾವನ್ನು ಜಾಗೃತಿ ಹಬ್ಬವನ್ನಾಗಿ ಆಚರಿಸುತ್ತಿರುವ ನಗರಸಭೆ ಆಡಳಿತ ಇಂದು ಅಪರೂಪದ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು.
ಹೌದು… ವಿವಿಧ ಹಂತದಲ್ಲಿ ಸಮಾಜದಲ್ಲಿ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸಿದ ನೂರಾರು ಮಂದಿಯನ್ನು ಒಂದೇ ವೇದಿಕೆಯಲ್ಲಿ ಇಂದು ಸನ್ಮಾನಿಸುವ ಮೂಲಕ ಮಾದರಿ ಕಾರ್ಯಕ್ರಮವೊಂದನ್ನು ನಡೆಸಿದ ಹೆಗ್ಗಳಿಕೆಯನ್ನು ನಗರಸಭೆ ಮುಡಿಗೇರಿಸಿಕೊಂಡಿದೆ.
ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಕೆ. ಸಂಗಮೇಶ್ವರ್, ಕೊರೋನಾ ಸಂದರ್ಭದಲ್ಲಿ ಸಂಘ ಸಂಸ್ಥೆಗಳು, ನಗರಸಭೆ, ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಗಳು ಸೇವೆ ಸಲ್ಲಿಸಿದ ರೀತಿ ನಿಜಕ್ಕೂ ಶ್ಲಾಘನೀಯ ಎಂದರು.
ಕೊರೋನಾಗೆ ಯಾರೂ ಹೆದರುವ ಅಗತ್ಯವಿಲ್ಲ. ನಾನೂ ಅದನ್ನು ಅನುಭವಿಸಿ ಬಂದಿರುವ ಹಿನ್ನೆಲೆಯಲ್ಲಿ ಹೇಳುತ್ತೇನೆ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಯಾವುದೇ ಅಪಾಯವಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡುವಂತೆ ಕೋರಿಕೊಂಡಾಗ ಆಲೆಮನೆ ಸಂಘದಿಂದ 10 ಲಕ್ಷ ರೂ. ಮೌಲ್ಯದ ಕಿಟ್’ಗಳನ್ನು ನೀಡಿದ್ದು ಶ್ಲಾಘನೀಯ ಎಂದರು.
ಉಪವಿಭಾಗಾಧಿಕಾರಿ ಪ್ರಕಾಶ್ ಮಾತನಾಡಿ, ಲಾಕ್ ಡೌನ್ ವೇಳೆಯಲ್ಲಿ ಭದ್ರಾವತಿ ಜನರು ಕಷ್ಟದಲ್ಲಿದ್ದ ಮಂದಿಗೆ ಸ್ಪಂದಿಸಿದ ರೀತಿ ನಿಜಕ್ಕೂ ಮಾದರಿಯಾದುದು. ಯಾವುದೇ ಬಡಾವಣೆಯಲ್ಲಿ ಆಹಾರ ಕೊರತೆ ಉಂಟಾಗಿದೆ ಎಂದು ಸಂಘ ಸಂಸ್ಥೆಗಳಿಗೆ ತಿಳಿಸಿದ ವೇಳೆ ತತಕ್ಷಣವೇ ಆಹಾರ ತಲುಪಿಸುವ ಕಾರ್ಯ ಮಾಡಿದ್ದು ಶ್ಲಾಘನೀಯ ಎಂದರು.
ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಹಿತವನ್ನೂ ಸಹ ಗಮನಿಸದೇ ಸೇವೆ ಸಲ್ಲಿಸಿದ ನಗರಸಭೆ ಆಯುಕ್ತ ಮನೋಹರ್, ಆರ್’ಒ ರಾಜ್’ಕುಮಾರ್, ಲೆಕ್ಕಾಧಿಕಾರಿ ಮೊಹಮದ್ ಅಲಿ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು.
ದಸರಾ ಅಂಗವಾಗಿ ನಗರಸಭೆ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ, ಪಾಲ್ಗೊಂಡವರಿಗೆ ಪ್ರಶಸ್ತಿಪತ್ರವನ್ನು ನೀಡಿ ಗೌರವಿಸಲಾಯಿತು.
ಇಡಿಯ ದಸರಾದ ಎಲ್ಲ ಕಾರ್ಯಕ್ರಮಗಳಲ್ಲಿ ಜವಾಬ್ದಾರಿ ವಹಿಸಿಕೊಂಡು ಎಲ್ಲವನ್ನೂ ಅಚ್ಚುಕಟ್ಟಾಗಿ ಆಯೋಜನೆ ಮಾಡುತ್ತಿರುವ ನಗರದ ಪ್ರಮುಖರಾದ ನರಸಿಂಹಾಚಾರ್ ಹಾಗೂ ರಮಾಕಾಂತ್ ಅವರುಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ನಗರಸಭೆ ಅಧಿಕಾರಿ ಸುಹಾಸಿನಿ ನಿರೂಪಿಸಿ, ಆರ್’ಒ ರಾಜ್’ಕುಮಾರ್ ಸ್ವಾಗತಿಸಿದರು. ನರಸಿಂಹ ಮೂರ್ತಿ ವಂದನಾರ್ಪಣೆ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post