ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜೆಪಿ ಆಸ್ಪತ್ರೆಯ ಸಂಸ್ಥಾಪಕ ಡಾ.ಜಯಪ್ರಕಾಶ್ ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲಿ ಸಂತಾಪ ಸೂಚಕ ಸಭೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ.ಎಸ್. ನಾಗೇಂದ್ರ, ಜಯಪ್ರಕಾಶ್ ಅವರ ಹಠಾತ್ ನಿಧನ ತೀವ್ರ ನೋವು ತಂದಿದ್ದು, ಶಿವಮೊಗ್ಗ ವೈದ್ಯಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವುಂಟಾಗಿದೆ. ವಿದೇಶಗಳಲ್ಲಿ ಸೇವೆ ಸಲ್ಲಿಸಿ ಹಿಂತಿರುಗಿದ್ದರೂ ಯಾವುದೇ ರೀತಿಯಲ್ಲೂ ಗರ್ವ ಪಡದೇ ಸರಳ ವ್ಯಕ್ತಿತ್ವದ ಮೂಲಕ ಎಲ್ಲರಿಗೂ ಆಪ್ಯಾಯಮಾನವಾಗಿದ್ದರು ಎಂದು ನೆನಪಿಸಿಕೊಂಡರು.
ಕೀಲು-ಮೂಳೆ ವಿಭಾಗದ ಮುಖ್ಯಸ್ಥ ಡಾ.ಹರೀಶ್ ಪೈ ಮಾತನಾಡಿ, ವೈಯಕ್ತಿಕವಾಗಿ ಅತ್ಯಂತ ಸರಳ ಹಾಗೂ ಸಜ್ಜನಿಕಯ ವ್ಯಕ್ತಿತ್ವ ಹೊಂದಿದ್ದ ಅವರು ಕರ್ತವ್ಯ ನಿರ್ವಹಣೆಯಲ್ಲಿ ನಿಷ್ಠೆಯನ್ನು ಮೆರೆದವರು. ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಒಂದು ಕ್ಷಣವೂ ಸಹ ಸುಮ್ಮನೆ ಕುಳಿತುಕೊಳ್ಳದೇ ಸದಾ ಕರ್ತವ್ಯದಲ್ಲೇ ನಿರತರಾಗಿರುತ್ತಿದ್ದ ಅವರ ವ್ಯಕ್ತಿತ್ವ ಮಾದರಿಯಾದುದು ಎಂದರು.
ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ.ಆರ್.ಪಿ. ಪೈ ಮಾತನಾಡಿ, ಕಾಲೇಜು, ಆಸ್ಪತ್ರೆ ಮಾತ್ರವಲ್ಲಿ ಅದಕ್ಕೆ ಮೀರಿ ಹೊರಗೂ ಸಹ ಡಾ.ಜಯಪ್ರಕಾಶ್ ಅವರು ಎಲ್ಲರೊಂದಿಗೂ ಹೊಂದುತ್ತಿದ್ದ ಬಾಂಧವ್ಯ ಅವರ ವ್ಯಕ್ತಿತ್ವವನ್ನು ತೋರಿಸುತ್ತಿತ್ತು. ಹಲವು ವರ್ಷಗಳ ಕಾಲ ವಿದೇಶಗಳಲ್ಲಿ ಸೇವೆ ಸಲ್ಲಿಸಿ ಬಂದಿದ್ದರೂ, ಯಾವುದೇ ರೀತಿಯ ಹಮ್ಮು ಬಿಮ್ಮುಗಳಿಲ್ಲದೇ ಎಲ್ಲರೊಂದಿಗೂ ಬೆರೆತು, ಕೆಲಸ ಮಾಡುತ್ತಿದ್ದರು. ಅಲ್ಲದೇ, ಕಲಿಕೆಯಲ್ಲಿ ಅತೀವ ಆಸಕ್ತಿ ಹೊಂದಿದ್ದ ಅವರ ಕಾರ್ಯಗಳನ್ನು ಯುವ ವೈದ್ಯರು ಅಳವಡಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಪ್ರಾಂಶುಪಾಲ ಡಾ.ಎಸ್.ಎಂ. ಕಟ್ಟಿ, ಸಂಸ್ಥೆಯ ಕಾರ್ಯ ನಿರ್ವಹಕ ನಿರ್ದೇಶಕರಾದ ಡಾ.ಲತಾ ನಾಗೇಂದ್ರ, ಡಾ.ವಿನಯಾ ಶ್ರೀನಿವಾಸ್, ಡಾ.ಪುಷ್ಪಲತಾ ವಿಶ್ವನಾಥ್, ಡಾ. ವಿಶ್ವನಾಥ್ ಉಪಪ್ರಾಂಶುಪಾಲ ಡಾ.ಸಿದ್ದಲಿಂಗಪ್ಪ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post