ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿವಮೊಗ್ಗ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಯಾಗುತ್ತಿದೆ ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ(ಚೆನ್ನಿ) ಹೇಳಿದ್ದಾರೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದ ಮೂಲಭೂತ ಸೌಕರ್ಯ ಸೇರಿದಂತೆ ಸಮಗ್ರ ಅಭಿವೃದ್ಧಿಯಾಗುತ್ತಿದೆ. ನಗರ ಅಭಿವೃದ್ಧಿಗೆ ಸಂಬಂಧಿಸಿದಂತೆ ಪಾರ್ಕ್, ರಸ್ತೆ, ಕುಡಿಯುವ ನೀರು, ಸೇರಿದಂತೆ ಮೂಲ ಸೌಕರ್ಯದ ವ್ಯವಸ್ಥೆಯನ್ನು ನಗರೋತ್ಥಾನದಲ್ಲಿ ಒತ್ತು ನೀಡಲಾಗಿದೆ. ಪಾಲಿಕೆಯ 29 ಅಭಿವೃದ್ಧಿ ಕಾಮಗಾರಿ ಅನುದಾನಕ್ಕೆ ಕೊರತೆಯಿಂದ ಹಣ ಸ್ಥಗಿತಗೊಂಡಿತ್ತು. ಆದರೆ ಈಗ ಅದೆಲ್ಲದಕ್ಕೂ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಿದ್ದಾರೆ ಎಂದರು.
ಇನ್ನು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಶ್ರಮದಿಂದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ 14 ಇಲಾಖೆಯಿಂದ 130 ಕೋಟಿ ವೆಚ್ಚದಲ್ಲಿ ನಗರ ವ್ಯಾಪ್ತಿಯ 85 ಶಾಲೆಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಸಿದ್ದಾರೆ ಎಂದರು.
ಇನ್ನು, ಸಂಸದ ಬಿ.ವೈ. ರಾಘವೇಂದ್ರ ಅವರ ಶ್ರಮದಿಂದ ವಿಮಾನ ನಿಲ್ದಾಣ, ರಿಂಗ್ ರಸ್ತೆ, ಚತುಷ್ಪಥ ರಸ್ತೆಗಳು, ಮೂರು ರೈಲ್ವೆ ಮೇಲು ಸೇತುವೆ ಸೇರಿದಂತೆ ಸಾಲು ಸಾಲು ಕಾಮಗಾರಿಗಳು ನಡೆಯುತ್ತಿದ್ದು, ಇದು ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗುತ್ತಿರುವುದುಕ್ಕೆ ಸಾಕ್ಷಿಯಾಗಿದೆ ಎಂದರು.
ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ನಗರ ಪ್ರಮುಖರಾದ ಎನ್.ಜೆ. ನಾಗರಾಜ್, ಆಶ್ರಯ ಸಮಿತಿ ಅಧ್ಯಕ್ಷರಾದ ಶಶಿಧರ್, ನಗರ ಬಿಜೆಪಿ ಅಧ್ಯಕ್ಷ ಕೆ. ಜಗದೀಶ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಬಳ್ಳಕೆರೆ, ಮೋಹನ್ ರೆಡ್ಡಿ ಹಾಗೂ ಪಾಲಿಕೆಯ ಎಲ್ಲ ಸದಸ್ಯರುಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post