ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ 244 ಗ್ರಾಮ ಪಂಚಾಯತ್‌ಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಪಾರದರ್ಶಕವಾಗಿ ಮತ್ತು ಕಟ್ಟುನಿಟ್ಟಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದರು.
ಈ ಕುರಿತಂತೆ ಮಾತನಾಡಿ, ಶಿವಮೊಗ್ಗ ಉಪವಿಭಾಗದ ಶಿವಮೊಗ್ಗ 40 ಗ್ರಾಮ ಪಂಚಾಯತ್, ಭದ್ರಾವತಿ 35 ಮತ್ತು ತೀರ್ಥಹಳ್ಳಿ ತಾಲೂಕಿನ 38 ಗ್ರಾಮ ಪಂಚಾಯತ್‌ಗಳಿಗೆ ಮೊದಲ ಹಂತದಲ್ಲಿ ಡಿಸೆಂಬರ್ 22ರಂದು ಚುನಾವಣೆ ನಡೆಯಲಿದೆ. ಸಾಗರ ಉಪವಿಭಾಗದ ಸಾಗರ 27, ಶಿಕಾರಿಪುರ 39, ಸೊರಬ 35 ಮತ್ತು ಹೊಸನಗರದ 30ಸ್ಥಾನಗಳಿಗೆ ಎರಡನೇ ಹಂತದಲ್ಲಿ ಡಿ.27ರಂದು ಮತದಾನ ನಡೆಯಲಿದೆ ಎಂದರು.
ಜಿಲ್ಲೆಯ 271 ಗ್ರಾಮ ಪಂಚಾಯತ್‌ಗಳ ಪೈಕಿ 244 ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಯಲಿದೆ. ಇನ್ನುಳಿದಂತೆ 7ಗ್ರಾಮ ಪಂಚಾಯತ್‌ಗಳ 5 ವರ್ಷದ ಅಧಿಕಾರಾವಧಿ ಇನ್ನೂ ಪೂರ್ಣಗೊಂಡಿಲ್ಲ. ಕುಂಸಿ, ಪುರದಾಳು, ಕೋಮಾರನಹಳ್ಳಿ, ವೀರಾಪುರ, ಹಾರೋಗೊಪ್ಪ, ತರಲಘಟ್ಟ ಮತ್ತು ಚುರ್ಚಿಗುಂಡಿ ಗ್ರಾಮ ಪಂಚಾಯತ್‌ಗಳ ಅಧಿಕಾರಾವಧಿ ಇನ್ನೂ ಪೂರ್ಣಗೊಂಡಿಲ್ಲ ಎಂದರು.
ಇನ್ನು 20 ಗ್ರಾಮ ಪಂಚಾಯತ್‌ಗಳು ನಗರ ಸ್ಥಳೀಯ ಸಂಸ್ಥೆಗಳಾಗಿ ಪೂರ್ಣ ಅಥವಾ ಭಾಗಶಃ ಪರಿವರ್ತನೆಗೊಂಡಿರುವುದರಿಂದ ಅಲ್ಲಿಯೂ ಚುನಾವಣೆ ಇರುವುದಿಲ್ಲ. ಹೊಳೆಹೊನ್ನೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಹೊಳೆಹೊನ್ನೂರು, ಸಿದ್ಲೀಪುರ, ಹನುಮಂತಾಪುರ ಮತ್ತು ಎಮ್ಮೇಹಟ್ಟಿ, ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯ ತಡಗಣಿ, ಉಡುಗಣಿ, ಸೊರಬ ಪುರಸಭೆ ವ್ಯಾಪ್ತಿಯ ಹಳೆಸೊರಬ, ಕೊಡಕಣಿ, ತವನಂದಿ, ಹೆಚ್ಚೆ ಮತ್ತು ಮುಟುಗುಪ್ಪೆ, ಆನವಟ್ಟಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಆನವಟ್ಟಿ, ಕುಬಟೂರು, ಸಮನಹಳ್ಳಿ, ತಲ್ಲೂರು, ಕಾತುವಳ್ಳಿ, ಅಗಸನಹಳ್ಳಿ, ಎಣ್ಣೆಕೊಪ್ಪ, ತತ್ತೂರು ಮತ್ತು ಗೆಂಡ್ಲ ಪಂಚಾಯತ್‌ಗಳಲ್ಲಿ ಮತದಾನ ನಡೆಯುವುದಿಲ್ಲ ಎಂದರು.
ಚುನಾವಣೆ ನಡೆಯಲಿರುವ 244 ಗ್ರಾಮ ಪಂಚಾಯತ್‌ಗಳಲ್ಲಿ 2609 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 1415 ಮತಗಟ್ಟೆಗಳಿವೆ. ಒಟ್ಟು 812126 ಅರ್ಹ ಮತದಾರರು ಇದ್ದು, ಇವರಲ್ಲಿ 406446 ಪುರುಷ ಹಾಗೂ 405680 ಮಹಿಳಾ ಮತದಾರರು ಇದ್ದಾರೆ. ಶಿವಮೊಗ್ಗ ತಾಲೂಕಿನಲ್ಲಿ 140072 ಮತದಾರರು ಇದ್ದು, ಕಡಿಮೆ ಅಂದರೆ ಹೊಸನಗರದಲ್ಲಿ 92474 ಮತದಾರರು ಇದ್ದಾರೆ. ಚುನಾವಣೆಯನ್ನು ಸುಗಮವಾಗಿ ನಡೆಸಲು 244 ಚುನಾವಣಾಧಿಕಾರಿಗಳು ಹಾಗೂ 244 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಕಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. 1557 ಅಧ್ಯಕ್ಷಾಧಿಕಾರಿಗಳು ಹಾಗೂ 4671 ಮತಗಟ್ಟೆ ಸಿಬ್ಬಂದಿ ಸೇರಿ ಒಟ್ಟು 6228 ಮಂದಿಗೆ ತರಬೇತಿ ನೀಡಲು ಕ್ರಮ ವಹಿಸಲಾಗಿದೆ ಎಂದರು.
ನೀತಿ ಸಂಹಿತೆ ಜಾರಿ
ಚುನಾವಣೆ ನಡೆಯುವ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಡಿಸೆಂಬರ್ 31ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆಯು ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ನಗರಪಾಲಿಕೆ ಮತ್ತು ಮಹಾನಗರ ಪಾಲಿಕೆ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ. ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸಲು ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟಗಳಲ್ಲಿ ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಜಿ. ಅನುರಾಧ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post