ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಬಾರದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಗಸ್ತು ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ. ಶಾಂತರಾಜು ಅವರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಲೆನಾಡಿನಲ್ಲಿ ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ಅಪರಾಧ ಕೃತ್ಯಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಬೀಟ್ ವ್ಯವಸ್ಥೆಯನ್ನು ವ್ಯವಸ್ಥಿತಗೊಳಿಸಲಾಗಿದೆ. ಒಂಟಿ ಮನೆಗಳಿಗೆ ಪೊಲೀಸರು ಭೇಟಿ ನೀಡಿ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಿ ಮನೆಯಲ್ಲಿರುವವರ ಮಾಹಿತಿಯನ್ನು ಸಂಗ್ರಹಿಸಿ ನಿಗಾ ವಹಿಸಲು ಸೂಚಿಸಲಾಗಿದೆ. ಕಾಲಕಾಲಕ್ಕೆ ಒಂಟಿ ಮನೆಗಳ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಿಸಿ ಟಿವಿ ಮತ್ತು ಅಲರಾಂ ಸಿಸ್ಟಮ್‌ಗಳನ್ನು ಅಳವಡಿಸಿಕೊಳ್ಳಲು ಸೂಚಿಸಿ ಗ್ರಾಮದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ವಾಹನಗಳ ಓಡಾಟದ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದವರು ತಿಳಿಸಿದ್ದಾರೆ.
ಪ್ರತಿ ಹಳ್ಳಿಗಳಿಗೆ ಬೀಟ್ ಸಿಬ್ಬಂದಿಗಳನ್ನು ನಿಯೋಜಿಸಿ ಸೂಚನೆಗಳನ್ನು ನೀಡಿ ಬೀಟ್ ಜಾರಿಗೊಳಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 1125 ಬೀಟುಗಳನ್ನು 6726 ಬಾರಿ ಜಾರಿಗೊಳಿಸಲಾಗಿದೆ. ಬೀಟ್ ಮೀಟಿಂಗ್ ಹಾಗೂ ಮೊಹಲ್ಲಾ ಮೀಟಿಂಗ್ ಸಭೆಗಳನ್ನು ನಡೆಸಿ ಸಾರ್ವಜನಿಕರೊಡನೆ ನಿರಂತರ ಸಂಪರ್ಕ ಸಾಧಿಸಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಅಪರಾಧ ಪ್ರಕರಣಗಳ ಪತ್ತೆಹಚ್ಚುವಲ್ಲಿ ಸೂಕ್ತ ಸಲಹೆ ಸೂಚನೆ ಹಾಗೂ ಸಹಕಾರ ನೀಡುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಅಪರಾಧ ಕೃತ್ಯಗಳ ತನಿಖೆಯಲ್ಲಿ ಪ್ರಗತಿ
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಒಟ್ಟು 34 ಕೊಲೆ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 31 ಪ್ರಕರಣಗಳನ್ನು ಪತ್ತೆಮಾಡಿ ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ವರದಿಯಾದ ಒಟ್ಟು 36ಪ್ರಕರಣಗಳ ಪೈಕಿ 34ಪ್ರಕರಣಗಳಲ್ಲಿ ಆರೋಪಿತರನ್ನು ಪತ್ತೆಮಾಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿ ನ್ಯಾಯಾಲಯದ ವಿಚಾರಣೆಯಲ್ಲಿರುತ್ತದೆ. ಇತ್ತೀಚೆಗೆ ನಡೆದ 2 ಜೋಡಿ ಕೊಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಅಪರಾಧಿಗಳ ಪತ್ತೆಗೆ ಜಾಲ ಬೀಸಲಾಗಿದೆ.
ಡಿಎಸ್’ಪಿ ಸಾಗರ ಉಪವಿಭಾಗ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಕೋಡ್‌ನಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ತನಿಖೆ ಕೈಗೊಳ್ಳಲಾಗಿದೆ. ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹಳೆಇಕ್ಕೇರಿಯಲ್ಲಿ ನಡೆದ ತಾಯಿ ಮತ್ತು ಮಗನ ಜೋಡಿ ಕೊಲೆ ಪ್ರಕರಣವನ್ನು ಡಿಸಿಐಬಿ ಇನ್ಸ್‌ಪೆಕ್ಟರ್ ಸೇರಿದಂತೆ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವು ತನಿಖೆ ಕೈಗೊಂಡಿದ್ದು, ಎರಡೂ ಪ್ರಕರಣಗಳಲ್ಲಿ ನಿರ್ದಿಷ್ಟವಾದ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದು, ಶೀಘ್ರದಲ್ಲಿಯೇ ಆರೋಪಿತರನ್ನು ಬಂಧಿಸಲಾಗುವುದು ಎಂದವರು ತಿಳಿಸಿದ್ದಾರೆ.
ದರೋಡೆ ಪ್ರಕರಣಗಳು
ಕಳೆದ ಸಾಲಿನಲ್ಲಿ 7 ದರೋಡೆ ಪ್ರಕರಣಗಳು ವರದಿಯಾಗಿದ್ದು, 6 ಪ್ರಕರಣಗಳನ್ನು ಯಶಸ್ವಿಯಾಗಿ ಬೇಧಿಸಿ ಆರೋಪಿಗಳನ್ನು ದಸ್ತಗಿರಿ ಮಾಡಿ ಅವರಿಂದ ದರೋಡೆ ಮಾಡಿದ ಮಾಡಿದ ಮಾಲು ಮತ್ತು ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿತರ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ನಡೆದ 07 ಪ್ರಕರಣಗಳ ಪೈಕಿ 05 ಪ್ರಕರಣಗಳನ್ನು ಯಶಸ್ವಿಯಾಗಿ ಬೇಧಿಸಿ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿದೆ. ಇತ್ತೀಚೆಗೆ ನಡೆದ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಮೇಗರವಳ್ಳಿ ಮತ್ತು ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳೂರು ರಸ್ತೆ ಡಕಾಯಿತಿ ಪ್ರಕರಣಗಳಲ್ಲಿ ವಿಶೇಷ ತಂಡವನ್ನು ರಚಿಸಿ ವೈಜ್ಞಾನಿಕ ತನಿಖೆ ಕೈಗೊಂಡಿದ್ದು, ಆರೋಪಿಗಳ ಬಗ್ಗೆ ಸುಳಿವು ಲಭಿಸಿದ್ದು ಅತೀ ಶೀಘ್ರದಲ್ಲಿ ಆರೋಪಿತರನ್ನು ಬಂಧಿಸಲು ಕ್ರಮಕೈಗೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post