ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊಳೆಗೇರಿಗಳಲ್ಲಿ ವಾಸಿಸುತ್ತಿರುವ ಆಯ್ದ ನೂರು ಜನರಿಗೆ ಮನೆ ನಿರ್ಮಾಣಕ್ಕೆ ಪಾಲಿಕೆ ಪ್ರತಿಪಕ್ಷ ನಾಯಕ ಎಚ್.ಸಿ. ಯೋಗೇಶ್ ಅವರು ನಡೆಸಿದ ಗುದ್ದಲಿ ಪೂಜೆಯಲ್ಲಿ ಪಾಲ್ಗೊಳ್ಳದೇ ಇರುವ ವಿಚಾರದಲ್ಲಿ ಉಪಮೇಯರ್ ಸುರೇಖಾ ಮುರಳೀಧರ್ ಅವರು ಸ್ಪಷ್ಠೀಕರಣ ನೀಡಿದ್ದಾರೆ.
ಮನೆ ನಿರ್ಮಾಣ ಕಾರ್ಯಕ್ರಮದ ಮೊದಲ ಹಂತವಾಗಿ ಎಚ್.ಸಿ. ಯೋಗೇಶ್ ಗುದ್ದಲಿಪೂಜೆ ಮಾಡುವ ಮೂಲಕ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಎಚ್.ಸಿ. ಯೋಗೇಶ್ ಅವರಿಗೆ ಸಹಕಾರ ನೀಡಬಹುದಿತ್ತು, ಆ ಮೂಲಕ ಬಿಜೆಪಿ ದೊಡ್ಡತನ ಮೆರೆಯಬಹುದಿತ್ತು ಎಂದು ಶಿವಮೊಗ್ಗದ ನಾಗರಿಕರೊಬ್ಬರು ಬರೆದ ಲೇಖನವನ್ನು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದಲ್ಲಿ ನಿನ್ನೆ ಪ್ರಕಟಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಪಾಲಿಕೆ ಹಾಗೂ ಬಿಜೆಪಿ ಪರವಾಗಿ ಕಲ್ಪ ನ್ಯೂಸ್ ಜೊತೆಯಲ್ಲಿ ಉಪಮೇಯರ್ ಸುರೇಖಾ ಮುರಳೀಧರ್ ಮಾತನಾಡಿದ ಸ್ಪಷ್ಠೀಕರಣ ನೀಡಿದ್ದಾರೆ.
ಶ್ರೀಯುತ ಯೋಗೀಶ್ ರವರ ಬಗ್ಗೆ ನಮಗೆ ತುಂಬು ಅಭಿಮಾನವಿದೆ. ಆದರೆ ಲೇಖನದಲ್ಲಿ ಪ್ರಸ್ತಾಪಿಸಿದ ಕಾರ್ಯಕ್ರಮದ ಮಾಹಿತಿಯನ್ನು ಅಧಿಕಾರಿಗಳಾಗಲಿ, ಯೋಗೀಶ್ ಅವರಾಗಲಿ ಯಾರಿಗೂ, ಮೇಯರರ್ ಹಾಗೂ ಉಪಮೇಯರ್’ಗೂ ಸಹ ನೀಡಿಲ್ಲ. ಇನ್ನು ಕರೆಯುವುದು ದೂರದ ಮಾತು ಎಂದರು.
ಪ್ರತಿಪಕ್ಷ ಎಂದ ಮಾತ್ರಕ್ಕೆ, ಅವರ ಸಮಾಜಮುಖಿ, ಲೋಕಕಲ್ಯಾಣ ಕಾರ್ಯಕ್ರಮಕ್ಕೆ ಹೋಗದೇ ಇರುವಷ್ಟು ಸಂಕುಚಿತ ಮನೋಭಾವನೆ ನಮ್ಮಲ್ಲಿಲ್ಲ. ಅತ್ಯಂತ ಸುಸಂಸ್ಕೃತ ಪಕ್ಷ, ಕುಟುಂಬದ ಹಿನ್ನೆಲೆಯಿಂದ ಬಂದಿರುವ ನಮಗೆ ಈ ರೀತಿಯ ಯೋಚನೆಗಳು, ಈ ಮನೋಭಾವನೆ ನಮ್ಮಲ್ಲಿಲ್ಲ. ಇರಲಿಕ್ಕೆ ಸಾಧ್ಯವೂ ಇಲ್ಲ. ಈ ಕುರಿತಂತೆ ಶಿವಮೊಗ್ಗದ ನಾಗರಿಕರಿಗೆ ಯಾವುದೇ ರೀತಿಯ ಸಂಶಯ ಬೇಡ. ಸರ್ವ ಜನಾಂಗದ ಶಾಂತಿಯ ತೋಟ ಎಂಬುದನ್ನು ಅಕ್ಷರಶಃ ನಮ್ಮ ಪಕ್ಷ ಹಾಗೂ ಪಾಲಿಕೆಯಲ್ಲಿ ನಮ್ಮ ಅವಧಿಯಲ್ಲಿ ಪಾಲಿಸುತ್ತಾ ಬಂದಿದ್ದೇವೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post